ಮೈಸೂರು

ನಾಡಿನ ಹಿರಿಯ ಕರ್ನಾಟಕ ಸಂಗೀತ ಕಲಾವಿದ ವಿ. ಟಿ.ಪಿ. ವೈದ್ಯನಾಥನ್ ನಿಧನ

ಮೈಸೂರು,ಮಾ.2:- ನಾಡಿನ ಹಿರಿಯ ಕರ್ನಾಟಕ ಸಂಗೀತ ಕಲಾವಿದ ಹಾಗೂ ಮೈಸೂರು ವಾಸುದೇವಾಚಾರ್ಯ ಪರಂಪರೆಯ ಪ್ರಧಾನ ದೀಪಧಾರಕ ವಿ. ಟಿ.ಪಿ. ವೈದ್ಯನಾಥನ್ ಅವರು  ನಿಧನರಾಗಿದ್ದಾರೆ.

ಅವರಿಗೆ 85 ವರ್ಷ ವಯಸ್ಸಾಗಿತ್ತು. ಕೇರಳದ ತ್ರಿಶ್ಶೂರ್ ಕಡೆಯಿಂದ ಬಂದು ಮೈಸೂರಿನಲ್ಲಿ ನೆಲೆಸಿದ್ದ ಕುಟುಂಬವೊಂದರಲ್ಲಿ 1934ರಲ್ಲಿ ಜನಿಸಿದ ವೈದ್ಯನಾಥನ್ ಅವರು ಬಾಲ್ಯದಿಂದಲೇ ಸಂಗೀತದಲ್ಲಿ ಒಲವು ಹೊಂದಿ ವಾಸುದೇವಾಚಾರ್ಯರ ಶಿಷ್ಯ ಸಂಗೀತ ಚೂಡಾಮಣಿ ಬಿ.ಕೆ. ಪದ್ಮನಾಭರಾಯರ ಶಿಷ್ಯರಾಗಿ ಉನ್ನತಿ ಪಡೆದರು. ಕಾಲೇಜು ಮೆಟ್ಟಿಲು ಹತ್ತುವ ಮೊದಲೇ ಸಂಗೀತ ಕಚೇರಿಗಳನ್ನು ನೀಡಲಾರಂಭಿಸಿದ ಈ ಬಾಲಪ್ರತಿಭೆ, ಆಕಾಶವಾಣಿಯ ಕಲಾವಿದರಾಗಿದ್ದು 16ರ ವಯಸ್ಸಿನಲ್ಲೇ. ನಂತರ, ಅವರಿಗೆ 17 ವರ್ಷವಾದ ಸಮಯ ವೈದ್ಯನಾಥನ್ ಅವರ ಕುಟುಂಬ ಚೆನ್ನೈ ಗೆ ಹೋಗಿನೆಲೆಸಿತು. ಅಲ್ಲಿ ತಮ್ಮ ಪ್ರತಿಭೆ ಮೆರೆದು ಒಬ್ಬ ವೃತ್ತಿ ಕಲಾವಿದರಾಗಿ ನೆಲೆ ನಿಲ್ಲಲು ಶ್ರೀಯುತರಿಗೆ ಹೆಚ್ಚು ಕಾಲ ಬೇಕಾಗಲಿಲ್ಲ. ಮೈಸೂರಿನ ಗಾಯಕಿ ಇಂದಿರಾ ಅವರನ್ನು ಮದುವೆಯಾದ ನಂತರ ವೈದ್ಯನಾಥನ್ ಅವರ ಸಂಗೀತ ಸೇವೆ ಇಮ್ಮಡಿಯಾಯಿತು. ಅಲ್ಲಿಂದ ನಾಲ್ಕು ದಶಕಗಳ ಕಾಲ ಅವರ ಮನೆ ಒಂದು ಸಂಗೀತ ಶಾಲೆಯೇ ಆಗಿತ್ತು.  ನೂರಾರು ವಿದ್ಯಾರ್ಥಿಗಳು ಅವರಿಂದ ಪಾಠ ಪಡೆದರಲ್ಲದೇ, ಹಲವರು ಕಲಾವಿದರಾಗಿ ರೂಪುಗೊಂಡರು. ಇವರು ಆಕಾಶವಾಣಿಯ ‘ಎ ದರ್ಜೆ’ ಕಲಾವಿದರಾಗಿದ್ದು ರಾಷ್ಟ್ರೀಯ ಕಾರ್ಯಕ್ರಮಗಳನ್ನು ನೀಡಿದರು.  ಮೈಸೂರು ಸದಾಶಿವರಾಯರ, ಮೈಸೂರು ವಾಸುದೇವಾಚಾರ್ಯರ ಕೃತಿಗಳ ಕುರಿತು ಸಂಗೀತ ಪ್ರಾತ್ಯಕ್ಷಿಕೆಗಳನ್ನು ನೀಡಿ ಖ್ಯಾತರಾದರು. 2005ರಲ್ಲಿ ಮೈಸೂರಿಗೆ ಪುನರಾಗಮಿಸಿ ಸಂಗೀತ ಸೇವೆ ಮುಂದುವರೆಸಿದರು, ಹಲವಾರು ಕಚೇರಿಗಳನ್ನು ನೀಡಿ ಪ್ರಸಿದ್ಧರಾದರು. 80ರ ವಯಸ್ಸಿನ ನಂತರದಲ್ಲಿ ಅವರು ನೀಡಿದ ಕಚೇರಿಗಳು ಯುವಕರಿಗೂ ಸ್ಪೂರ್ತಿ ಕೊಡುವಂತಿದ್ದವು.

ಕೊಡುಗೈ ದಾನಿಯಾಗಿದ್ದ   ವೈದ್ಯನಾಥನ್ ಅವರ ಪಾರ್ಥಿವ ಶರೀರವನ್ನು ಕೂಡ ಜೆ ಎಸ್ ಎಸ್ ಕಾಲೇಜಿಗೆ ದಾನ ಮಾಡಲಾಯಿತು. (ಎಸ್.ಎಚ್)

Leave a Reply

comments

Related Articles

error: