ಕರ್ನಾಟಕಪ್ರಮುಖ ಸುದ್ದಿ

ದಕ್ಷಿಣ ಕನ್ನಡ: ಸಮರ್ಥ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್

ಮಂಗಳೂರು (ಮಾ.12): ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾ ಅಖಾಡ ಸಿದ್ಧಗೊಂಡಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ಕಂಡಿಲ್ಲ. ಈ ಬಾರಿಯೂ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸುವ ಇರಾದೆಯಲ್ಲಿದೆ. ಆದರೆ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯ ಆಯ್ಕೆಯ ಕಸರತ್ತ ನಡೆಸುತ್ತಿದೆ.

ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಚಾರ ಅಬ್ಬರ ದಿನದಿಂದ ದಿನಕ್ಕೆ ಕ್ಷೇತ್ರದಲ್ಲಿ ರಂಗೇರತೊಡಗಿದೆ. ಕಳೆದ ಏಳು ಚುನಾವಣೆಗಳಲ್ಲಿ ಗೆಲುವು ಮರೀಚಿಕೆ ಆಗಿರುವ ಕಾಂಗ್ರೆಸ್ ಈ ಬಾರಿ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಕಸರತ್ತು ಆರಂಭಿಸಿದೆ.

ಈ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನೇ 3ನೇ ಬಾರಿ ಕಣಕ್ಕಿಳಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಚುನಾವಣೆಯ ಹೊಸ್ತಿಲಲ್ಲಿ ಹಾಲಿ ಸಂಸದ ನಳಿನ್ ಕುಮಾರ್‌ ಕಟೀಲ್ ಅವರ ವಿರುದ್ಧ ಪಕ್ಷದಲ್ಲೇ ಅಸಮಾಧಾನ ಬಹಿರಂಗವಾಗಿದ್ದಾರೂ ಅದನ್ನು ಶಮನಗೊಳಿಸಿ ನಳಿನ್ ಅವರನ್ನೇ ಕಣಕ್ಕಿಳಿಸಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.

ಆದರೆ, ಇದರ ನಡುವೆ ಕಾಂಗ್ರೆಸ್‌ ಈ ಬಾರಿ ಕ್ಷೇತ್ರವನ್ನು ಮತ್ತೆ ವಶಕ್ಕೆ ಪಡೆಯಲು ಕಸರತ್ತು ಆರಂಭಿಸಿದ್ದು, ನಿರಂತರ ಗೆಲುವಿನ ಮೂಲಕ ಬಲವಾಗಿ ಬೇರೂರಿರುವ ಬಿಜೆಪಿಯನ್ನು ಮಣಿಸಲು ಬಲಿಷ್ಠ ಅಭ್ಯರ್ಥಿಗಾಗಿ ಅಳೆದ ಕಳೆದು ಲೆಕ್ಕಾಚಾರಕ್ಕೆ ಹಾಕುತ್ತಿದೆ. ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿಲು ಮಾಜಿ ಸಚಿವ ರಮಾನಾಥ್ ರೈ ಭಾರೀ ಉತ್ಸುಕರಾಗಿದ್ದಾರೆ. ದೆಹಲಿ ಮಟ್ಟದಲ್ಲಿ ಟಿಕೆಟ್‍’ಗಾಗಿ ಲಾಬಿ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಕಾರ್ಯಕರ್ತರಲ್ಲಿ ಹೆಚ್ಚು ಪಾಪ್ಯುಲರ್ ಎಂದರೆ ರಮಾನಾಥ್ ರೈ. ಈ ಕ್ಷೇತ್ರದಿಂದ ಸ್ಪರ್ಧಿಸಲು ರಾಜ್ಯಸಭಾ ಸದಸ್ಯ ಬಿ.ಕೆ ಹರಿಪ್ರಸಾದ್ ಕೂಡ ಉತ್ಸುಕರಾಗಿದ್ದಾರೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಈ ಇಬ್ಬರ ಹೆಸರು ಮುಂಚೂಣಿಯಲ್ಲಿದೆ. ಆದರೆ ಬಿ.ಕೆ ಹರಿಪ್ರಸಾದ್ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರ ಜೊತೆ ಅಷ್ಟೊಂದು ಒಡನಾಟವಿಲ್ಲ. ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆಯಾಗಲಿದೆ.

ಅಲ್ಲದೇ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಹಿರಿಯ ಮುಖಂಡ ಬಿ.ಜನಾರ್ದನ ಪೂಜಾರಿ ಅವರ ಹೆಸರು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದೆ ಎಂದು ಹೇಳಲಾಗಿದೆ. ಅಚ್ಚರಿಯ ಬೆಳವಣಿಗೆ ಒಂದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌.ರಾಜೇಂದ್ರಕುಮಾರ್‌ ಅವರ ಹೆಸರುಗಳನ್ನು ಪಕ್ಷದ ರಾಜ್ಯ ಘಟಕದಿಂದ ಶಿಫಾರಸು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ರಮಾನಾಥ್ ರೈ ಅವರಿಗೆ ಟಿಕೆಟ್ ದೊರೆಯುವುದು ಬಹುತೇಕ ಖಚಿತ ಎಂದು ಹೇಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಹೀನಾಯವಾಗಿ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಗೆಲುವಿನ ಮೂಲಕ ಚೇತರಿಕೆ ಕಾಣುವ ಬಯಕೆಯಲ್ಲಿದೆ. 1991ರಿಂದ ಕೈಯಿಂದ ತಪ್ಪಿ ಹೋಗಿರುವ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಈ ಬಾರಿ ಕಾಂಗ್ರೆಸ್‌ ಪಾಲಿಗೆ ಪ್ರತಿಷ್ಠೆಯ ಕಣವಾಗಿದೆ.

ಚುನಾವಣೆಯ ಹೊಸ್ತಿಲಲ್ಲಿ ಹಾಲಿ ಸಂಸದ ನಳಿನ್ ಕುಮಾರ್‌ ಕಟೀಲ್ ವಿರುದ್ಧ ಜಿಲ್ಲೆಯಲ್ಲಿ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬ ಸೇರಿದಂತೆ ಹಲವು ವಿಚಾರಗಳಲ್ಲಿ ಬಿಜೆಪಿ ಪಾಳಯದಲ್ಲೇ ನಳಿನ್ ವಿರುದ್ಧ ಅಸಮಾಧಾನವಿದೆ. ಇದರ ಲಾಭ ಪಡೆಯಲು ಕಾಂಗ್ರೆಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲುವನ್ನು ಬಿಜೆಪಿಯಿಂದ ಕಸಿದುಕೊಳ್ಳಲು ಕಾಂಗ್ರೆಸ್‌ ತಂತ್ರ ರೂಪಿಸುತ್ತಿದೆ. (ಎನ್.ಬಿ)

Leave a Reply

comments

Related Articles

error: