ಕ್ರೀಡೆ

ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾಗೆ ಸರಣಿ ಜಯ

ನವದೆಹಲಿ,ಮಾ.14-ಆಸ್ಟ್ರೇಲಿಯಾ ವಿರುದ್ಧ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 35 ರನ್ ಅಂತರದಲ್ಲಿ ಸೋಲು ಅನುಭವಿಸಿದೆ. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 2-3ರ ಅಂತರದ ಹೀನಾಯ ಸೋಲು ಎದುರಿಸಿದೆ.

ಭಾರತ 50 ಓವರ್ ಗಳಲ್ಲಿ 237 ರನ್ ಗಳಿಸಿ ಸೋಲುಂಡಿದೆ. ಮೊದಲ 2 ಪಂದ್ಯಗಳನ್ನು ಜಯಿಸಿದ್ದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಏಕದಿನ ಸರಣಿಯನ್ನು ಜಯಿಸುವ ವಿಶ್ವಾಸದಲ್ಲಿತ್ತು. ಆದರೆ, ಆಸ್ಟ್ರೇಲಿಯ ಭರ್ಜರಿ ಆಟ ಪ್ರದರ್ಶಿಸಿ, ಸರಣಿ ಜಯಿಸಿದೆ.

5ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಉಸ್ಮಾನ್ ಖ್ವಾಜಾ ಶತಕದ ನೆರವಿನಿಂದ 50 ಓವರುಗಳಲ್ಲಿ 9 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತ್ತು. 273 ರನ್ ಗೆಲುವಿನ ಗುರಿ ಪಡೆದ ಭಾರತ 50 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 237 ರನ್ ಗಳಿಸಿ ಸೋಲು ಕಂಡಿತು. ಆಸ್ಟ್ರೇಲಿಯಾ ಪರವಾಗಿ ಆಡಮ್ ಜಂಪಾ 3, ಪ್ಯಾಟ್ ಕಮಿನ್ಸ್ 2, ರಿಚರ್ಡ್ ಸನ್ 2, ಮಾರ್ಕಸ್ ಸ್ಟೋನಿಯಸ್ 2 ವಿಕೆಟ್ ಪಡೆದರು.

ಈ ಸರಣಿ ಸೋಲು ನಾಯಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ಅತಿ ದೊಡ್ಡ ಕಪ್ಪು ಚುಕ್ಕೆಯಾಗಿದೆ. ಏಕೆಂದರೆ ತವರು ಮೈದಾನದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಇದುವರೆಗೆ ಸರಣಿ ಸೋಲನ್ನು ಕಂಡಿರಲಿಲ್ಲ. ಭಾರತವು ತವರು ಮೈದಾನದಲ್ಲಿ ಕೊನೆಯದಾಗಿ 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 2-3ರ ಅಂತರದಲ್ಲಿ ಸೋಲನುಭವಿಸಿತ್ತು.

ಇದರೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ತವರು ಮೈದಾನದಲ್ಲಿ ಮೊದಲ ಬಾರಿಗೆ ಸರಣಿ ಸೋಲಿನ ಮುಖಭಂಗ ಎದುರಿಸಿದೆ. ಅಷ್ಟೇ ಯಾಕೆ ಕೊಹ್ಲಿ ಕಪ್ತಾನಗಿರಿಯಲ್ಲಿ ಇದೇ ಮೊದಲ ಬಾರಿಗೆ ಸತತ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಸೋಲನುಭವಿಸಿದೆ.

ಭಾರತ ನಾಡಿನಲ್ಲಿ ಆಸೀಸ್ ಕೊನೆಯದಾಗಿ 2009 ಏಕದಿನ ಸರಣಿ ಗೆಲುವನ್ನು ದಾಖಲಿಸಿತ್ತು. ಈ ಹಿನ್ನಲೆಯಲ್ಲಿ ದಶಕದ ಬಳಿಕ ಮತ್ತೆ ಭಾರತದ ನೆಲದಲ್ಲಿ ಗೆಲುವಿನ ಸಿಹಿ ಅನುಭವಿಸಿದೆ. ಇದರೊಂದಿಗೆ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಹಾಲಿ ಚಾಂಪಿಯನ್ ಪ್ರಬಲ ತಂಡ ಎಂಬುದನ್ನು ಸಾರಿದೆ. (ಎಂ.ಎನ್)

Leave a Reply

comments

Related Articles

error: