ಕರ್ನಾಟಕ

ಪ್ರಕೃತಿ ದೈವ ಸ್ವರೂಪ, ಹಾನಿ ಮಾಡಿದರೆ ಅಪಾಯ ತಪ್ಪಿದ್ದಲ್ಲ : ನ್ಯಾ. ತಿಮ್ಮಣ್ಣಚಾರ್ ಎಚ್ಚರಿಕೆ

ಹಾಸನ (ಮಾ.11): ಜಾಗತಿಕ ತಾಪಮಾನ ಏರಿಕೆ ಹಾಗೂ ಮಳೆಯ ಕೊರತೆ ಈ ಎರಡು ಪರಿಸರ ನಾಶಕ್ಕೆ ಮುಖ್ಯ ಕಾರಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಎಸ್.ತಿಮ್ಮಣ್ಣಚಾರ್ ತಿಳಿಸಿದರು.

ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಾರ್ವಜನಿಕರ ಶಿಕ್ಷಣ ಇಲಾಖೆ ಡಯಟ್ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ ಪರಿಸರ ಮಿತ್ರ ಶಾಲಾ ಕಾರ್ಯಕ್ರಮ 2018-19 ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿಯೊಂದು ದೈವ ಸ್ವರೂಪ ಆ ಪ್ರಕೃತಿಯು ನಾಶವಾಗದಂತೆ ನೋಡಿಕೊಳ್ಳುವುದು ನಮ್ಮಲ್ಲೆರ ಜವಬ್ದಾರಿ. ಹೆಚ್ಚಿನ ತಾಪಮಾನದಿಂದ ಇಂದು ಅರಣ್ಯ ನಾಶವಾಗುತ್ತಿದ್ದು ಕಾಂಕ್ರಿಟ್ ಅರಣ್ಯ ನಿರ್ಮಾಣವಾಗುತ್ತಿದೆ ಪರಿಸರವನ್ನು ಉಳಿಸಲು ನಾವೆಲ್ಲರೂ ಸಧೃಡರಾಗಿರಬೇಕು ಈ ರೀತಿಯ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯ ಬದಲಾಗಿ ಬಟ್ಟೆ, ಸೆಣಬಿನ ಚೀಲ, ಪ್ರಕೃತಿದತ್ತವಾದ ಪರಿಕರಗಳು, ನೈಸರ್ಗಿಕವಾಗಿ ಸಿಗುವ ಸೌರಶಕ್ತಿಯನ್ನು ಹೆಚ್ಚು ಬಳಸಬೇಕು. ಶಾಲಾ ವಿದ್ಯಾರ್ಥಿಗಳಿಗೆ ಪರಿಸರ ಜ್ಞಾನ ತುಂಬಾ ಮುಖ್ಯವಾಗಿದ್ದು ಮಕ್ಕಳು ಸಹ ಪೋಷಕರಿಗೆ ಪರಿಸರ ಜಾಗೃತಿಯನ್ನು ಮೂಡಿಸಬಹುದಾಗಿದೆ ಎಂದು ತಿಮ್ಮಣ್ಣಚಾರ್ ತಿಳಿಸಿದರು.

ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ಮಾತನಾಡಿ ಮುಂದಿನ ಪೀಳಿಗೆಗಾಗಿ ನೆಲ, ಜಲ, ವಾಯುಗಳನ್ನು ರಕ್ಷಿಸುವುದು ನಮ್ಮೆಲ್ಲರ ಹೊಣೆ. ಇವುಗಳಿಗೆ ಆಗುತ್ತಿರುವ ಗಂಡಾಂತರಗಳನ್ನು ತಡೆಯಬೇಕಿದೆ. ಭಾರತದಲ್ಲಿ ಅತಿದೊಡ್ಡ ಸಮಸ್ಯೆಯೆಂದರೆ ಪರಿಸರ ನಾಶ. ಪರಿಸರ ಉಳಿಸುವ ಕಾರ್ಯವನ್ನು ಹೆಚ್ಚಾಗಿ ಮಾಡಬೇಕಿದೆ ನಮ್ಮಲ್ಲಿ ಮನಪರಿವರ್ತನೆಯಾದರೆ ಮಾತ್ರ ಪರಿಸರ ಸ್ವಚ್ಚತೆ ಸಾಧ್ಯ ಎಂದು ತಿಳಿಸಿದರು.

ಇಂದು ಅಂತರ್ಜಾಲ, ಸಾಮಾಜಿಕ ಜಾಲತಾಣಗಳ ಮೂಲಕವೂ ಪರಿಸರದ ಬಗ್ಗೆ ಮಾಹಿತಿ ಪಡೆಯಬಹುದು ಮಾಹಿತಿ ತಂತ್ರಜ್ಞಾನದ ಬಳಕೆ ಹೆಚ್ಚಿದೆ ಅವುಗಳನ್ನು ಬಳಸುವುದರ ಮೂಲಕವೂ ಅರಿವು ಮೂಡಿಸೋಣ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವಿದ್ಯಾರ್ಥಿಗಳು ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಹೊರ ದೇಶಗಳಲ್ಲಿ ಪಾಲಿಸುವಂತಹ ಶಿಸ್ತು ಕ್ರಮಗಳನ್ನು ನಮ್ಮ ದೇಶದಲ್ಲಿಯೂ ಪಾಲಿಸೋಣ. ಮಕ್ಕಳಲ್ಲಿ ಈಗಿನಿಂದಲೇ ಪರಿಸರದ ಬಗ್ಗೆ ಅರಿವು ಮೂಡಿಸಬೇಕು ಎಂದು ಅಕ್ರಂ ಪಾಷ ಹೇಳಿದರು.

ಡಯಟ್ ಕಾಲೇಜಿನ ಪ್ರಾಂಶುಪಾಲರಾದ ಡಿ.ಟಿ ಪುಟ್ಟರಾಜು ಮಾತನಾಡಿ ಸರ್ಕಾರಿ ಶಾಲೆ, ಖಾಸಗಿ ಶಾಲೆಗಳೆರಡರಿಂದಲೂ ಪರಿಸರ ಉಳಿಯಬೇಕಿದೆ. ಪಠ್ಯ ಪುಸ್ತಕಗಳ ಜೊತೆಗೆ ಈ ರೀತಿಯ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಬೇಕು ಪರಿಸರಕ್ಕೆ ಆಗುತ್ತಿರುವ ಹಾನಿಯನ್ನು ತಡೆಯಬೇಕು ಎಂದು ತಿಳಿಸಿದರು.

ಪುಸ್ತಕ ಬಿಡುಗಡೆ: ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ಹಸಿರು ನನಸಾದ –ಕನಸು ಎಂಬ ಪುಸ್ತಕ ಬಿಡುಗಡೆ ಮಾಡಿದರು. ಅರಕಲಗೂಡು ತಾಲ್ಲೂಕು ಬಿದರೂರಿನ ಸರ್ಕಾರಿ ಪ್ರೌಢ ಶಾಲೆಯು ಪರಿಸರ ಮಿತ್ರ ಶಾಲೆ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿತು.

ದುದ್ದ ಹೋಬಳಿಯ ಅಟ್ಟಾವರದ ಸರ್ಕಾರಿ ಪ್ರೌಡ ಶಾಲೆ ಸೇರಿದಂತೆ ಒಟ್ಟು 9 ಶಾಲೆಗಳು ತಲಾ 5000 ರೂ, ಪ್ರಶಸ್ತಿಯನ್ನು ಹಾಗೂ ಹಸಿರು ಶಾಲೆಯಾಗಿ ಬೇಲೂರು ತಾಲ್ಲೂಕಿನ ಸಂಕೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಸೇರಿದಂತೆ 9 ಶಾಲೆಗಳು ಹಳದಿ ಶಾಲೆಗಳಾಗಿ ತಲಾ 4000 ರೂ ಪ್ರಶಸ್ತಿ ಪ್ರದಾನವನ್ನು ಪಡೆದುಕೊಂಡವು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಸಿ.ಕೆ. ಬಸವರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪರಿಸರ ಅಧಿಕಾರಿಗಳಾದ ಎ. ಉದಯ್‍ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಹೆಚ್. ಮಂಜುನಾಥ್, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ.ಸಿ ರವಿಶಂಕರ, ಪರಿಸರ ಮಿತ್ರಶಾಲೆಯ ಯೋಜನಾ ವ್ಯವಸ್ಥಾಪಕರಾದ ಹೆಚ್.ಎಂ.ಓಂಕಾರಪ್ಪ, ಪ್ರಭಾರ ಪರಿಸರ ಅಧಿಕಾರಿಗಳಾದ ಕೆ.ರವಿಚಂದ್ರ ಹಾಜರಿದ್ದರು. (ಎನ್.ಬಿ)

Leave a Reply

comments

Related Articles

error: