ಕರ್ನಾಟಕಪ್ರಮುಖ ಸುದ್ದಿ

ಚುನಾವಣಾ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ: ಮಂಡ್ಯ ಡಿ.ಸಿ ಮಂಜುಶ್ರೀ

ಮಂಡ್ಯ (ಮಾ.12): ಮಂಡ್ಯ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಿಗೆ ನೀಡುವ ಜಾಹೀರಾತು, ಸಾಮಾಜಿಕ ಜಾಲತಾಣಗಳ ಜಾಹೀರಾತು ಹಾಗೂ ಕಾಸಿಗಾಗಿ ಸುದ್ದಿ ಪ್ರಕಟಣೆಗಳ ಮೇಲೆ ನಿಗಾವಹಿಸಲು ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣಿಕರಣ ಹಾಗೂ ಕಣ್ಗಾವಲು ಸಮಿತಿಯನ್ನು ರಚಿಸಲಾಗಿದ್ದು ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಗಳ ರಾಜಕೀಯ ಜಾಹೀರಾತುಗಳಿಗೆ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮಂಡ್ಯ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ತಿಳಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮಾಧ್ಯಮ ಪ್ರಮಾಣಿಕರಣ ಹಾಗೂ ಕಣ್ಗಾವಲು ಸಮಿತಿಯ ಕಾರ್ಯಗಳ ಕುರಿತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಜಿಲ್ಲಾಮಟ್ಟದ ಮಾಧ್ಯಮ ಪ್ರಮಾಣಿಕರಣ ಹಾಗೂ ಕಣ್ಗಾವಲು ಸಮಿತಿಯಿಂದ ವಿದ್ಯುನ್ಮಾನ ಮಾಧ್ಯಮ, ರೇಡಿಯೋ, ಕೇಬಲ್ ನೆಟ್‍ವರ್ಕ್, ಸಾಮಾಜಿಕ ಜಾಲತಾಣ, ಬಲ್ಕ್ ಎಸ್‍ಎಂಎಸ್ ಮೂಲಕ ಚುನಾವಣಾ ಜಾಹೀರಾತು ನೀಡುವವರು ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಪಕ್ಷ ಅಥವಾ ಅಭ್ಯರ್ಥಿಯು ನಿಗದಿತ ಅರ್ಜಿ ನಮೂನೆಯಲ್ಲಿ ಎಲ್ಲ ಅವಶ್ಯಕ ವಿವರ ಹಾಗೂ ಜಾಹಿರಾತು ವಿಷಯದ ಸಂಪೂರ್ಣ ವಿವರದ ದೃಢೀಕರಿಸಿದ ಸ್ಕ್ರಿಪ್ಟ್ಅನ್ನು ತಲಾ ಎರಡು ಪ್ರತಿಗಳನ್ನು ಸಲ್ಲಿಸಬೇಕು.

ಜಾಹೀರಾತು ತಯಾರಿಕಾ ವೆಚ್ಚವನ್ನು ಹಾಗೂ ರೇಡಿಯೋ, ಕೇಬಲ್ ನೆಟ್‍ವರ್ಕ್, ಬಲ್ಕ್ ಎಸ್‍ಎಂಎಸ್ ಹಾಗೂ ವಿದ್ಯುನ್ಮಾನ ಮಾಧ್ಯಮದಗಳಲ್ಲಿ ಪ್ರದರ್ಶಿಸುವ ವೇಳಾ ಪಟ್ಟಿ ಹಾಗೂ ವೆಚ್ಚವನ್ನು ವಿವರವಾಗಿ ನೀಡಬೇಕು ಎಂದು ಅವರು ತಿಳಿಸಿದರು.

ಜಿಲ್ಲಾಮಟ್ಟದ ಮಾಧ್ಯಮ ಪ್ರಮಾಣಿಕರಣ ಹಾಗೂ ಕಣ್ಗಾವಲು ಸಮಿತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಕಾಸಿಗಾಗಿ ಸುದ್ಧಿಯ ಪ್ರಕಟಣೆಯ ಬಗ್ಗೆ ಪರಿಶೀಲಿಸಬೇಕು. ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ರೇಡಿಯೋ, ಕೇಬಲ್ ನೆಟ್‍ವರ್ಕ್, ಸಾಮಾಜಿಕ ಜಾಲತಾಣಗಳು ಸೇರಿದಂತೆ ಎಲ್ಲಾ ಮಾಧ್ಯಮಗಳ ಮೇಲೆ ನಿಗಾವಹಿಸಿ ಕಾಸಿಗಾಗಿ ಸುದ್ದಿ ಎಂದು ಅನುಮಾನಿಸಲಾದ ಸುದ್ದಿಯನ್ನು ಪರಿಶೀಲಿಸಿ ಸಂಬಂಧಿಸಿದವರಿಗೆ ನೋಟಿಸ್ ನೀಡಿ ವಿವರಣೆ ಪಡೆಯಬೇಕು ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಕಾಸಿಗಾಗಿ ಸುದ್ಧಿ ಅಂತಹ ಸುದ್ಧಿಗಳು ಕಂಡುಬಂದಲ್ಲಿ ಕೂಡಲೇ ಪರಿಶೀಲಿಸಿ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಎಂ.ಜೆ.ರೂಪ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: