ಮೈಸೂರು

ವಿಚಾರ ಶಕ್ತಿ ಮತ್ತು ಕಾರ್ಯತತ್ಪರತೆ, ಸಮಾಜಮುಖಿಯಾದ ಗುಣಗಳಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ : ಪ್ರೊ.ಎಸ್.ಸಿ.ಶರ್ಮ

ಕರಾಮುವಿ ಘಟಿಕೋತ್ಸವ ಭವನದಲ್ಲಿ 16ನೇ ಘಟಿಕೋತ್ಸವ : ಪದವಿ ಪ್ರದಾನ

ಮೈಸೂರು,ಮಾ.5:-  ವಿಚಾರ ಶಕ್ತಿ ಮತ್ತು ಕಾರ್ಯತತ್ಪರತೆ, ಸಮಾಜಮುಖಿಯಾದ ಗುಣಗಳಿಂದ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಬೆಂಗಳೂರು ನ್ಯಾಕ್ ನಿರ್ದೇಶಕ ಪ್ರೊ.ಎಸ್.ಸಿ.ಶರ್ಮ ತಿಳಿಸಿದರು.

ಅವರಿಂದು ಮೈಸೂರು ಕರಾಮುವಿ ಘಟಿಕೋತ್ಸವ ಭವನದಲ್ಲಿ ನಡೆದ 16ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು ಘಟಿಕೋತ್ಸವ ಭಾಷಣ ಮಾಡಿದರು. ವಾಸ್ತವವಾಗಿ ಕರ್ಮ ಸಾಧನೆ ಒಂದು ರೀತಿಯ ಯಜ್ಞ. ಈ ಕರ್ಮ ಯಜ್ಞವೇ ಸೃಷ್ಟಿ ನಿಯತಿ ರೂಪದ ಋತುಗೂ ಮೂಲ. ಮನುಷ್ಯನದೆಂದು ಹೇಳಿಕೊಳ್ಳುವ ವಸ್ತು ಜಗತ್ತಿನಲ್ಲಿ ಯಾವುದೂ ಇಲ್ಲ. ಅವನು ತನ್ನ ಸ್ವಾರ್ಥಕ್ಕಾಗಿ ಸಂಪಾದಿಸಿದ ಹಣ ಮೊದಲ್ಗೊಂಡು ಮುಕ್ತಿಗಾಗಿ ಮಾಡುವ ತಪಸ್ಸಿನವರೆಗೆ ಎಲ್ಲಕ್ಕೂ ಕರ್ಮ ಯಜ್ಞವೇ ಮೂಲ. ಕಡೆಗೆ ಎಲ್ಲವೂ ಅದರಲ್ಲಿಯೇ ಲಯ ಹೊಂದಬೇಕು. ಇದನ್ನು ಕುವೆಂಪು ಅವರು’ ಬೆರಳ್ ಗೆ ಕೊರಳ್ ‘ನಲ್ಲಿ ‘ ಓ ಧರ್ಮ ನಿನ್ನ ನೊಲಿಯುವುದೇ ಭಕ್ತಿ; ನೀನಾಗುವುದೇ ಶಕ್ತಿ; ನಿನ್ನ ಕೈಂಕರ್ಯದಿಂ ನಿನ್ನ ಗೆಲುವುದೇ ಮುಕ್ತಿ! ‘ಎಂದು ಸುಂದರವಾಗಿ ನಿರೂಪಿಸಿದ್ದಾರೆ. ಧರ್ಮದ ಆಶಯ ಸತ್ಕರ್ಮದಲ್ಲಿ ತೊಡಗುವುದು ಎಂದರು. ಯುವ ಸಮೂಹ ಭಾರತೀಯತೆಯ ಚೇತನ ಮತ್ತು ಆದರ್ಶಗಳನ್ನು ಜೀವನದಲ್ಲಿ ಅನುಶೀಲನವಾಗಿ ಅಳವಡಿಸಿಕೊಳ್ಳಿ. ನೀವು ನಾಳಿನ ನೇತಾರರು ಮಾತ್ರವಲ್ಲ. ಇಂದಿನ ರೂವಾರಿಗಳು. ನೀವು ಬದಲಾವಣೆಯ ಹರಿಕಾರರಾಗುವ ಮೂಲಕ ರಾಷ್ಟ್ರದ ಪ್ರಗತಿಗೆ ಕಾರಣರಾಗಬಲ್ಲಿರಿ ಎಂದು ತಿಳಿಸಿದರು.

ಸಮಾರಂಭದಲ್ಲಿ 10ಸಂಶೋಧನಾ ವಿದ್ಯಾರ್ಥಿಗಳಿಗೆ ಪಿ.ಹೆಚ್ ಡಿ ಪದವಿ, 7ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 8ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸೇರಿದಂತೆ 17512   ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನಿಸಲಾಯಿತು.

ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್, ಕರಾಮುವಿ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ, ಪರೀಕ್ಷಾಂಗ ಕುಲಸಚಿವ ಡಾ.ಎಂ.ಎಸ್.ರಮಾನಂದ, ಕುಲಸಚಿವ ಪ್ರೊ.ರಮೇಶ್ ಟಿ, ಅಕಾಡೆಮಿಕ್ ಡೀನ್ ಪ್ರೊ.ಜಗದೀಶ್, ಪುಟ್ಟಣ್ಣ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: