ಕ್ರೀಡೆ

5ನೇ ಏಕದಿನ ಪಂದ್ಯ: ಭಾರತಕ್ಕೆ 273 ರನ್ ಗಳ ಸವಾಲು

ನವದೆಹಲಿ,ಮಾ.13-ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯ 5ನೇ ಹಾಗೂ ಕೊನೆಯ ಪಂದ್ಯದಲ್ಲಿ ಆಸೀಸ್ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 272 ರನ್‌ ಗಳಿಸಿದೆ.

ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆರಂಭಿಕ ಆಟಗಾರ ಉಸ್ಮಾನ್ ಖ್ವಾಜಾ ಭರ್ಜರಿ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಉತ್ತಮ ಮೊತ್ತ ದಾಖಲಿಸಿತು. 102 ಎಸೆತಗಳಲ್ಲಿ ಖ್ವಾಜಾ ಶತಕ ದಾಖಲಿಸಿದರು. ಆದರೆ ಅತಿ ಕಡಿಮೆ ಅವಧಿಯಲ್ಲಿಯೇ ಮೂರು ವಿಕೆಟ್‌ಗಳು ಕುಸಿದ ನಂತರ ಆಸ್ಟ್ರೇಲಿಯಾ ರನ್‌ ಗಳಿಕೆ ಗತಿ ನಿಧಾನವಾಯಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಆಸ್ಟ್ರೇಲಿಯಾ ನಾಯಕ ಆ್ಯರನ್‌ ಫಿಂಚ್‌ ಮತ್ತು ಉಸ್ಮಾನ್‌ ಖ್ವಾಜಾ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್ ಜತೆಯಾಟದಲ್ಲಿ ಉಭಯ ಆಟಗಾರರು 76 ರನ್‌ ಕಲೆ ಹಾಕಿದರು. 43 ಎಸೆತಗಳಲ್ಲಿ 27 ರನ್‌ ಗಳಿಸಿದ್ದ ಆ್ಯರನ್‌ ಫಿಂಚ್‌ ರವೀಂದ್ರ ಜಡೇಜಾ ಎಸೆತಕ್ಕೆ ಕ್ಲೀನ್‌ ಬೌಲ್ಡ್‌ ಆದರು.

ಉಸ್ಮಾನ್‌ ಖ್ವಾಜಾ 2 ಆಕರ್ಷಕ ಸಿಕ್ಸರ್‌ ಮತ್ತು 10 ಬೌಂಡರಿಗಳ ನೆರವಿವಿನಿಂದ ಶತಕ ಸಿಡಿಸಿದರು. 106 ಎಸೆತಗಳಲ್ಲಿ ಬರೋಬ್ಬರಿ 100 ರನ್‌ ಗಳಿಸಿದರು. ನಂತರದ ಆಟದಲ್ಲಿ ಖ್ವಾಜಾ ಮತ್ತು ಪೀಟರ್‌ ಹ್ಯಾಂಡ್ಸ್‌ಕೊಂಬ್‌ (52) ತಂಡದ ರನ್‌ ವೇಗ ಹೆಚ್ಚಿಸಿದರು. ಖ್ವಾಜಾ ಶತಕ ಗಳಿಸುತ್ತಿದ್ದಂತೆ ಪೆವಿಲಿಯನ್‌ ಸೇರಿದರು.

ಖ್ವಾಜಾ ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾ ತಂಡದ ಪರೇಡ್‌ ಆರಂಭವಾಯಿತು. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್‌ (1), ಮಾರ್ಕಸ್‌ ಸ್ಟೊನಿಸ್‌ (20), ಆಸ್ಟನ್‌ ಟರ್ನರ್‌ (20) ಸ್ಕೋರ್‌ ಕಾರ್ಡ್‌ದಾರರಿಗೆ ಹೆಚ್ಚು ಶ್ರಮ ನೀಡದೇ ಪೆವಿಲಿಯನ್‌ ಸೇರಿದರು. ಕೊನೆಯ ಕ್ರಮಾಂಕದಲ್ಲಿ ರಿಚರ್ಡ್‌ಸನ್‌ 29 ರನ್‌ ಗಳಿಸಿ ತಂಡದ ಮೊತ್ತವನ್ನು 270ರ ಗಡಿ ದಾಟಿಸಿದರು.

ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಭಾರತ ತಂಡ ಗೆದ್ದರೆ, ನಂತರದ 2 ಪಂದ್ಯಗಳಲ್ಲಿ ತಿರುಗೇಟು ನೀಡಿರುವ ಆಸ್ಪ್ರೇಲಿಯಾ ತಂಡ 2-2ರಲ್ಲಿ ಸಮಬಲ ತಂದುಕೊಂಡಿದೆ. ಹೀಗಾಗಿ ಈ ಪಂದ್ಯ ನಿರ್ಣಾಯಕ ಪಂದ್ಯವಾಗಿದೆ. (ಎಂ.ಎನ್)

 

Leave a Reply

comments

Related Articles

error: