ಮೈಸೂರು

ಸಾವು ಮಿಥ್ಯೆ, ಬದುಕು ಮಾಯೆಯಲ್ಲ : ಡಾ.ಸಿ.ಪಿ.ಕೃಷ್ಣಕುಮಾರ್

ನವನೀತ ಪ್ರಕಾಶನ, ಮೈಸೂರು ಇವರ ವತಿಯಿಂದ ಭಾನುವಾರ ಸದ್ವಿದ್ಯಾ ಶಿಕ್ಷಣ ಸಂಸ್ಥೆಯಲ್ಲಿ ಸ್ಕಾಲರ್ ಶಿಪ್ ಶಂಕರಪ್ಪನವರ ನುಡಿನಮನ ಶ್ರದ್ಧಾಂಜಲಿ ಮತ್ತು ಡಾ.ವಿಜಯಮಾಲಾ ರಂಗನಾಥ್ ಅವರ ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಡಾ.ವಿಜಯಮಾಲಾ ರಂಗನಾಥ್ ಅವರ ‘ನುಡಿಗಡಣ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರು, ಸ್ಕಾಲರ್ ಶಿಪ್ ಶಂಕರಪ್ಪನವರು ಪ್ರಾಮಾಣಿಕ ವ್ಯಕ್ತಿ. ವಿದ್ಯಾರ್ಥಿಗಳಿಗೆ ಅವರು ಮಾಡಿರುವ ಸೇವೆಯನ್ನು ನಾವೆಲ್ಲರೂ ಸ್ಮರಿಸಬೇಕು. ಈ ಜಗತ್ತಿನಲ್ಲಿ ಸಾವು ಎನ್ನುವುದು ಸುಳ್ಳು, ಮಿಥ್ಯೆ. ಬದುಕು ಮಾಯೆಯಲ್ಲ. ನಮ್ಮಿಂದ ಮರೆಯಾದ ವ್ಯಕ್ತಿತ್ವಗಳನ್ನು ನೆನಸಿಕೊಂಡಾಗ ಅವರು ನಮ್ಮ ಕಣ್ಮುಂದೆ ಬಂದಂತೆ ಭಾಸವಾಗುತ್ತದೆ. ಆದ್ದರಿಂದ ಶಂಕರಪ್ಪನವರು ನಮ್ಮೆಲ್ಲರ ನಡುವೆಯೇ ಇದ್ದಾರೆ ಎಂದು ಹೇಳಿದರು.

ನಂತರ ಕೃತಿ ಕುರಿತು ಮಾತನಾಡಿ, ಆರೋಗ್ಯದ ಅರಿವು ಕೃತಿ ವೈದ್ಯಕೀಯಕ್ಕೆ ಸಂಬಂಧಿಸಿದ ಶಾಸ್ತ್ರ ಕೃತಿ. ಮನೆಮದ್ದು, ಆಯುರ್ವೇದವನ್ನು ಕುರಿತಾದುದಾಗಿದೆ. ಇಂದು ನಾಗರಿಕತೆ, ತಂತ್ರಜ್ಞಾನ ಮತ್ತು ವಿಜ್ಞಾನ ಬೆಳೆದಂತೆ ಆಧುನಿಕ ರೋಗಗಳು ಪ್ರವೇಶ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತಿಮುಖ್ಯ. ಅಂಗೈಯಲ್ಲಿ ಆರೋಗ್ಯದ ಜೊತೆಗೆ ಅಂಗಾಲಲ್ಲಿ ಆರೋಗ್ಯವೂ ಕೂಡ ಮುಖ್ಯ. ದಿನನಿತ್ಯ ಕೊಂಚ ನಡಿಗೆ ನಮ್ಮ ಆರೋಗ್ಯವನ್ನು ಸುಧಾರಿಸುತ್ತದೆ ಎಂದರು.

ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಿದೆ ಆದರೆ ವಿವೇಕವನ್ನು ಮಾತ್ರ ಬೆಳೆಸಿಕೊಳ್ಳುತ್ತಿಲ್ಲ. ಇದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಈ ಕೃತಿಯಲ್ಲಿ ಆರೋಗ್ಯದ ಬಗೆಗೆ ಸಲಹೆ, ಸೂಚನೆ, ಮಾಹಿತಿ ನೀಡಿದ್ದಾರೆ. ಅಲ್ಲದೇ ಕೆಲವು ಕಡೆ ರೂಪಕಗಳನ್ನು ಬಳಸಿದ್ದಾರೆ. ಪಾರಂಪರಿಕ ಜ್ಞಾನ, ಸ್ವಾನುಭವ ಮತ್ತು ಅಧ‍್ಯಯನ ಈ 3 ಅಂಶಗಳು ಈ ಕೃತಿಯಲ್ಲಿ ಸೇರಿವೆ. ದೈಹಿಕ ಮತ್ತು ಮಾನಸಿಕ ಒತ್ತಡಗಳು, ಖಿನ್ನತೆಗೆ ಪರಿಹಾರಗಳು, ಅಲ್ಲದೇ ವ್ಯಕ್ತಿತ್ವ ನಿರ್ಮಾಣಕ್ಕೆ ಬೇಕಾದ ಅಂಶಗಳನ್ನು ಲೇಖಕರು ನೀಡಿದ್ದಾರೆ ಎಂದರು.

ಆದರೆ ಈ ಕೃತಿಗೆ ಪರಿಷ್ಕರಣೆಯ ಅಗತ್ಯತೆ ಇದೆ. ಮತ್ತು ಕ್ರಮಬದ್ಧತೆಯಿಂದ ಕೂಡಿಲ್ಲ. ಮುಂದಿನ ಆವೃತ್ತಿ ಪರಿಷ್ಕರಣಗೊಂಡು ಪ್ರಕಾಶನವಾಗಬೇಕು ಎಂದು ಹೇಳಿದರು.

ನಂತರ ‘ನುಡಿಗಡಣ’ ಕೃತಿ ಬಿಡುಗಡೆ ಮಾಡಿದ ಹಿರಿಯ ವಿದ್ವಾಂಸ ಡಾ.ಮಳಲಿ ವಸಂತಕುಮಾರ್, ಸ್ಕಾಲರ್ ಶಿಪ್ ಶಂಕರಪ್ಪ ಸಮಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದರು. ಪಾವಿತ್ರ್ಯ, ಜೀವನ ಮೌಲ್ಯಕ್ಕೆ ಹೆಚ್ಚಿನ ಒತ್ತು ನೀಡಿ ಬದುಕು ನಡೆಸಿದವರು. ಅಲ್ಲದೇ ಹೋದ ಕಡೆಯಲ್ಲೆಲ್ಲಾ ಗಮಕವನ್ನು ಪ್ರಚಾರ ಪಡಿಸುತ್ತಿದ್ದರು. ಅವರಲ್ಲಿ ರಾಷ್ಟ್ರ ಭಾಷಾ ಪ್ರೇಮ ಅಗಾಧವಾಗಿತ್ತು. ಅದಕ್ಕಾಗಿಯೇ ಹಿಂದಿಯನ್ನು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಪ್ರಚಾರ ಮಾಡಿದರು. ನಮಗೆ ಕನ್ನಡದ ಜೊತೆಗೆ ರಾಷ್ಟ್ರ ಭಾಷೆ ಹಿಂದಿಯೂ ಸಹಮುಖ್ಯ ಎಂದು ಹೇಳುತ್ತಿದ್ದರು. ನಮ್ಮ ನಾಡು ನುಡಿಗೆ ಶಂಕರಪ್ಪನವರು ನೀಡಿರುವ ಕೊಡುಗೆ ಅಮೋಘವಾದುದು. ಅವರ ಸೇವಾ ಮನೋಭಾವನೆ ಎಲ್ಲಕ್ಕಿಂತ ಪವಿತ್ರವಾದುದು ಎಂದು ಹೇಳಿದರು. ಅನಾಥಾಶ‍್ರಮಗಳಿಗೆ ಮತ್ತು ಬಡ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ದುಡಿಮೆಯಲ್ಲಿಯೇ ಹಣ ಸಹಾಯ ಮಾಡುತ್ತಿದ್ದರು ಎಂದು ಸ್ಮರಿಸಿದರು. ಮಹಾಪುರುಷರ ಸಾಲಿನಲ್ಲಿ ಶಂಕರಪ್ಪನವರ ಹೆಸರು ಇರಬೇಕು. ಎಂತಹ ಸದ್ಗುಣ ಸಂಪನ್ನ ವ್ಯಕ್ತಿತ್ವ ಅವರದು ಎಂದರು.

ಶಂಕರಪ್ಪನವರನ್ನು ಕುರಿತಾದ ಲೇಖನಗಳು ಬರಬೇಕು. ಗಮಕದ ಪೂರಕ ಮತ್ತು ಪ್ರೇರಕ ಶಕ್ತಿ ಶಂಕರಪ್ಪ. ಈ ನಾಡಿಗೆ ಗಮಕದ ಸಾಂಸ್ಕೃತಿಕ ಹಿರಿಮೆಯನ್ನು ತಂದು ಕೊಟ್ಟ ಶಂಕರಪ್ಪನವರ ಹೆಸರಿನಲ್ಲಿ ಗಮಕ ಶಾಲೆಯೊಂದನ್ನು ತೆರೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರೊ.ಜಿ.ಎಸ್.ಭಟ್, ಕೆ.ರಘುರಾಮ್, ಗೋಪಿನಾಥ್ ಎಂ.ಡಿ, ಡಾ.ಶಿವಾನಂದ, ಕೃ.ರಾಮಚಂದ್ರ, ರಂಗನಾಥ ಮೈಸೂರು, ಲೇಖಕಿ ಡಾ.ವಿಜಯಮಾಲಾ ರಂಗನಾಥ್  ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ಕಾಲರ್ ಶಿಪ್ ಶಂಕರಪ್ಪನವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

Leave a Reply

comments

Related Articles

error: