ಮೈಸೂರು

ನಕಲಿ ಚಿನ್ನದ ಸರ ನೀಡಿ ವಂಚನೆ : ವಂಚಕನ ಬಂಧನ

ಅಸಲಿ ಚಿನ್ನವೆಂದು ನಂಬಿಸಿ ನಕಲಿ ಚಿನ್ನದ ಸರ ನೀಡಿ ಮಹಿಳೆಯೊಬ್ಬರಿಗೆ ವಂಚಿಸಿದ್ದ ವಂಚಕನನ್ನು ಹೆಬ್ಬಾಳ ಠಾಣಾ ಪೊಲೀಸರು ಬಂಧಿಸಿದ್ದು, ಆತನಿಂದ 74,500ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತನನ್ನು ಶ್ರೀರಂಗಪಟ್ಟಣ ತಾಲೂಕು ಹೊಸ ಉಂಡವಾಡಿ ಗ್ರಾಮದ ನಿವಾಸಿ ರಾಜು ಚುನ್ನಿಲಾಲ್ ವಾಘೇಲಾ(45) ಎಂದು ಗುರುತಿಸಲಾಗಿದೆ.

ಈತ ಹೆಬ್ಬಾಳು ಠಾಣಾ ವ್ಯಾಪ್ತಿಯಲ್ಲಿ ಟೀ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುವ ಕಿಡಗಣ್ಣಮ್ಮ ಬಡಾವಣೆಯ ನಿವಾಸಿ ನೀಲಮ್ಮ ಅವರನ್ನು ಜ.20ರಂದು ಭೇಟಿ ಮಾಡಿದ್ದು, ನಂತರ ತನ್ನ ಮಗನನ್ನು ಕೆ.ಆರ್.ಎಸ್ ಪೊಲೀಸರು ಬಂಧಿಸಿದ್ದಾರೆ. ಇದೀಗ ಆತ ಜೈಲಿನಲ್ಲಿದ್ದಾನೆ. ಆತನನ್ನು ಬಿಡಿಸಿಕೊಳ್ಳಲು ಹಣದ ಅವಶ್ಯಕತೆ ಇದೆ. ತನ್ನ ಬಳಿ ಒಂದು ಚಿನ್ನದ ಸರ ಇದೆ. ಅದನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತೇನೆ. ನೀವು ಬೇಕಿದ್ದರೆ ಪರೀಕ್ಷಿಸಿಕೊಳ್ಳಿ ಎಂದು ಹೇಳಿ ಒಂದು ಚಿಕ್ಕ ಚಿನ್ನದ ಗುಂಡನ್ನು ನೀಡಿದ್ದು, ಅದು ಚಿನ್ನದ್ದೆಂದು ತಿಳಿದು ಬಂತು. ಜ.20ರಂದು ಸಂಜೆ ಈತನಿಂದ 7 ಎಳೆಯ ಚಿನ್ನದಂತಿರುವ ಸರವನ್ನು ಪಡೆದು ಕೂಡಿಟ್ಟಿದ್ದ ಹಣ ಮತ್ತು ಸಾಲದ ಹಣ ಸೇರಿ 1,00.000ರೂ.ಗಳನ್ನು ಕೊಟ್ಟಿದ್ದು, ನಂತರ ಚಿನ್ನದ ಸರವನ್ನು ಪರೀಕ್ಷಿಸಿಕೊಳ್ಳಲಾಗಿ ಅದು ನಕಲಿ ಚಿನ್ನದ ಸರವೆಂದು ತಿಳಿದುಬಂದಿದೆ. ಈತ ನನ್ನನ್ನು ನಂಬಿಸಿ  ಮೋಸ ಮಾಡಿ ಹಣ ಪಡೆದು ಹೋಗಿದ್ದಾನೆಂದು ನೀಲಮ್ಮ ದೂರು ನೀಡಿದ್ದು, ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜ.22ರಂದು ರಾತ್ರಿ ಕೆ.ಆರ್.ಎಸ್ ನಲ್ಲಿ ಆರೋಪಿಯನ್ನು ಪತ್ತೆ ಮಾಡಿ, ಆತನನ್ನು ಬಂಧಿಸಿ ಮಹಿಳೆಗೆ ಮೋಸ ಮಾಡಿ ಪಡೆದುಕೊಂಡಿದ್ದ 1,00,000ರೂ.ಗಳಲ್ಲಿ 74,500ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

Leave a Reply

comments

Related Articles

error: