ಪ್ರಮುಖ ಸುದ್ದಿ

ದೌರ್ಜನ್ಯವನ್ನು ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳಿ : ಬಿ.ಆರ್.ಸವಿತಾರೈ ಕರೆ

ರಾಜ್ಯ(ಮಡಿಕೇರಿ) ಮಾ.11 :- ತಮ್ಮ ಮೇಲಾಗುತ್ತಿರುವ ದೌರ್ಜನ್ಯವನ್ನು ಪ್ರಶ್ನೆ ಮಾಡುವ ಮನೋಭಾವ ಮತ್ತು ಧೈರ್ಯವನ್ನು ಬೆಳೆಸಿಕೊಂಡಾಗ ಮಾತ್ರ ಮಹಿಳೆಯರು ಕತ್ತಲಿನಿಂದ ಬೆಳಕಿನೆಡೆಗೆ ಸಾಗಲು ಸಾಧ್ಯವೆಂದು ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾರೈ ಅಭಿಪ್ರಾಯಪಟ್ಟಿದ್ದಾರೆ.

ನ್ಯಾಷನಲ್ ವುಮೆನ್ಸ್ ಫ್ರಂಟ್ ವತಿಯಿಂದ ನಗರದ ಕೂರ್ಗ್ ಕಮ್ಯುನಿಟಿ ಸಭಾಂಗಣದಲ್ಲಿ “ಆಗದಿರಲಿ ಸಂತ್ರಸ್ತರು, ಹರಿಯದಿರಲಿ ಕಣ್ಣೀರು” ಎಂಬ ಘೋಷವಾಕ್ಯದೊಂದಿಗೆ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಮಹಿಳಾ ಸಮೂಹ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜದಲ್ಲಿ ಪರಿವರ್ತನೆ ಸಾಧ್ಯವೆಂದ ಅವರು, ಶೋಷಣೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಸೃಷ್ಟಿಸುವ ಭಯದ ವಾತಾವರಣ ದೇಶದ ಪ್ರಗತಿಗೆ ತೊಡಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಹಿಳೆಯರು ಪುರುಷ ಸಮಾನರಾಗಿ ದುಡಿಯುತ್ತಿದ್ದರೂ ಮಧ್ಯರಾತ್ರಿಯಲ್ಲಿ ಏಕಾಂಕಿಯಾಗಿ ಓಡಾಡುವಷ್ಟು ಸಮಾಜ ಶುದ್ಧವಾಗಿಲ್ಲ. ಸಮಾಜದ ಪರಿವರ್ತನೆಗೆ ಮಹಿಳಾ ಶಕ್ತಿಯೇ ಮುಂದಾಗಬೇಕೆಂದು ಸವಿತಾರೈ ಕರೆ ನೀಡಿದರು.

ಸರಕಾರಿ ಆಸ್ಪತ್ರೆಯ ಆಪ್ತ ಸಮಾಲೋಚಕಿ ಬಿ.ಸಿ.ಅನಿತಾಕುಮಾರಿ ಮಾತನಾಡಿ, ಹೆಣ್ಣಿನ ಮೇಲೆ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ವರದಕ್ಷಿಣೆ ಕಿರುಕುಳ ಇಂತಹ ಘಟನೆಗಳು ಇಂದಿಗೂ ನಡೆಯುತ್ತಿದ್ದು, ಶೋಷಣೆಯನ್ನು ತಪ್ಪಿಸಲು ತಾಯಂದಿರು ಜಾಗೃತರಾಗಬೇಕು. ಅಲ್ಲದೆ ಮನೆಯಿಂದಲೇ ಮಕ್ಕಳಲ್ಲಿ ಮೌಲ್ಯಗಳನ್ನು ಬಿತ್ತಬೇಕು, ಹೆಣ್ಣು ಮಕ್ಕಳನ್ನು ಗೌರವಿಸುವ ಮನೋಭಾವನೆಯನ್ನು ಬೆಳೆಸಬೇಕು ಎಂದರು. ಸಂಗೀತ, ನೃತ್ಯ ಕಲೆಗಳ ತರಬೇತಿಗಳೊಂದಿಗೆ ದೈಹಿಕ ಸಾಮರ್ಥ್ಯದ ಕರಾಟೆಯಂತಹ ವೀರಕಲೆಗಳನ್ನು ಕೂಡ ಕಲಿಸುವ ಮೂಲಕ ಪೋಷಕರು ಹೆಣ್ಣುಮಕ್ಕಳಲ್ಲಿ ಮನೋಸ್ಥೈರ್ಯವನ್ನು ತುಂಬಬೇಕು ಎಂದು ಅವರು ಸಲಹೆ ನೀಡಿದರು. ನ್ಯಾಷನಲ್ ವುಮೆನ್ಸ್ ಫ್ರಂಟ್‍ನ ಜಿಲ್ಲಾಧ್ಯಕ್ಷೆ ಜಾಕಿಯ ಹುರೈರ ಮಾತನಾಡಿ, ಪೋಷಕರು ತಮ್ಮ ಮಕ್ಕಳು ಡಾಕ್ಟರ್, ಇಂಜಿನಿಯರ್ ಆಗಬೇಕೆಂದು ಬಯಸುತ್ತಿದ್ದು, ದೇಶಸೇವೆಗಾಗಿ ಮಕ್ಕಳನ್ನು ಕೊಡುಗೆಯಾಗಿ ನೀಡುವ ಮೂಲಕ ಮಹಿಳೆಯರು ತ್ಯಾಗಮೂರ್ತಿಗಳಾಗಬೇಕೆಂದು ಕರೆ ನೀಡಿದರು.

ದೇಶದ ಶೇ.50 ರಷ್ಟು ಮಹಿಳೆಯರು ಮಾತ್ರ ಸಂತೋಷದ ದಿನಗಳನ್ನು ಕಳೆಯುತ್ತಿದ್ದಾರೆ. ಪುರುಷರಿಗೆ ಸಮಾನವಾಗಿ ಮಹಿಳೆಯರು ಬೆಳೆದಿದ್ದರೂ ಹೆಣ್ಣನ್ನು ಕೇವಲ ಒಂದು ವಸ್ತುವನ್ನಾಗಿ ಬಳಸಿಕೊಳ್ಳುವ ಪ್ರವೃತ್ತಿ ಇಂದಿಗೂ ಮುಂದುವರೆದಿದೆ. ಹೆಣ್ಣನ್ನು ಕೇವಲ ಮನೋರಂಜನೆಗಾಗಿ ಬಳಸಿಕೊಳ್ಳುವ ಮನೋಸ್ಥಿತಿಗಳು ನಾಶವಾದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವೆಂದು ಅಭಿಪ್ರಾಯಪಟ್ಟರು.

ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸ್ತ್ರೀಸಮ್ಮೂಹ ತನ್ನ ಶಕ್ತಿ ಏನು ಎನ್ನುವುದನ್ನು ಈ ಸಮಾಜಕ್ಕೆ ತಿಳಿಸಿಕೊಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು, ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ಮಾರು ಹೋಗುತ್ತಿದ್ದು, ಇದು ಯಶಸ್ಸಿನ ಹಾದಿಗೆ ಅಡ್ಡಿಯಾಗಲಿದೆ ಎಂದರು.  ಸಂತ್ರಸ್ತ ಮಹಿಳೆಯರ ಸಬಲೀಕರಣಕ್ಕೆ ಸಂಘಟನೆ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಜಾóಕಿಯ ಹುರೈರ ವಿವರಿಸಿದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್‍ನ ವಿಭಾಗೀಯ ಅಧ್ಯಕ್ಷೆ ನಾಸಿರ, ಟ್ರೈಕಲರ್ ಅಕಾಡೆಮಿಯ ನಿರ್ದೇಶಕಿ ಮೋಕ್ಷಿತಾ ಪಟೇಲ್, ಪ್ರಮುಖರಾದ ಡಾ.ನೌಷಿಯ ಝಿಯಾದ್ದೀನ್, ಲಮ್ಯ ಅಹಮದ್, ಫೀ. ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್‍ನ ಉಪನ್ಯಾಸಕರುಗಳಾದ ಶಹಲ, ಕುರ್ಷಿದ್ ಬಾನು ಮತ್ತಿತರರು ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: