ಮೈಸೂರು

ಮಾರ್ಚ್ 4 : ಮಹಾಶಿವರಾತ್ರಿ ಪ್ರಯುಕ್ತ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯಕ್ಕೆ ಚಿನ್ನದ ಕೊಳಗ ಹಸ್ತಾಂತರ

ಮೈಸೂರು,ಮಾ.2:- ಸೋಮವಾರ ಅಂದರೆ ಮಾರ್ಚ್ 4ರಂದು ಮಹಾಶಿವರಾತ್ರಿ ಪ್ರಯುಕ್ತ ಅರಮನೆ ಆವರಣದಲ್ಲಿರುವ ತ್ರಿನೇಶ್ವರ ದೇವಾಲಯಕ್ಕೆ ಇಂದು ಚಿನ್ನದ ಕೊಳಗ ಹಸ್ತಾಂತರಿಸಲಾಯಿತು.

ಮೈಸೂರು ಜಿಲ್ಲಾಡಳಿತದ ಖಜಾನೆಯಲ್ಲಿದ್ದ 11 ಕೆಜಿ ತೂಕದ ಚಿನ್ನದ ಶಿವನ ಮುಖವಾಡವನ್ನು ಮೈಸೂರು ಜಿಲ್ಲಾಡಳಿತ ಹಾಗೂ ಮುಜರಾಯಿ ಇಲಾಖೆ  ದೇವಳದ ಅರ್ಚಕರಿಗೆ ನೀಡಿದೆ. ಸೋಮವಾರ  ಮಹಾಶಿವರಾತ್ರಿ ನಡೆಯಲಿದ್ದು, ಈ ಪ್ರಯುಕ್ತ ತ್ರಿನೇಶ್ವರ ದೇವಸ್ಥಾನದಲ್ಲಿ ಭರದ ಸಿದ್ಧತೆಗಳು ನಡೆದಿವೆ. ಶಿವಲಿಂಗಕ್ಕೆ ವರ್ಷಕ್ಕೆ ಒಂದೇ ಬಾರಿ ಚಿನ್ನದ ಲೇಪಿತ ಕೊಳಗವನ್ನು ತೊಡಿಸಲಾಗುತ್ತಿದ್ದು, ಇಂದು ಜಿಲ್ಲಾಡಳಿತ, ಮುಜರಾಯಿ ಇಲಾಖೆ ತ್ರೀನೇಶ್ವರ ದೇವಸ್ಥಾನದ ಅರ್ಚಕರಿಗೆ ಚಿನ್ನದ ಲೇಪಿತ ಕೊಳಗವನ್ನು ಕೊಂಡೊಯ್ದು ನೀಡಿದೆ. ಸೋಮವಾರ ಬೆಳಿಗ್ಗೆ 5ಗಂಟೆಯಿಂದಲೇ ಶಿವರಾತ್ರಿ ಪ್ರಯುಕ್ತ  ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ.

ಶಿವನ ಮುಖವಾಡ ಚಿನ್ನದ ಕೊಳಗವನ್ನು ಜಯಚಾಮರಾಜೇಂದ್ರ ಒಡೆಯರ್ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ ಸಂದರ್ಭದಲ್ಲಿ ದೇವಾಲಯಕ್ಕೆ ಉಡುಗೊರೆಯಾಗಿ ನೀಡಿದ್ದರು.  ಸೋಮವಾರ ಮುಂಜಾನೆ ವಿಶೇಷ ಪೂಜೆ ನೆರವೇರಿಸಿ ದೇವಾಲಯದ ಶಿವಲಿಂಗಕ್ಕೆ ಇದನ್ನು ಧಾರಣೆ ಮಾಡಲಾಗುತ್ತದೆ.  ಇಡೀ ರಾತ್ರಿ ಸಾರ್ವಜನಿಕರ ದರ್ಶನಕ್ಕೆ ಮೈಸೂರು ಜಿಲ್ಲಾಡಳಿತ ಅವಕಾಶ ಕಲ್ಪಿಸಲಿದೆ.  ಅರಮನೆ ಮಂಡಳಿ,  ಮುಜರಾಯಿ ಇಲಾಖೆ, ಪೊಲೀಸ್ ಇಲಾಖೆ ಸಮ್ಮುಖದಲ್ಲಿ ದೇವಾಲಯಕ್ಕೆ ಕೊಳಗ ಹಸ್ತಾಂತರಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: