ಪ್ರಮುಖ ಸುದ್ದಿಮೈಸೂರು

ಜ.25ರಂದು ಮೈಸೂರಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆ : ಸಂಸದ ಪ್ರತಾಪ್ ಸಿಂಹ

ಮೈಸೂರು ಜನತೆ ಒತ್ತಾಸೆ ಹಾಗೂ ಬಹುದಿನಗಳ ಬೇಡಿಕೆಯಾದ ಪಾಸ್‍ಪೋರ್ಟ್ ಸೇವಾ ಕೇಂದ್ರವನ್ನು ಜ.25ರಂದು ಕೇಂದ್ರ ಸಚಿವ ಅನಂತ್ ಕುಮಾರ್ ಚಾಲನೆ ನೀಡುವರು ಎಂದು ಸಂಸದ ಪ್ರತಾಪ್ ಸಿಂಹ ಪತ್ರಕರ್ತರ ಭವನದಲ್ಲಿಂದು ತಿಳಿಸಿದರು.

ಅವರು, ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮೇಟಗಳ್ಳಿಯ ಪೊಲೀಸ್ ಠಾಣೆಯ ಬಳಿಯಿರುವ ಅಂಚೆ ಕಚೇರಿಯ ಅರ್ಧ ಭಾಗದಲ್ಲಿ ಪಾಸ್‍ಪೋರ್ಟ್ ಸೇವಾ ಕೇಂದ್ರವು ಕಾರ್ಯರಂಭಗೊಳ್ಳಲಿದ್ದು, ಗುಜರಾತಿನ ಬಲೂಚ್ ನಗರದಲ್ಲಿ ಹಾಗೂ ಮೈಸೂರಿನಲ್ಲಿ ಏಕಕಾಲದಲ್ಲಿಯೇ ಕಚೇರಿಗಳು ಆರಂಭಗೊಳ್ಳಲಿವೆ. ಮೊದಲ ಹಂತದಲ್ಲಿ ವಲಯ ಕೇಂದ್ರದ ಅಧಿಕಾರಿಗಳೇ ನಿರ್ವಹಿಸಲಿದ್ದು ಸ್ಥಳೀಯ ಅಧಿಕಾರಿಗಳಿಗೆ ತರಬೇತಿ ನೀಡುವರು. ಮೊದಲ 2 ವಾರಗಳಿಗೆ ಪ್ರಯೋಗಾತ್ಮಕವಾಗಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗುವ ಕಚೇರಿ, ನಂತರ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುವುದು ಎಂದು ತಿಳಿಸಿದರು.

ಮೈಸೂರಿನಲ್ಲಿರುವ ಇಂಜಿನಿಯರಿಂಗ್ ಹಾಗೂ ಇತರೆ ಪದವಿ ಕಾಲೇಜುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉದ್ಯೋಗ ಅರಸಿ ವಿದೇಶಗಳಿಗೆ ತೆರಳುವವರು. ಹಾಗೂ ಪ್ರವಾಸಕ್ಕೆ ತೆರಳುವವರು ಕಡಿಮೆಯೇನಿಲ್ಲ. ಇವರೆಲ್ಲಾ ಪಾಸ್‍ಪೋರ್ಟ್‍ಗಾಗಿ ಬೆಂಗಳೂರಿಗೆ ಅಲೆಯಬೇಕಾಗಿತ್ತು. ಈ ಸಮಸ್ಯೆಯ ಗಂಭೀರತೆ ಕುರಿತು ಸಂಸತ್‍ನಲ್ಲಿ ಪ್ರಸ್ತಾಪಿಸಿದ್ದೆ. ಹಾಗೂ ಕೇಂದ್ರ ಸಚಿವ ಅನಂತ ಕುಮಾರ್ ಮೇಲೆ ಒತ್ತಡ ತರಲಾಗಿತ್ತು, ಅವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‍ ಅವರೊಂದಿಗೆ ಪತ್ರದ ಮುಖಾಂತರ ಸಮಾಲೋಚಿಸಿ ಪಾಸ್‍ಪೋರ್ಟ್ ಕಚೇರಿಗೆ ಒತ್ತಾಯಿಸಿದ್ದರು.

ತಾಜ್ ಮಹಲ್‍ಗಿಂತಲೂ ಹೆಚ್ಚಿನ ಪ್ರವಾಸಿಗರು ಮೈಸೂರಿಗೆ : ಪ್ರತಿ ವರ್ಷ ಮೈಸೂರಿಗೆ 32 ಲಕ್ಷ ಪ್ರವಾಸಿಗರು ಭೇಟಿ ನೀಡುವರು. ಈ ನಿಟ್ಟಿನಲ್ಲಿ ಪಾಸ್‍ಪೋರ್ಟ್ ಕಚೇರಿ ಅವಶ್ಯಕತೆಯ ಬಗ್ಗೆ ಕೂಲಂಕಷವಾಗಿ ಚರ್ಚಿಸಲಾಗಿತ್ತು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿದೆ. ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಪಾಸ್‍ಪೋರ್ಟ್‍ನ 4 ವಲಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಆದರೆ ರಾಜ್ಯದಲ್ಲಿ ಕೇವಲ ಒಂದು ಕೇಂದ್ರವಿದ್ದು ಒತ್ತಡದಿಂದ ಕೂಡಿದೆ. ವಿಶ್ವ ಪ್ರಸಿದ್ಧ ತಾಜ್‍ ಮಹಲ್‍ಗೆ ಭೇಟಿ ನೀಡುವ ಪ್ರವಾಸಿಗರಿಗಿಂತಲೂ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದ್ದು, ಚುನಾವಣೆ ವೇಳೆ ನೀಡಿದ್ದ ಆಶ್ವಾಸನೆಯಂತೆ ಸಂಸದನಾಗಿ ಉತ್ತಮ ಕಾರ್ಯ ನಿರ್ವಹಿಸುತ್ತಿರುವೆ ಎಂದರು.

ಕಂಬಳಕ್ಕೆ ಬೆಂಬಲ : ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಕಂಬಳಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ನಮ್ಮ ಹೋರಾಟಗಳು ಕೇವಲ ಸಾಮಾಜಿಕ ಜಾಲತಾಣಗಳಿಗಷ್ಟೇ ಸೀಮಿತವಾಗಿದ್ದು, ಬೇಡಿಕೆ ಈಡೇರಿಸಿಕೊಳ್ಳಲು ವಿಫಲರಾಗುತ್ತಿದ್ದೇವೆ. ತಮಿಳಿಗರಂತೆ ಬೀದಿಗೆ ಬಂದು ಬೃಹತ್ ಪ್ರತಿಭಟನೆ-ಹೋರಾಟ ನಡೆಸಿದಾಗ ಮಾತ್ರ ಹೋರಾಟವನ್ನು ಯಶಸ್ವಿಗೊಳಿಸಲು ಸಾಧ್ಯ ಎಂದರು.

ಪ್ರವಾಸೋದ್ಯಮಕ್ಕೆ ನಿರ್ಲಕ್ಷ್ಯ : ಪ್ರವಾಸಿ ತಾಣಗಳನ್ನು ಕಡೆಗಣಿಸುವ ಮೂಲಕ ರಾಜ್ಯ ಸರ್ಕಾರ ಪ್ರವಾಸೋದ್ಯಮದ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಮೈಸೂರು ಹೆರಿಟೇಜ್’ಸಿಟಿಗಿಂತಲೂ ಸ್ಮಾರ್ಟ್’ಸಿಟಿಯಾಗಬೇಕೆನ್ನುವುದು ನನ್ನ ಅಭಿಮತವಾಗಿದ್ದು, ನರ್ಮ್ ಯೋಜನೆಯಲ್ಲಿ ಬಂದ ಅನುದಾನವು ಸದ್ಬಳಕೆಯಾಗಿಲ್ಲ ಎಂದು ಬೇಸರಿಸಿದರು.

ಮುಡಾ ಮಾಜಿ ಅಧ್ಯಕ್ಷ ರಾಜೇಂದ್ರ, ಪಾಲಿಕೆ ಸದಸ್ಯ ಹಾಗೂ ಭಾ.ಜ.ಪ. ಪ್ರಧಾನ ಕಾರ್ಯದರ್ಶಿ ನಂದೀಶ್ ಪ್ರೀತಮ್ ಹಾಗೂ ಇತರರು ಸಂಸದರಿಗೆ ಸಾಥ್ ನೀಡಿದರು.

Leave a Reply

comments

Related Articles

error: