ಮೈಸೂರು

ನ್ಯೂಕ್ಲಿಯರ್ ಶಕ್ತಿಯ ಸದುಪಯೋಗವನ್ನು ನಮ್ಮ ಯುವ ವಿಜ್ಞಾನಿಗಳು ವಿಸ್ತರಿಸಬೇಕು : ಪ್ರೊ.ಟಿ.ಕೆ.ಉಮೇಶ್

ಮೈಸೂರು,ಮಾ.2:- ನ್ಯೂಕ್ಲಿಯರ್ ಶಕ್ತಿಯಿಂದ ಮಾನವ ಕುಲಕ್ಕೆ ಅನುಕೂಲವಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವತ್ತ ನಾವು ಆಲೋಚಿಸಬೇಕಿದೆ ಎಂದು ಮೈಸೂರು ವಿವಿ ಭೌತಶಾಸ್ತ್ರ ವಿಭಾಗದ ಪ್ರೊ.ಟಿ.ಕೆ.ಉಮೇಶ್ ಹೇಳಿದರು.

ಅವರು ನಿನ್ನೆ ಮೈಸೂರಿನ  ಊಟಿ ರಸ್ತೆಯಲ್ಲಿರುವ ಜೆಎಸ್ ಎಸ್ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗವು ಯುಜಿಸಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಸಾಮಾಜಿಕ ಉಪಯೋಗ ಮತ್ತು ಶಕ್ತಿಯ ಉತ್ಪಾದನೆಯಲ್ಲಿ ಪರಮಾಣು ವಿಜ್ಞಾನದ ಪಾತ್ರ’ ಎಂಬ ವಿಷಯ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ನ್ಯೂಕ್ಲಿಯರ್ ಶಕ್ತಿಯನ್ನು ಬಳಸಿಕೊಂಡು ಆಹಾರವನ್ನು ಹಾಳಾಗದಂತೆ ರಕ್ಷಿಸುವತ್ತ ವಿಜ್ಞಾನ ಮುಂದುವರಿದಿದೆ. ನ್ಯೂಕ್ಲಿಯರ್ ಶಕ್ತಿಯ ಸದುಪಯೋಗವನ್ನು ನಮ್ಮ ಯುವ ವಿಜ್ಞಾನಿಗಳು ವಿಸ್ತರಿಸಬೇಕು ಎಂದರು.

ವಿಚಾರಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ.ಬಿ.ವಿ.ಸಾಂಬಶಿವಯ್ಯನವರು ಮಾತನಾಡಿ ಅಮೇರಿಕದಲ್ಲಿ ಬಳಕೆಯಾಗುವ ಶಕ್ತಿಯಲ್ಲಿ ಶೇ.30ಭಾಗವನ್ನು ನ್ಯೂಕ್ಲಿಯರ್ ಶಕ್ತಿಯಿಂದ ಉತ್ಪಾದಿಸಲಾಗುತ್ತದೆ. ಆದರೆ ಭಾರತದಲ್ಲಿ ಅದರ ಪ್ರಮಾಣ ಈಗಿರುವುದಕ್ಕಿಂತ ಹೆಚ್ಚಾಗಬೇಕಾದ ಅಗತ್ಯವಿದೆ ಎಂದರು.

ಇಂಡಿಯನ್ ನ್ಯೂಕ್ಲಿಯರ್ ಸೊಸೈಟಿಯ ಮೈಸೂರು ವಿಭಾಗದ ಅಧ್ಯಕ್ಷ ಎಂ.ಆರ್.ಶ್ರೀಕಾಂತನ್ ಭಾರತದಲ್ಲಿ ಪರಮಾಣು ಶಕ್ತಿ ಮತ್ತು ತಂತ್ರಗಳ ಕುರಿತು ನಡೆಸಬಹುದಾದ ಸಂಶೋಧನೆಗಳ ಸಾಧ್ಯತೆಗಳ ಕುರಿತು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಮಹದೇವಯ್ಯ, ಪದವಿ ವಿಭಾಗದ ಮುಖ್ಯಸ್ಥರಾದ ಡಾ.ಎಲ್.ವಿನಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: