ಮೈಸೂರು

ನಮ್ ರೇಡಿಯೋ ಆರ್.ಜೆ. ಆಯ್ಕೆ – ತರಬೇತಿ ಕಾರ್ಯಾಗಾರ

ವಿಶ್ವದ ಮೂಲೆಮೂಲೆಯಲ್ಲಿರುವ ಕನ್ನಡಿಗರನ್ನು ತಲುಪುವ ಉದ್ದೇಶದಿಂದ ಪಾಸ್ಟೈಮ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್‍ನಿಂದ ಆರಂಭವಾದ ‘ನಮ್ ರೇಡಿಯೋ’ಗೆ ಆರ್‍.ಜೆ ಆಯ್ಕೆ ಹಾಗೂ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ ಎಂದು ರೇಡಿಯೋ ಜಾಕಿ ರಾಜು ಮಲ್ಲೇಶ್ವರ ತಿಳಿಸಿದರು.

ಸೋಮವಾರ, ಪತ್ರಕರ್ತರ ಭವನದಲ್ಲಿ ಮಾತನಾಡಿ, ಜ.28 ಮತ್ತು 30ರಂದು ಬಸುದೇವ ಸೊಮಾನಿ ಕಾಲೇಜಿನಲ್ಲಿ ಆರ್‍.ಜೆ. ಕಾರ್ಯಾಗಾರ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ, ವಯಸ್ಸಿನ ಹಾಗೂ ವಿದ್ಯಾಭ್ಯಾಸದ ಅಭ್ಯಂತರವಿಲ್ಲ, ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ಕಾರ್ಯಾಗಾರದಲ್ಲಿ ಧ್ವನಿ ಸಮನ್ವಯತೆ, ಕಾರ್ಯಕ್ರಮ ನಿರೂಪಣೆ, ವಾರ್ತಾ ವಾಚನ ಹಾಗೂ ಕ್ರೀಡಾ ವೀಕ್ಷಕ ವಿವರಣೆಯನ್ನು ಕಲಿಸಲಾಗುವುದು ಎಂದು ತಿಳಿಸಿದರು.

ನಮ್ ರೇಡಿಯೋ ಈಗಾಗಲೇ ಜಾಗತಿಕ ಮಟ್ಟದಲ್ಲಿ ಪ್ರಸಾರ ಕಾರ್ಯ ನಡೆಸುತ್ತಿದ್ದು ಇದಕ್ಕೆ ಸಿಮೀತ ಪರಿಧಿಯಿಲ್ಲ. ಜಗತ್ತಿನ ಎಲ್ಲ ಮೂಲೆಯಲ್ಲಿರುವ ಕನ್ನಡಿಗರನ್ನು ತಲುಪುತ್ತಿದ್ದು ಮೆಚ್ಚುಗೆ ಗಳಿಸಿದೆ. ಹೊರ ದೇಶಗಳಲ್ಲಿ ಕನ್ನಡವನ್ನು ಕೇಳುವ ಸೊಬಗೇ ಬೇರೆ. ಆಸ್ಟೇಲಿಯಾ, ಉಗಾಂಡ, ಆಫ್ರಿಕಾ ದೇಶಗಳಿಂದ ಮೆಚ್ಚುಗೆ ಪ್ರತಿಕ್ರಿಯೆಗಳು ಹರಿದು ಬಂದಿವೆ. ನಮ್‍ ರೇಡಿಯೋ ಆರಂಭವಾದ 9 ತಿಂಗಳಲ್ಲಿಯೇ 196 ದೇಶಗಳಲ್ಲಿ ಕೇಳುಗರನ್ನು ಹೊಂದಿದ್ದು ವಿಶ್ವದ ಮೂಲೆ ಮೂಲೆಗೂ ಕನ್ನಡವನ್ನು ಪಸರಿಸುತ್ತಿದೆ. ರೇಡಿಯೋ ಜಾಕಿ ಆಗಲು ಇಚ್ಛಿಸುವವರಿಗೆ ಇದೊಂದು ಸುರ್ವಣವಕಾಶ.

ಕ್ಯಾನ್ಸರ್‍ನಿಂದ ಮುಕ್ತರಾದವರು, ವಿಕಲಾಂಗ ಚೇತನರು, ಮಂಗಳಮುಖಿಯರು ಆರ್‍.ಜೆ.ಗಳಾಗಿದ್ದಾರೆ. ಬೆಳಿಗ್ಗೆ 6 ರಿಂದ ರಾತ್ರಿ 12ರವರೆಗೆ ನಿರಂತರ ಕನ್ನಡದ ಕಂಪು ಪಸರಿಸುವುದು ಮಾತ್ರವಲ್ಲದೇ ವಿಶೇಷ ದಿನಗಳಲ್ಲಿ ತುಳು, ಕೊಂಕಣಿ ಹವ್ಯಾಸಿ ಆರ್‍.ಜೆ.ಗಳಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅವನೀಧರ್ ತಿಳಿಸಿದರು. ಸದ್ಯದಲ್ಲೇ ಬಳ್ಳಾರಿ, ಚಿಕ್ಕಮಗಳೂರುಗಳಲ್ಲಿ ಆಯ್ಕೆ ಮತ್ತು ತರಬೇತಿ ಕಾರ್ಯಾಗಾರ ನಡೆಯಲಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಭಾಗವಹಿಸಲಿಚ್ಛಿಸುವವರು ಹೆಸರು ನೋಂದಾಯಿಸಿಕೊಳ್ಳಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ದೂರವಾಣಿ ಸಂಖ್ಯೆ: 7338128901 ಅಥವಾ  [email protected] ಮೂಲಕ ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಸಂಸ್ಥೆಯ ಮುಖಸ್ಥ ಶಶಾಂಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: