ಕ್ರೀಡೆ

ಟಿ20 ಟ್ರೋಫಿ ಕೈಚೆಲ್ಲಿದ ಕರ್ನಾಟಕ ತಂಡ

ಮುಂಬೈ,ಮಾ.14-ಗೆಲುವಿಗೆ 131 ರನ್‌ ಗುರಿ ಬೆನ್ನತ್ತಿದ ಕರ್ನಾಟಕ, ಪಂಜಾಬ್‌ ವಿರುದ್ಧ ಅಂತಿಮ ಓವರ್‌ನಲ್ಲಿ 6 ರನ್‌ ಗಳಿಸಲು ಪರದಾಡಿ ಟ್ರೋಫಿ ಕೈಚೆಲ್ಲಿತು. ರಾಷ್ಟ್ರೀಯ ಟಿ20 ಲೀಗ್‌ ಫೈನಲ್‌ನಲ್ಲಿ 4 ರನ್‌ ಸೋಲು ಕಂಡ ರಾಜ್ಯ ತಂಡ ನಿರಾಸೆ ಅನುಭವಿಸಿತು.

ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಜಸಿಯಾ ಅಖ್ತರ್‌ರ ಆಕರ್ಷಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 131 ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನತ್ತಿದ ಕರ್ನಾಟಕಕ್ಕೆ ವಿ.ಆರ್‌.ವನಿತಾ ಸ್ಫೋಟಕ ಆರಂಭ ಒದಗಿಸುವ ಸೂಚನೆ ನೀಡಿದರು. ಒಂದು ಸಿಕ್ಸರ್‌ ಹಾಗೂ ಬೌಂಡರಿಯೊಂದಿಗೆ 13 ರನ್‌ ಗಳಿಸಿದ ವನಿತಾ ವಿವಾದಾತ್ಮಕ ತೀರ್ಪಿಗೆ ಬಲಿಯಾದರು.

ಶುಭಾ (14), ನಾಯಕಿ ರಕ್ಷಿತಾ (07) ಬೇಗನೆ ಔಟಾದರು. ಆದರೆ ದಿವ್ಯಾ ಹಾಗೂ ಪ್ರತ್ಯುಷಾ 4ನೇ ವಿಕೆಟ್‌ಗೆ ಉತ್ತಮ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. 44 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್‌ನೊಂದಿಗೆ 41 ರನ್‌ ಗಳಿಸಿದ ದಿವ್ಯಾ, ತಂಡದ ಗೆಲುವಿಗೆ 29 ರನ್‌ ಅಗತ್ಯವಿದ್ದಾಗ ಔಟಾದರು. 19ನೇ ಓವರ್‌ನ ಕೊನೆ ಎಸೆತದಲ್ಲಿ ಆಕಾಂಕ್ಷ ಕೊಹ್ಲಿ (03) ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್‌ ಚೆಲ್ಲಿದ್ದು, ಕರ್ನಾಟಕಕ್ಕೆ ಹಿನ್ನಡೆಯಾಯಿತು.

2 ಓವರ್‌ನಲ್ಲಿ 20ಕ್ಕೂ ಹೆಚ್ಚು ರನ್‌ ಚಚ್ಚಿಸಿಕೊಂಡಿದ್ದ ನೀಲಂ ಬಿಷ್ತ್ 20ನೇ ಓವರ್‌ ಎಸೆಯುವ ಅವಕಾಶ ಪಡೆದರು. ವಿಕೆಟ್‌ ಕೀಪರ್‌ ಪ್ರತ್ಯೂಷಾ ಮೊದಲ ಎಸೆತದಲ್ಲಿ ರನ್‌ ಗಳಿಸಲಿಲ್ಲ. 2ನೇ ಎಸೆತದಲ್ಲಿ ಅವರು ಔಟಾದರು. 3ನೇ ಎಸೆತದಲ್ಲಿ ಸಿಮ್ರನ್‌ ಹೆನ್ರಿ 1 ರನ್‌ ಗಳಿಸಿ ಪ್ರತ್ಯುಷಾಗೆ ಸ್ಟ್ರೈಕ್ ನೀಡಿದರು. ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದಿದ್ದ ಪ್ರತ್ಯುಷಾ ಕೊನೆ 3 ಎಸೆತಗಳಲ್ಲಿ ಒಂದೂ ರನ್‌ ಗಳಿಸಲಿಲ್ಲ. ಕರ್ನಾಟಕ ಕೊನೆ ಓವರಲ್ಲಿ ಕೇವಲ 1 ರನ್‌ ಗಳಿಸಿ ಸೋಲಿಗೆ ಶರಣಾಯಿತು. ಪ್ರತ್ಯುಷಾ 31 ಎಸೆತಗಳಲ್ಲಿ 35 ರನ್‌ ಗಳಿಸಿದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಇದಕ್ಕೂ ಮುನ್ನ ಪಂಜಾಬ್‌ನ ಆರಂಭಿಕ ಆಟಗಾರ್ತಿ ಜಸಿಯಾಗೆ 5ಕ್ಕೂ ಹೆಚ್ಚು ಜೀವದಾನ ದೊರೆಯಿತು. ಕರ್ನಾಟಕ ಆಟಗಾರ್ತಿಯರ ಕ್ಷೇತ್ರರಕ್ಷಣೆ ಅತ್ಯಂತ ಕಳಪೆಯಾಗಿತ್ತು. ಇದರ ಸಂಪೂರ್ಣ ಲಾಭವೆತ್ತಿದ ಜಸಿಯಾ 54 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ನೊಂದಿಗೆ 56 ರನ್‌ ಗಳಿಸಿದರು. ನೀಲಂ ಬಿಷ್ತ್ 14 ಎಸೆತಗಳಲ್ಲಿ 27 ರನ್‌ ಸಿಡಿಸಿ ತಂಡಕ್ಕೆ ನೆರವಾದರು.

ಸ್ಕೋರ್‌: ಪಂಜಾಬ್‌ 20 ಓವರ್‌ಗಳಲ್ಲಿ 131/7 (ಜಸಿಯಾ 56, ನೀಲಂ 27, ಸಿಮ್ರನ್‌ 2-26), ಕರ್ನಾಟಕ 20 ಓವರ್‌ಗಳಲ್ಲಿ 127/7 (ದಿವ್ಯಾ 41, ಪ್ರತ್ಯುಷಾ 35, ಸುನಿತಾ 2-19) (ಎಂ.ಎನ್)

 

Leave a Reply

comments

Related Articles

error: