ಪ್ರಮುಖ ಸುದ್ದಿ

ಲೇಖಕಿ ಡಾ. ಕಾವೇರಿ ಪ್ರಕಾಶ್‍ಗೆ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ

ರಾಜ್ಯ(ಮಡಿಕೇರಿ) ಮಾ.15 :- ಲೇಖಕಿ ಮತ್ತು ಸಾಹಿತಿಗಳಾದ ನಾಪೋಕ್ಲು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕಾವೇರಿ ಪ್ರಕಾಶ್ ಅವರಿಗೆ 2018-19ನೇ ಸಾಲಿನ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಕಸಾಪದಿಂದ ಆಯೋಜಿತ ಕಾರ್ಯಕ್ರಮವನ್ನು ದೀಪ ಬೆಳಗಿ , ಕೊಡಗಿನ ಗೌರಮ್ಮ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದ ರಾಷ್ಟ್ರಕವಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ ಗೌಡ ಅವರು ಮಾತನಾಡಿ, ಕೊಡಗಿನ ಮಹಿಳಾ ಲೇಖಕಿಯರ ಪೈಕಿ ಮತ್ತು ಸಣ್ಣ ಕಥೆಗಳ ಆರಂಭದ ದಿನಗಳಲ್ಲಿ ಕೊಡಗಿನ ಗೌರಮ್ಮ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲೆ ತಮ್ಮ ಸಾಮಾಜಿಕ ಮತ್ತು ಮಹಿಳಾ ಕೇಂದ್ರಿತ ಕಥೆಗಳ ಮೂಲಕ ಹೊಸ ಆಲೋಚನೆಯನ್ನು ಹುಟ್ಟು ಹಾಕಿದ್ದರು ಎಂದು ಬಣ್ಣಿಸಿದರು.

ತಮ್ಮ ತಂದೆಯವರ ಬಗ್ಗೆ ನೆನಪುಗಳನ್ನು ಹಂಚಿಕೊಂಡ ಅವರು, ಕೊಡಗಿನ ಕಾಡುಗಳ ಬಗ್ಗೆ ಅವರಿಗಿದ್ದ ಆಸಕ್ತಿ ಮತ್ತು ಪ್ರೀತಿಯನ್ನು ಉಲ್ಲೇಖಿಸುತ್ತಾ, ಪ್ರತಿಬಾರಿಯೂ ನಾವು ಸುಳ್ಯಕ್ಕೆ ಹೋಗಿ ಬಂದಾಗಲೆಲ್ಲ ಮೊದಲು ಕೇಳುತ್ತಿದ್ದುದೇ ಕೊಡಗಿನ ಕಾಡುಗಳ ಬಗ್ಗೆ ಎಂದು ತಾರಿಣಿ ಬಣ್ಣಿಸಿದರು.

ತಮ್ಮ ತಂದೆಯವರ ಕಾದಂಬರಿ ‘ಮಲೆಗಳಲ್ಲಿ ಮದುಮಗಳು’ ಶುದ್ಧ ಪ್ರತಿಯನ್ನು ತಾವು ತೆಗೆದಿದ್ದು, ತಂದೆಯವರ ಕಾದಂಬರಿ ರಚನೆಯಲ್ಲಿ ಎಷ್ಟು ಮಗ್ನರಾಗಿದ್ದರು ಎಂಬುದಕ್ಕೆ ಅವರು ಊಟ, ತಿಂಡಿ ಸಮಯದ ಪರಿವೆ ಇಲ್ಲದೆ ಕಾದಂಬರಿಯ ಪಾತ್ರಗಳಲ್ಲಿ ತನ್ಮಯರಾಗಿರುತ್ತಿದ್ದರು ಎಂದು ತಾರಿಣಿ ವಿವರಿಸಿದರು.

ತಾವು ಮತ್ತು ತಮ್ಮ ಅಕ್ಕ ಪ್ರಾಥಮಿಕ ಶಾಲೆಯಲ್ಲಿ ಓದುವಾಗಲೆ ಕೊಡಗಿನ ಗೌರಮ್ಮ ಲೇಖಕಿಯಾಗಿ ಹೆಸರು ಮಾಡಿದ್ದಲ್ಲದೆ, ಅವರ ಕಥಾ ಪುಸ್ತಕ ತಮ್ಮ ಅಕ್ಕನಿಗೆ ನಾಟಕವೊಂದರಲ್ಲಿ ಬಹುಮಾನವಾಗಿ ಬಂದಿದ್ದನ್ನು ಕೂಡ ತಾರಿಣಿ ನೆನಪಿಸಿಕೊಂಡರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವಿಶ್ರಾಂತ ಕುಲ ಸಚಿವ ಡಾ. ಕೆ. ಚಿದಾನಂದ ಗೌಡ ಅವರು ಮಾತನಾಡಿ, ಕುವೆಂಪು ಅವರು ಪ್ರಕೃತಿಯ ಕವಿ ಎಂಬುದನ್ನು ಅವರೇ ಹೇಳಿಕೊಂಡಂತೆ ‘ಕಾಡೆನ್ನ ಮೊದಲ ಮನದನ್ನೆ’ ಎಂಬಂತೆ ಮಡಿಕೇರಿ ಮಂಗಳೂರು ರಸ್ತೆಯಲ್ಲಿ ಒಂದು ಬಾರಿ ಸಂಚರಿಸಿದ ಸಂದರ್ಭ ಆರರಿಂದ ಏಳು ಕಿ.ಮೀ. ನಷ್ಟು ದೂರ ಕೊಡಗಿನ ಕಾಡಿನ ಸೊಬಗಿಗೆ ಸೋತು ನಡೆದುಕೊಂಡೇ ಹೋಗಿದ್ದನ್ನು ಚಿದಾನಂದ ಗೌಡ ಸ್ಮರಿಸಿದರು.

ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರ ಕುಟುಂಬಸ್ಥರು ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಮನವಿ ಮಾಡಿದ ಅವರು, ಕೊಡಗಿನ ಗೌರಮ್ಮನವರ ಸಣ್ಣ ಕಥೆಗಳ ಪೈಕಿ ‘ನನ್ನ ಮದುವೆ’ ಮತ್ತು ‘ಕೆಲವು ಕಾಗದಗಳು’ ಕಥೆಗಳನ್ನು ಉದಾಹರಿಸಿ ಸಣ್ಣ ಕಥೆಗಳ ರಚನೆ ಹಾಗೂ ಕಥನ ಶೈಲಿ ಹಾಗೂ ತಂತ್ರದಲ್ಲಿ ಗೌರಮ್ಮನವರು ಸಿದ್ದ ಹಸ್ತರಾಗಿದ್ದರು ಎಂಬುದನ್ನು ಚಿದಾನಂದ ಗೌಡ ಸೋದಾಹರಣವಾಗಿ ವಿವರಿಸಿದರು.

ಕೊಡಗಿನ ಗೌರಮ್ಮನವರು ಎಳೆಯ ಪ್ರಾಯದಲ್ಲಿ ಮರಣ ಹೊಂದದೆ ಇದ್ದಿದ್ದಲ್ಲಿ ಸಾಹಿತ್ಯ ಲೋಕ ಅವರಿಂದ ಮೇರು ಕೃತಿಗಳನ್ನು ನಿರೀಕ್ಷಿಸಬಹುದಿತ್ತೇನೋ ಎಂದು ಹೇಳಿದ ಚಿದಾನಂದ ಗೌಡರು, ಮತ್ತೋರ್ವ ಕನ್ನಡ ಲೇಖಕಿ ತ್ರಿವೇಣಿ ಆಧ್ಯಾತ್ಮಿಕ ಗುರು ಶಂಕರಾಚಾರ್ಯ, ಸ್ವಾಮಿ ವಿವೇಕಾನಂದ ಮತ್ತು ಏಸು ಕ್ರಿಸ್ತ ಮೊದಲಾದವರು ಎಳೆಯ ಪ್ರಾಯದಲ್ಲಿ ವಿಧಿವಶರಾದರು ಕೂಡ ಅಜರಾಮರವಾಗಿ ಉಳಿದಿದ್ದಾರೆ ಎಂದು ಅವರು ವಿಶ್ಲೇಷಿಸಿದರು.       ಬದುಕಿಗೆ ಕಲೆ ಮತ್ತು ಸಾಹಿತ್ಯ ಅವಶ್ಯಕ ಎಂದು ಡಾ. ಕೆ. ಚಿದಾನಂದ ಗೌಡ ಪ್ರ್ರತಿಪಾದಿಸಿದರು.

ಗೌರಮ್ಮ ದತ್ತಿ ನಿಧಿ ಪ್ರಶಸ್ತಿಯನ್ನು ಡಾ. ಕಾವೇರಿ ಪ್ರಕಾಶ್ ಅವರಿಗೆ ತಾರಿಣಿ, ಚಿದಾನಂದ ಗೌಡ ಮತ್ತು ಇತರ ಗಣ್ಯರು ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಕಾವೇರಿ ಪ್ರಕಾಶ್ ಅವರು, ಕೊಡಗಿನ ಗೌರಮ್ಮ 27 ವರ್ಷಗಳ ತಮ್ಮ ಜೀವಿತಾವಧಿಯಲ್ಲಿ ಛಲವಾದಿ ಜೀವನವನ್ನು ನಡೆಸಿ ಹೋಗಿದ್ದಾರೆ. ಕೊಡಗಿನ ಗೌರಮ್ಮ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ. ರಾಷ್ಟ್ರಕವಿ ಕುವೆಂಪು , ಕೊಡಗಿನ ಗೌರಮ್ಮ ಅವರ ಸಾಹಿತ್ಯ ಮತ್ತು ಜೀವನ ನನ್ನ ಮೇಲೆ ಪ್ರಭಾವ ಬೀರಿದೆ ಎಂದು ಕಾವೇರಿ ಪ್ರಕಾಶ್ ಹೇಳಿದರು.

ಕೊಡಗಿನ ಗೌರಮ್ಮ ಸಣ್ಣ ಕಥಾ ಸ್ಪರ್ಧೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮಡಿಕೇರಿಯ ಮಮತ ಮತ್ತು ಮಂಜುಳ ಮೊದಲ ಎರಡು ಪ್ರಶಸ್ತಿಗಳನ್ನು, ಮಾದಾಪುರ ಸಮೀಪದ ಹಟ್ಟಿಹೊಳೆಯ ನಿರ್ಮಲ ವಿದ್ಯಾಸಂಸ್ಥೆಯ ಶ್ರೀಶಾಂತ ಮೂರನೇ ಬಹುಮಾನವನ್ನು ಕೊಡಗು ಜಿಲ್ಲಾ ಜಾನಪದ ಪರಿಷತ್‍ನ ಅಧ್ಯಕ್ಷರಾದ ಬಿ.ಜಿ. ಅನಂತಶಯನರಿಂದ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಕಸಾಪ ಪದಾಧಿಕಾರಿಗಳಾದ ಬಾಳೆಯಡ ಕಿಶನ್ ಪೂವಯ್ಯ, ಕೊಡಗು ಲೇಖಕಿಯರ ಸಂಘದ ಅಧ್ಯಕ್ಷರಾದ ಕಸ್ತೂರಿ ಗೋವಿಂದಮ್ಮಯ್ಯ, ನಿವೃತ್ತ ಪ್ರಾಂಶುಪಾಲರಾದ ಪ್ರೊ.ಪಿ.ಎ. ಸುಶೀಲ, ಕಸಾಪ ಪದಾಧಿಕಾರಿ ಡಾ. ಕೆ.ಸಿ. ದಯಾನಂದ ಉಪಸ್ಥಿತರಿದ್ದರು.

ಮೊದಲಿಗೆ ಶ್ರೀರಕ್ಷಾ ಪ್ರಾರ್ಥಿಸಿದರೆ, ಕಸಾಪ ಪದಾಧಿಕಾರಿ ಪುಷ್ಪ ಸ್ವಾಗತಿಸಿ, ಆಂಗೀರ ಕುಸುಮ ಕಾರ್ಯಪ್ಪ ನಿರೂಪಿಸಿ ವಂದಿಸಿದರು. ನಾಪೋಕ್ಲು ಪದವಿ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆಯನ್ನು ಪ್ರಸ್ತುತಪಡಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: