ಕರ್ನಾಟಕಪ್ರಮುಖ ಸುದ್ದಿಮೈಸೂರು

ಶಿಕ್ಷಣದ ಮೂಲಕ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ : ಸಿದ್ಧರಾಮಯ್ಯ

ಸುತ್ತೂರು ಕ್ಷೇತ್ರದಲ್ಲಿ ಪ್ರತಿ ವರ್ಷ ಸುತ್ತೂರು ಕ್ಷೇತ್ರದ ಆದಿ ಜಗದ್ಗುರು ಶಿವಯೋಗಿಗಳ ಜ್ಞಾಪಕಾರ್ಥವಾಗಿ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಧಾರ್ಮಿಕ ಜಾತ್ರೆಗಳಲ್ಲಿ ಸುತ್ತೂರು ಜಾತ್ರೆಗೆ ತನ್ನದೇ ಆದ ವಿಶಿಷ್ಟ ಮಹತ್ವವಿದೆ. ಜಾತ್ರೆಯ ಮೂಲಕ ಜನೋಪಯೋಗಿ ಕಾರ್ಯಕ್ರಮಗಳನ್ನು ಜನರಿಗೆತಲುಪಿಸುವ ಕೆಲಸ ನಡೆಯುತ್ತಿದೆ.
ಸುತ್ತೂರು ಕ್ಷೇತ್ರ ಕೇವಲ ಧಾರ್ಮಿಕ ಕಾರ್ಯಕ್ಕೆ ಸೀಮಿತವಾಗಿಲ್ಲ. ಸಾಮಾಜಿಕವಾಗಿ, ಶೈಕ್ಷಣಿಕ, ವೈದ್ಯಕೀಯ ಸೇರಿದಂತೆ ಸಮಾಜದ ವಿವಿಧ ಸ್ತರಗಳಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡುತ್ತಾ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸುತ್ತೂರು ಜಾತ್ರಾ ಮಹೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಮ್ಮ ಸಮಾಜ ಜಡ್ಡುಗಟ್ಟಿದೆ. ಬಹುಸಂಖ್ಯಾತ ಜನರು ಶಿಕ್ಚಣದಿಂದ ವಂಚಿತರಾಗಿದ್ದಾರೆ.
ಶಿಕ್ಷಣದ ಮೂಲಕ ಸಾಮಾಜಿಕ ಅಸಮತೋಲನವನ್ನು ಹೋಗಲಾಡಿಸಲು ಸಾಧ್ಯ ಎಂದರು. ಬಸವಾದಿ ಶರಣರ ಕಾಲದಿಂದಲೂ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ ಇಂದಿಗೂ ಜಾತಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಾಗಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ಬಸವಣ್ಣನವರು ಕಂಡ ಸಮಾಜದ ನಿರ್ಮಾಣ ಆಗಬೇಕಾದರೆ ನಮ್ಮಗಳ ನಡುವಿನ ತಾರತಮ್ಯಗಳು ಮೊದಲು ದೂರವಾಗಬೇಕು.
ಎಲ್ಲರಿಗೂ ಶಿಕ್ಷಣ ಸಿಗಬೇಕು. ಈ ದಿಸೆಯಲ್ಲಿ ಸುತ್ತೂರು ಮಠ ಶ್ರಮಿಸುತ್ತಿದೆ ಎಂದು ನುಡಿದರು.

ನಾನು ವಿದ್ಯಾಭ್ಯಾಸ ಮಾಡದೇ ಹೋಗಿದ್ದರೆ ಇಂದು ಈ ರಾಜ್ಯದ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ.
ಧರ್ಮ ಆಧ್ಯಾತ್ಮದ ಹೆಸರಿನಲ್ಲಿ ತಪ್ಪು ತಿಳುವಳಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು ಎಂದು ಕರೆ ನೀಡಿದರು. ಕೆಲವರು ಬೆವರು ಸುರಿಸಿ ದುಡಿಯುಯುತ್ತಿದ್ದರೇ, ಮತ್ತೆ ಕೆಲವರು ಕುಳಿತು ಉಣ್ಣುತ್ತಾ ಕಾಲ ಕಳೆಯುತ್ತಿದ್ದಾರೆ. ಇದರಿಂದ ಸಾಮಾಜಿಕ ಅಸಮಾನತೆ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಿಸಿದರು

ನನ್ನನ್ನು ಕೆಲವರು ಅಹಿಂದ ನಾಯಕ ಎನ್ನುತ್ತಾರೆ. ಆದರೆ ನಾನು ಅಹಿಂದದವರಿಗೆ ಮಾತ್ರ ಸೀಮಿತವಾಗಿಲ್ಲ.
ನಮ್ಮ ಸರ್ಕಾರ ಜಾರಿಗೆ ತಂದಿರುವ ವಿವಿಧ ಅಭಿವೃದ್ಧಿ ಯೋಜನೆಯನ್ನು ಕೇವಲ ಅಹಿಂದದವರಿಗೆ ಮಾತ್ರ ಸೀಮಿತ ಮಾಡಲಾಗಿದೆಯೇ ಎಂದು ಪ್ರಶ್ನಿಸಿದರು. ಸರ್ಕಾರದ ವಿವಿಧ ಯೋಜನೆಗಳನ್ನು ಸಮಾಜದ ಎಲ್ಲಾ ವರ್ಗದ ಜನರಿಗೂ ತಲುಪಿಸಲಾಗುತ್ತಿದೆ ಎಂದು ಹೇಳಿದರು. ನಮ್ಮದು ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದ ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಇ ವ್ಯವಸ್ಥೆಯನ್ನು ಜಾರಿಗೆ ತಂದದ್ದೇ ನಮ್ಮ ಸರ್ಕಾರ. ಆದರೆ ಇದನ್ನು ಇಡೀ ದೇಶವೇ ಕಾಪಿ ಮಾಡಿದೆ ಎಂದು ವಿಶ್ಲೇಷಣೆ ಮಾಡಿದರು. ರಾಜಸ್ಥಾನ ಹೊರತುಪಡಿಸಿದರೆ ಕರ್ನಾಟಕವೇ ಹೆಚ್ಚು ಒಣಭೂಮಿ ಹೊಂದಿರುವ ಪ್ರದೇಶವಾಗಿದೆ. ಆದರೆ ಇತ್ತೀಚೆಗೆ ಸತತ ಬರಗಾಲ ಎದುರಾಗುತ್ತಿದೆ. ಕುಡಿಯುವ ನೀರಿಗೆ ತೀವ್ರ ಅಭಾವ ಉಂಟಾಗಿದೆ. ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ ಎಂದು ಸದ್ಯದ ವಾಸ್ತವ ಪರಿಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವಗಳನ್ನು ಬೆಳೆಸುವ ಕೆಲಸವಾಗಬೇಕು. ಆಗ ಮಾತ್ರ ವೈಚಾರಿಕ ಮನೋಭಾವ ಬೆಳೆಯಲು ಸಾಧ್ಯ. ಮೌಢ್ಯ ಕಂದಾಚಾರಗಳನ್ನು ತೊಲಗಿಸಬೇಕಿದೆ. ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೇ ಕೇಡುಗಾಲ ಬಂದಿದೆ ಎಂದು ಕೆಲವರು ಹೇಳಿದ್ದರು. ಕೆಲ ಜ್ಯೋತಿಷಿಗಳಂತೂ ಸಿದ್ದರಾಮಯ್ಯ ಮುಂದಿನ ಬಜೆಟ್ ಮಂಡಿಸುವುದೇ ಅನುಮಾನ ಎಂದಿದ್ದರು.ಇದಾದ ಬಳಿಕವೂ ನಾನು ಎರಡು ಬಜೆಟ್ ಮಂಡಿಸಿದ್ದೇನೆ.ಆ ರೀತಿ ಹೇಳಿದ್ದ ಜ್ಯೋತಿಷಿಗಳಿಗೆ ಏನು ಹೇಳಬೇಕು ಎಂದರು.ಇತ್ತೀಚೆಗೆ ಕೇರಳದ ಮಂಜೇಶ್ವರದಲ್ಲೂ ನನ್ನ ಮೇಲೆ ಕಾಗೆ ಹಿಕ್ಕೆ ಹಾಕಿದ್ದನ್ನೇ ಬೇರೆ ಬೇರೆ ವಿಧದಲ್ಲಿ ವ್ಯಾಖ್ಯಾನ ಮಾಡಲಾಯಿತು.
ಇದೆಲ್ಲವನ್ನೂ ನೋಡಿಯೇ ನಾನು ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದೇನೆ.ಆದರೆ ಇದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆಂದು ಹೇಳಿದ ಸಿದ್ದರಾಮಯ್ಯ.ಇತ್ತೀಚೆಗೆ ನಿಧನರಾದ ಮಾಜಿ ಸಚಿವ ಎಚ್. ಎಸ್ ಮಹದೇವಪ್ರಸಾದ್ ಪ್ರಸಾದ್ ರನ್ನು ಸಿದ್ದರಾಮಯ್ಯ ಸ್ಮರಿಸಿಕೊಂಡರು.ಮಹದೇವಪ್ರಸಾದ್ ಈಗ ಇಲ್ಲವಲ್ಲ ಎಂಬುದು ನೋವುಂಟು ಮಾಡಿದೆ. ಮಹದೇವಪ್ರಸಾದ್ ಹಠಾತ್ ನಿಧನದಿಂದಾಗಿ ಓರ್ವ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಅವರ ನಿಧನದಿಂದಾಗಿ ವೈಯಕ್ತಿಕವಾಗಿ, ರಾಜಕೀಯವಾಗಿಯೂ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.

ಈ ಸಂದರ್ಭ   ಸಚಿವ ಹೆಚ್.ಕೆ.ಪಾಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಯೀಮಾ ಸುಲ್ತಾನಾ, ಶಾಸಕ ಎಂ.ಕೆ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: