ಮೈಸೂರು

ವಿಶ್ವವಿದ್ಯಾನಿಲಯಗಳು ಶಿಸ್ತಿಲ್ಲದೇ, ಅಶಿಸ್ತಿನ ಕೇಂದ್ರಗಳಾಗುತ್ತಿವೆ : ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಬೇಸರ

ಮೈಸೂರು,ಮಾ.12:- ವಿಶ್ವವಿದ್ಯಾನಿಲಯಗಳು ಶಿಸ್ತಿಲ್ಲದೇ, ಅಶಿಸ್ತಿನ ಕೇಂದ್ರಗಳಾಗುತ್ತಿವೆ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ಅವರಿಂದು ಮೈಸೂರು ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದ ವತಿಯಿಂದ ವಿವಿಯ ನೂತನ ಕುಲಪತಿಗಳು, ಕುಲಸಚಿವರು ಹಾಗೂ ಪರೀಕ್ಷಾಂಗ ಕುಲಸಚಿವರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ ಬಹಳ ಮುಖ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರು ಕೂಡ ಶಿಕ್ಷಣ ಮುಖ್ಯ ಎಂಬುದನ್ನೇ ಪ್ರತಿಪಾದಿಸಿದರು. ದಲಿತರು ಆಸ್ತಿ ಹೊಂದಿರತಕ್ಕ ಜನಾಂಗವಲ್ಲ. ಶಿಕ್ಷಣವೇ ಅವರ ಆಸ್ತಿ. ವ್ಯಾಪಾರ, ವಹಿವಾಟು,ಕೈಗಾರಿಕೆಗಳಲ್ಲಿ ಪೈಪೋಟಿ ಮಾಡಕಾಗಲ್ಲ. ಈಗ ಕಣ್ಣು ಬಿಟ್ಟು ನೋಡುತ್ತಿದ್ದೇವೆ. ಸಂಘಟನೆಯಾಗುತ್ತಿದ್ದೇವೆ ಎಂದರು. ಶಿಕ್ಷಣವನ್ನು ಅಳವಡಿಸಿಕೊಳ್ಳಬೇಕಿದೆ. ರಾಜಕೀಯವನ್ನು ತೃಪ್ತಿಯಾಗುವ ರೀತಿಯಲ್ಲಿ ನಡೆಸಿದ್ದೇನೆಂದರೆ ಅದಕ್ಕೆ ಅಂಬೇಡ್ಕರ್ ಅವರೇ ಕಾರಣ. ಶಿಕ್ಷಣ ಮುಗಿಸುವ ರೀತಿಯಲ್ಲಿ ಶ್ರಮವಹಿಸಿ, ಆಸಕ್ತಿವಹಿಸಿ ಎಂದು ತಿಳಿಸಿದರು. ಹಠ, ಛಲ ಬೆಳೆಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಶ್ರಮ ಹಾಕದಿದ್ದರೆ ಉಪಯೋಗವಾಗಲ್ಲ ಎಂದರು. ಅಂಬೇಡ್ಕರ್ ಅವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವದವರು. ಶಿಕ್ಷಣ ತಜ್ಞರು ಆಗಿದ್ದರು. ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಯಾವ ರೀತಿ ತೆಗೆದುಕೊಂಡರೂ ಚರ್ಚೆ ಮಾಡಬಹುದೆಂದು ತಿಳಿಸಿದರು. ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿವಹಿಸದಿದ್ದರೆ ಜ್ಞಾನ ವಿಕಾಸವಾಗಲ್ಲ. ಪಠ್ಯೇತರ ಚಟುವಟಿಕೆಗಳಿದ್ದರೆ ಭವಿಷ್ಯ ಕೂಡ ಒಳ್ಳೆಯದಾಗಲಿದೆ.  ವಿವಿಯಲ್ಲಿ ವಿದ್ಯೆಗೆ ಎಲ್ಲ ರೀತಿಯ ಸಹಕಾರ ಕೊಡುತ್ತಾರೆ. ಪ್ರೋತ್ಸಾಹ, ಮಾರ್ಗದರ್ಶನ ಸಿಗತ್ತೆ. ಮೈಸೂರು ವಿವಿ ರಾಜರ್ಷಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ರೂಪುಗೊಂಡಿತು. ಶತಮಾನೋತ್ಸವ ಕೂಡ ಆಚರಿಸಲಾಯಿತು. ಒಂದೂವರೆ ವರ್ಷಗಳ ಕಾಲ ಕುಲಪತಿಗಳೇ ಇರಲಿಲ್ಲ.  ಇತ್ತೀಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಶಿಸ್ತಿಲ್ಲ. ಅಶಿಸ್ತಿನ ಕೇಂದ್ರಗಳಾಗುತ್ತಿವೆ. ಅದಾಗಬಾರದು.  ಶಿಸ್ತಿಲ್ಲದಿದ್ದರೆ ವಿದ್ಯಾರ್ಥಿಗಳು ದುಂಬಿಗಳಾಗುತ್ತಾರೆ ಎಂದಿದ್ದರು ಅಂಬೇಡ್ಕರ್. ಒಳ್ಳೆಯ ಹಿನ್ನೆಲೆಯುಳ್ಳ, ಉತ್ತಮ ಶಿಕ್ಷಣ ಪಡೆದವರೇ ಕುಲಪತಿಗಳಾಗಿ ಬಂದಿದ್ದಾರೆ. ವಿವಿಯಲ್ಲಿ ಮಸಿ ಬಳಿಯ ತಕ್ಕ ಘಟನೆಗಳು ನಡೆದಿವೆ. ವಿದ್ಯಾರ್ಥಿಗಳನ್ನು, ಸಂಶೋಧಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಪ್ಪು ಚುಕ್ಕೆ ತೆಗೆಯತಕ್ಕ ಸಾಧ್ಯತೆಯಿದೆ. ಅವರನ್ನು ನೋಡಿದರೆ ಗೊತ್ತಾಗಲಿದೆ. ತಾಳ್ಮೆಯಿಂದ ವಿಚಾರವನ್ನು ಕೇಳುವವರು ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಲಪತಿಗಳ ಜೊತೆ ಕುಲಸಚಿವರ ಕಾರ್ಯವೂ ಅಷ್ಟೇ ಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಜಿ ಹೇಮಂತ್ ಕುಮಾರ್, ಕುಲಸಚಿವ ಪ್ರೊ. ಲಿಂಗರಾಜ ಗಾಂಧಿ, ಪರೀಕ್ಷಾಂಗ ಕುಲಸಚಿವ ಪ್ರೊ.ಮಹದೇವನ್ ಅವರನ್ನು ಅಭಿನಂದಿಸಲಾಯಿತು.

ಈ ಸಂದರ್ಭ ಮಾಜಿ ಮಹಾಪೌರ ಪುರುಷೋತ್ತಮ್, ಮೈಸೂರು ವಿವಿ ಆಡಳಿತಾಧಿಕಾರಿ ಪ್ರೊ.ಡಿ.ಕೆ.ಶ್ರೀನಿವಾಸ್, ಎಪಿಎಂಸಿ ಉಪಾಧ್ಯಕ್ಷ ಚಿಕ್ಕಜವರಪ್ಪ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ.ಸಿ.ರಾಮಸ್ವಾಮಿ, ಸಂಶೋಧಕರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಡಿ.ಮಂಗಲ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: