Uncategorized

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಹೆಚ್‍ಡಿಡಿ ಸ್ಪರ್ಧೆ: ಜೆಡಿಎಸ್ ಇಂಗಿತ

ಮಡಿಕೇರಿ,ಮಾ.9-ಜಾತ್ಯತೀತ ಜನತಾದಳ (ಜೆಡಿಎಸ್) ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಬೇಕು ಎಂದು ಇಂಗಿತ ವ್ಯಕ್ತಪಡಿಸಿರುವ ಪಕ್ಷದ ಕೊಡಗು ಜಿಲ್ಲೆಯ ಪ್ರಮುಖರು, ಈ ಸಂಬಂಧ ಮಾ.10ರಂದು ದೇವೇಗೌಡ ಅವರನ್ನು ಭೇಟಿಯಾಗಿ ಸ್ಪರ್ಧಿಸುವಂತೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕೊಡಗು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್, ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುವುದರಲ್ಲಿ ದೇವೇಗೌಡ ಅವರು ಐದನೇ ಸ್ಥಾನದಲ್ಲಿದ್ದು, ಅವರು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದಲ್ಲಿ ಅತ್ಯಧಿಕ ಮತಗಳಿಂದ ಜಯಗಳಿಸುವುದರ ಜೊತೆಗೆ ಕೊಡಗಿನ ಅಭಿವೃದ್ಧಿಯೂ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅಧಿಕಾರಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೊಡಗಿಗೆ ಸುಮಾರು ಆರು ಬಾರಿ ಭೇಟಿ ನೀಡಿದ್ದು, ಇದು ಇತಿಹಾಸ ಸೃಷ್ಟಿಸುವುದರೊಂದಿಗೆ ಜಿಲ್ಲೆಯ ಬಗ್ಗೆ ಅವರಿಗೆ ಇರುವ ಕಾಳಜಿಯನ್ನು ತೋರಿಸಿದೆ ಎಂದು ವಿಶ್ಲೇಷಿಸಿದರು.

ಪ್ರಕೃತಿ ವಿಕೋಪದಿಂದ ನಲುಗಿದ ಕೊಡಗಿನಲ್ಲಿ ಸಂತ್ರಸ್ತರಾದವರ ಕುಟುಂಬಗಳ ನೆರವಿಗೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಒದಗಿಸಿದ್ದಾರೆ. ಇದರೊಂದಿಗೆ ಬಜೆಟ್‍ನಲ್ಲೂ ಕೊಡವ ಸಮಾಜದ ಅಭಿವೃದ್ಧಿಗೆ ಹಾಗೂ ಕೊಡವರ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕೆ ತಲಾ 5 ಕೋಟಿ ರೂ.ಗಳ ಅನುದಾನ ಒದಗಿಸಿದ್ದು, ಇದರೊಂದಿಗೆ ಗೌಡ ಹಾಗೂ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ 25 ಕೋಟಿ ಸೇರಿದಂತೆ ಜಿಲ್ಲೆಯ ವಿವಿಧ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ ಎಂದು ವಿವರಿಸಿದರು.

ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕುಶಾಲನಗರ ಹಾಗೂ ಪೊನ್ನಂಪೇಟೆ ತಾಲೂಕು ಬೇಡಿಕೆಗೂ ಕುಮಾರಸ್ವಾಮಿ ಅವರು ಸ್ಪಂದಿಸಿ ಎರಡು ತಾಲೂಕುಗಳನ್ನು ಘೊಷಣೆ ಮಾಡಿದ್ದು, ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಸಾ.ರಾ.ಮಹೇಶ್ ಅವರು ಕೂಡಾ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ. ಅವರ ಕಾರ್ಯವೈಖರಿಯ ಬಗ್ಗೆ ಪ್ರಭಾವಿತರಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿಯ ಅನೇಕ ಕಾರ್ಯಕರ್ತರು ಇದೀಗ ಜೆಡಿಎಸ್ ಸೇರಲು ಕಾತರರಾಗಿದ್ದಾರೆ ಎಂದು ಗಣೇಶ್ ಹೇಳಿದರು.

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅಭಿವೃದ್ಧಿ ಕಾರ್ಯಗಳು ಪೂರಕವಾಗಲಿದ್ದು, ಪಕ್ಷದ ವರಿಷ್ಠರಾದ ದೇವೇಗೌಡ ಅವರು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬುದು ಪಕ್ಷದ ಕೊಡಗು ಜಿಲ್ಲೆಯ ಪ್ರಮುಖರ ಒಮ್ಮತದ ಅಭಿಪ್ರಾಯವಾಗಿದೆ. ಈ ಬಗ್ಗೆ ಅವರ ಮನವೊಲಿಸಲು ಪಕ್ಷದ ಪ್ರಮುಖರ ತಂಡವೊಂದು ಭಾನುವಾರ ಅವರನ್ನು ಭೇಟಿ ಮಾಡಲಿದೆ ಎಂದು ಹೇಳಿದರು.

ದೇವೇಗೌಡ ಅವರು ಕಳೆದ ಚುನಾವಣೆಯ ಸಂದರ್ಭ ‘ಇದು ತಮ್ಮ ಕೊನೆಯ ಸ್ಪರ್ಧೆ’ ಎಂದು ಹೇಳಿರುವುದರ ಬಗ್ಗೆ ಗಮನಸೆಳೆದಾಗ, ಅದು ಅವರು ಹಾಸನ ಕ್ಷೇತ್ರದಿಂದ ಕೊನೆಯ ಸ್ಪರ್ಧೆ ಎಂದಿದ್ದರೇ ಹೊರತು, ಬೇರೆ ಕಡೆ ಸ್ಪರ್ಧಿಸುವುದಿಲ್ಲ ಎಂದು ಹೇಳಿಲ್ಲ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ವಿ.ನಾಗೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ವಕ್ತಾರ ಎಂ.ಟಿ.ಕಾರ್ಯಪ್ಪ, ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಸಿ.ಎಲ್.ವಿಶ್ವ, ವಕ್ತಾರ ಆದಿಲ್‍ಪಾಷಾ ಹಾಗೂ ಪ್ರಧಾನ ಕಾರ್ಯದರ್ಶಿ ರೆನ್ನಿ ಬರೋಸ್ ಹಾಜರಿದ್ದರು. (ಕೆಸಿಐ, ಎಂ.ಎನ್)

Leave a Reply

comments

Related Articles

error: