ಮೈಸೂರು

ವಿಸ್ಮಯವೇ ಎಲ್ಲ ಕಾವ್ಯದ ಮೂಲ : ಸಾಹಿತಿ ಡಾ.ಮ.ರಾಮಕೃಷ್ಣ

ಮೈಸೂರು,ಮಾ.6:- ವಿಸ್ಮಯವೇ ಎಲ್ಲ ಕಾವ್ಯದ ಮೂಲ ಎಂದು ಮಂಡ್ಯ ಜಿಲ್ಲೆ ಕೆ.ಎಂ ದೊಡ್ಡಿ ತಾಲೂಕಿನ ಭಾರತೀ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಸಾಹಿತಿ ಡಾ.ಮ.ರಾಮಕೃಷ್ಣ ತಿಳಿಸಿದರು.

ಅವರಿಂದು ವಿಜಯನಗರದಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾಣ ಜಾಣೆಯರ ಬಳಗ: 2018-19 ಸಾಹಿತ್ಯ ಸಂವಾದ : ಕಥೆ, ಕವನ ರಚನಾ ಕಮ್ಮಟದಲ್ಲಿ ಪಾಲ್ಗೊಂಡು ಮಾತನಾಡಿದರು. ಮೈಸೂರಿನಲ್ಲಿರುವ ಉತ್ತಮ ಕಾಲೇಜುಗಳಲ್ಲಿ ಇದು ಒಂದು ಎನ್ನುವುದು ಹೆಮ್ಮೆಯ ಸಂಗತಿ ಎಂದರು. ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಧ್ಯಾಪಕರ ಆಸಕ್ತಿಯನ್ನು ತಿಳಿಸುತ್ತದೆ. ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ವಿದ್ಯಾರ್ಥಿಗಳಿಗೆ ಮುಖ್ಯ ಎಂದು ತಿಳಿಸಿದರು. ಒಲವೇ ವಿಸ್ಮಯ ಎಂಬ ಮಾತನ್ನು ವಿದ್ಯಾರ್ಥಿಗಳು ಕೇಳಿರುತ್ತೀರಿ. ಆದರೆ ವಿಸ್ಮಯ ಪಡಲು ಜಗತ್ತಿನಲ್ಲಿ ಬೇರೆ ಬೇರೆ ಸಂಗತಿಗಳಿವೆ. ವಿಸ್ಮಯ ಒಂಭತ್ತು ರಸಗಳ ಒಂದು ಭಾವ. ಆದರೆ ನೋಡುವ ದೃಷ್ಟಿಗಳನೇಕ. ವಿಸ್ಮಯ ಎನ್ನುವುದು ಎಲ್ಲ ಕಾವ್ಯಗಳ ಮೂಲ. ಕವಿತೆ ಹುಟ್ಟುವುದೇ ವಿಸ್ಮಯದ ಮೂಲಕ.  ಇಂಗ್ಲಿಷ್ ಕವಿತೆಯ ಕನ್ನಡ ಅನುವಾದ ವನ್ನು ವರ್ಣಿಸಿದರು. ‘ಮುಗಿಲಿನಲಿ ಮಳೆಬಿಲ್ಲು ಕಾಣುತಲಿ ತಾನು,ನೆಗೆದು ಕುಣಿದಾಡುವುದು ಹೃದಯ ತಾನು’ ಎಂದರಲ್ಲದೇ, ಇದನ್ನು ಇಂಗ್ಲಿಷಿನಲ್ಲಿ ಅರ್ಥ ಹುಡುಕಿದರೆ ಹಾರ್ಟ್ ಆಟ್ಯಾಕ್  ಎಂಬ ಪದ ಬಂದುಬಿಡಲಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಪ್ರಶ್ನಿಸುತ್ತ ಹೋದಂತೆ ಬೌದ್ಧಿಕವಾಗಿ ವಿಕಾಸವಾಗುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಹಪ್ರಾಧ್ಯಾಪಕ ಡಾ.ಪಿ.ಬೆಟ್ಟೇಗೌಡ, ಪ್ರಾಂಶುಪಾಲ ಪ್ರೊ.ಬಿ.ಕೆ.ಸತೀಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: