ಮೈಸೂರು

ನಂಜನಗೂಡಿನ ನಂಜುಂಡೇಶ್ವರನ ಜಾತ್ರೆಯಲ್ಲಿ ವಿತರಿಸುವ ಪ್ರಸಾದಕ್ಕೆ ಸುರಕ್ಷತಾ ಸರ್ಟಿಫಿಕೇಟ್ ಕಡ್ಡಾಯ

 ಮೈಸೂರು,ಮಾ.12:-  ದಕ್ಷಿಣ ಕಾಶಿ ನಂಜನಗೂಡಿನ ನಂಜುಂಡೇಶ್ವರನ ಜಾತ್ರೆಯಲ್ಲಿ ವಿತರಿಸುವ ಪ್ರಸಾದಕ್ಕೆ ಸುರಕ್ಷತಾ ಸರ್ಟಿಫಿಕೇಟ್ ಕಡ್ಡಾಯವಂತೆ. ಇಲ್ಲದಿದ್ದರೆ ಪ್ರಸಾದವನ್ನೇ ಹಂಚೋ ಹಾಗಿಲ್ಲ.

ಚಾಮರಾಜನಗರದ ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದಲ್ಲಿ ವಿಷಪ್ರಸಾದ ಸೇವನೆಯಿಂದ ಹಲವು ಸಾವು ನೋವು ಸಂಭವಿಸಿದ್ದು, ಜನತೆ   ದೇವಸ್ಥಾನದಲ್ಲಿ ಪ್ರಸಾದ ಸ್ವೀಕರಿಸಲು ಹಿಂದೆ ಮುಂದೆ ನೋಡುವಂತಾಗಿದೆ. ಅದಕ್ಕಾಗಿಯೇ ನಂಜನಗೂಡಿನ ನಂಜುಂಡೇಶ್ವರನ ಜಾತ್ರೆಯಲ್ಲಿ ಪ್ರಸಾದ ಹಂಚಿಕೆಗೆ  ಸುರಕ್ಷತಾ ಸರ್ಟಿಫಿಕೇಟ್ ಇರಲೇಬೇಕೆಂಬ ಆದೇಶ ಹೊರಡಿಸಲಾಗಿದೆಯಂತೆ.  ಸುರಕ್ಷತಾ ಸರ್ಟಿಫಿಕೇಟ್ ಇಲ್ಲ ಅಂದರೆ ಪ್ರಸಾದವನ್ನು ಹಂಚಿಕೆ ಮಾಡೋ ಹಾಗಿಲ್ಲ. ನಂಜನಗೂಡು ತಾಲೂಕು ಆರೋಗ್ಯಾಧಿಕಾರಿಗಳು 10 ಅಂಶಗಳ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದಾರೆ. ಮಾರ್ಚ್ 19 ರಿಂದ ನಂಜುಡೇಶ್ವರನ ಜಾತ್ರೆ ಹಿನ್ನಲೆಯಲ್ಲಿ  ಆರೋಗ್ಯ ಇಲಾಖೆ, ದೇವಸ್ಥಾನದ ಆಡಳಿತ ಮಂಡಲಿ ಸುರಕ್ಷಿತ ಕ್ರಮಕ್ಕೆ ಮುಂದಾಗಿದೆ. ಸಂಘ ಸಂಸ್ಥೆಗಳು,ದತ್ತಿ ಸಂಸ್ಥೆಗಳು ,ದಾನಿಗಳು ಭಕ್ತರಿಗೆ  ನೀಡೊ ಪ್ರಸಾದದ ಮೇಲೆ ಹದ್ದಿನ ಕಣ್ಣಿರಿಸಿದ್ದಾರೆ. ದೇವಾಲಯದ ಆವರಣದಲ್ಲಿ ಅನುಮತಿ ಇಲ್ಲದೆ ಪ್ರಸಾದ ವಿತರಣೆಗೆ ಅವಕಾಶ ಇಲ್ಲ. ಆರೋಗ್ಯ ಇಲಾಖೆಯಿಂದ ಪರೀಕ್ಷೆಗೆ ಒಳಪಡಿಸಿ, ಆಹಾರ ಯೋಗ್ಯವಾಗಿದೆ ,ಸ್ವೀಕರಿಸಲು ಯೋಗ್ಯವಾಗಿದೆ ಎಂದು ಧೃಡೀಕರಿಸಿದ ನಂತರವಷ್ಟೇ ಪ್ರಸಾದ ವಿತರಿಸಬೇಕು. ಆಹಾರ ಇಲಾಖೆಯಿಂದ ಅನುಮತಿ ಪಡೆದ ಬಳಿಕವಷ್ಟೇ ಪ್ರಸಾದ ಹಂಚಿಕೆಗೆ ಅವಕಾಶ ಕಲ್ಪಿಸಲಾಗಿದೆ.  ಆಹಾರ ಸರಬರಾಜು ಮಾಡುವ ವೇಳೆ ಶುಚಿತ್ವ ಕಾಪಾಡಿಕೊಂಡು,  ಅಂಟು ರೋಗ, ಸಾಂಕ್ರಾಮಿಕ ರೋಗ ಇಲ್ಲ ಎನ್ನುವುದರ ಬಗ್ಗೆ  ವೈದ್ಯರಿಂದ ಪ್ರಮಾಣಪತ್ರ ಪಡೆಯಬೇಕು.  ಖರೀದಿ ಮಾಡಿದ ಆಹಾರ ಪದಾರ್ಥಗಳ ವಾರಂಟಿಯನ್ನು ರಶೀದಿ ಪಡೆದು ಇಟ್ಟಿರಬೇಕು ಎನ್ನಲಾಗಿದೆ. ಒಟ್ಟಿನಲ್ಲಿ ಪ್ರಸಾದ ವಿಷಯಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: