ಪ್ರಮುಖ ಸುದ್ದಿ

  ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ, ಪ್ರತಿಯೊಬ್ಬರು ಕಾನೂನು ಪಾಲಿಸಿ : ಸತ್ರ ನ್ಯಾಯಾಧೀಶ ವೀರಪ್ಪ ವಿ.ಮಲ್ಲಾಪುರ ಕರೆ

ರಾಜ್ಯ(ಮಡಿಕೇರಿ) ಮಾ.15 :- ದೇಶದ ಕಾನೂನು ನಮಗಷ್ಟೇ ಸೀಮಿತವಾಗಿದೆ, ಉಳಿದವರು ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವ ಮನೋಭಾವವನ್ನು ಬಿಟ್ಟು ಪ್ರತಿಯೊಬ್ಬರು ಕಾನೂನು ಪರಿಪಾಲನೆ ಮಾಡಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವೀರಪ್ಪ ವಿ.ಮಲ್ಲಾಪುರ ಕರೆ ನೀಡಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ನಡೆದ “ಮಾಧ್ಯಮ ಕ್ಷೇತ್ರ ಮತ್ತು ಕಾನೂನು” ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲವೆಂದರು. ಪ್ರಜ್ಞಾವಂತರೇ ಕಾನೂನು ಪರಿಪಾಲನೆ ಮಾಡದೆ ಇದ್ದರೆ ಇತರರು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಬೇರೆಯವರು ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ನಾವೂ ಕೂಡ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲವೆಂದರು.

ನಾವು ಮಾಡಿದ್ದೇ ಸರಿ ಎನ್ನುವುದಾದರೆ ಕಾನೂನು ಯಾಕೆ ಬೇಕು ಎಂದ ಅವರು ನಮಗಷ್ಟೇ ಈ ಕಾನೂನುಗಳು ಸೀಮಿತವಾಗಿವೆ ಎನ್ನುವ ಅಭಿಪ್ರಾಯಗಳು ಮೊದಲು ದೂರವಾಗಬೇಕೆಂದರು. ದೇಶದ ಕಾನೂನು ಪತ್ರಕರ್ತರು ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ, ಕಾನೂನು ಪರಿಪಾಲನೆ ಮಾಡುವುದÀರಿಂದ ನಮ್ಮ ಸ್ವತಂತ್ರ್ಯಕ್ಕೆ ದಕ್ಕೆಯಾಗುತ್ತದೆ ಎಂದು ಯಾರೂ ಭಾವಿಸಬಾರದು. ಅಪ್ರಾಪ್ತರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಾಗ ಸಂತ್ರಸ್ತರ ಹೆಸರು ಅಥವಾ ಇನ್ಯಾವುದೇ ಮಾಹಿತಿಯನ್ನು ಮತ್ತು ಫೋಟೋವನ್ನು ಪ್ರಕಟಿಸುವಂತ್ತಿಲ್ಲ ಎನ್ನುವ ಕಾನೂನಿದೆ. ಸಂತ್ರಸ್ತೆ ಹಾಗೂ ಆಕೆಯ ಕುಟುಂಬದ ರಕ್ಷಣೆಗಾಗಿ ಮತ್ತು ಸಂತ್ರಸ್ತೆ ಅಥವಾ ಆಕೆಯ ಕುಟುಂಬದ ಮಾಹಿತಿ ಬಹಿರಂಗಗೊಂಡರೆ ಸಮಾಜದಲ್ಲಿ ಅವರ ಮುಂದಿನ ಬದುಕಿಗೆ ತೊಂದರೆಯಾಗಬಹುದು ಎನ್ನುವ ಕಾರಣಕ್ಕಾಗಿ ಈ ಕಾನೂನು ಅನುಷ್ಠಾನದಲ್ಲಿದೆ. ಕಷ್ಟದಲ್ಲಿರುವ ಅಪ್ರಾಪ್ತ ಬಾಲಕಿಯರಿಗೆ ಸಹಾಯ ಮಾಡುವ ರೂಪದಲ್ಲಿ ಅಥವಾ ಸಮಾಜದ ನೆರವು ಸಿಗಬಹುದು ಎನ್ನುವ ಕಾರಣಕ್ಕಾಗಿ ಸುದ್ದಿ ಪ್ರಕಟಿಸುವುದು ಅನಿವಾರ್ಯವಾಗಿದ್ದಲ್ಲಿ ಸಂಬಂಧಿಸಿದ ಪತ್ರಿಕಾಸಂಸ್ಥೆಗಳು ಕಾನೂನಿನ ನೆರವು ಪಡೆಯಲು ಅವಕಾಶವಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

ಯಾವುದೇ ಸುದ್ದಿಗಳನ್ನು ಪ್ರಕಟಿಸುವಾಗ ಕಾನೂನು ಉಲ್ಲಂಘನೆಯಾಗದಂತೆ ಎಚ್ಚರ ವಹಿಸುವುದು ಅಗತ್ಯವೆಂದು ಸಲಹೆ ನೀಡಿದರು.

 ಸತ್ಯವನ್ನು ತಿರುಚುವುದು ಸರಿಯಲ್ಲ

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು “ಮಹಿಳೆ-ಮಕ್ಕಳು, ಪರಿಶಿಷ್ಟ, ಜಾತಿ ಪಂಗಡಗಳ ಕಾನೂನು” ವಿಷಯದ ಕುರಿತು ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪನ್ನೇಕರ್ ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ಹೆಚ್ಚಿನ ವೀಕ್ಷಕರನ್ನು ಬಹುಬೇಗ ಸೆಳೆಯವುದಕ್ಕಾಗಿ ಮತ್ತು ಸುದ್ದಿಯನ್ನು ರಸಭರಿತಗೊಳಿಸುವುದಕ್ಕಾಗಿ ಸತ್ಯವನ್ನು ತಿರುಚುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ನೈಜತೆಗೆ ಆದ್ಯತೆ ನೀಡಿ ಸಮಾಜಮುಖಿಯಾದ ಸುದ್ದಿಗಳನ್ನು ಭಿತ್ತರಿಸಬೇಕೆ ಹೊರತು ಸಿನಿಮಾ ನಟರ ಕುಟುಂಬದ ಸುತ್ತ ಸುತ್ತುವ ಸುದ್ದಿಗಳಿಂದ ಈ ಸಮಾಜಕ್ಕೆ ಯಾವುದೇ ಲಾಭವಿಲ್ಲವೆಂದು ಅಭಿಪ್ರಾಯಪಟ್ಟರು. ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳಿವೆ, ಯುವ ಸಮೂಹ ನಿರುದ್ಯೋಗದ ಸಮಸ್ಯೆಯನ್ನು ಎದುರಿಸುತ್ತಿವೆ. ಈ ರೀತಿಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪರಿಹಾರಕ್ಕಾಗಿ ಸಂಬಂಧಿಸಿದ ಆಡಳಿತ ವ್ಯವಸ್ಥೆಯ ಗಮನ ಸೆಳೆಯುವ ಕಾರ್ಯವನ್ನು ಮಾಧ್ಯಮಗಳು ಮಾಡಬೇಕಾಗಿದೆ. ಒಂದು ವಿಚಾರದ ಬಗ್ಗೆ ಸತತ ಅಧ್ಯಯನದ ಮೂಲಕ ಸುದ್ದಿ ಪ್ರಕಟಿಸುವ ಪ್ರಯತ್ನಗಳು ನಡೆಯಬೇಕು. ಪತ್ರಿಕಾರಂಗದ ಉದ್ದೇಶವನ್ನು ಅರಿತುಕೊಂಡು ಆ ಕ್ಷೇತ್ರದ ಗಟ್ಟಿತವನ್ನು ಹಾಗೂ ದಕ್ಷತೆಯನ್ನು ಉಳಿಸಿಕೊಂಡು ಹೋಗುವ ಕಾರ್ಯವಾಗಬೇಕಾಗಿದೆ ಎಂದು ಎಸ್‍ಪಿ ತಿಳಿಸಿದರು.

ಪತ್ರಿಕಾರಂಗ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ತಪ್ಪುಗಳು ನಡೆಯುತ್ತವೆ. ಆದರೆ ತಪ್ಪುಗಳನ್ನು ಒಪ್ಪಿಕೊಳ್ಳದೆ ಅದನ್ನು ಸಮರ್ಥಿಸಿಕೊಳ್ಳುವುದು ಕಾನೂನಿನಡಿ ದೊಡ್ಡ ತಪ್ಪಾಗಲಿದ್ದು, ಆದಷ್ಟು ಕಾನೂನು ಉಲ್ಲಂಘನೆಯಾಗದಂತೆ ಎಚ್ಚರವಹಿಸಬೇಕು ಎಂದು ಕಿವಿಮಾತು ಹೇಳಿದರು.

ಮಹಿಳೆಯರು ಮತ್ತು ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳನ್ನು ತಕ್ಷಣ ದಾಖಲಿಸಿಕೊಳ್ಳಬೇಕೆನ್ನುವ ಕಾನೂನು ಜಾರಿಯಲ್ಲಿದೆ. ದೂರುಗಳನ್ನು ದಾಖಲಿಸಿಕೊಳ್ಳದೆ ಅಸಡ್ಡೆ ತೋರಿದ ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಿರುವ ಉದಾಹರಣೆಗಳಿವೆ. ಅಪ್ರಾಪ್ತರು ದೌರ್ಜನ್ಯಕ್ಕೊಳಗಾದರೆ ಅವರ ಮಾಹಿತಿಯನ್ನು ಬಹಿರಂಗಪಡಿಸುವಂತ್ತಿಲ್ಲ. ಕಾನೂನಿಗೆ ವಿರುದ್ಧವಾಗಿ ಸುದ್ದಿಗಳು ಪ್ರಕಟಗೊಂಡರೆ ಕಾನೂನಿನ ಜಾಗೃತಿಗಾಗಿ ಇಲಾಖೆ ನೋಟೀಸ್ ನೀಡುತ್ತದೆಯೇ ಹೊರತು ಕ್ರಮಕ್ಕಾಗಿ ಅಲ್ಲವೆಂದು ಎಸ್‍ಪಿ ಸುಮನ್ ಸ್ಪಷ್ಟಪಡಿಸಿದರು.

ಎಸ್‍ಸಿ, ಎಸ್‍ಟಿ ಕಾನೂನು ಸೇರಿದಂತೆ ಜಾರಿಯಲ್ಲಿರುವ ಎಲ್ಲಾ ಕಾನೂನುಗಳ ಆಯಾ ಕಾಲಘಟ್ಟದಲ್ಲಿ ಬದಲಾಗುವುದನ್ನು ಅಧಿಕಾರಿಗಳು ಗಮನಿಸುತ್ತಿರಬೇಕು. ಈ ಬದಲಾವಣೆಗೆ ತಕ್ಕಂತೆ ಪ್ರಕರಣ ದಾಖಲು ಮತ್ತು ತನಿಖೆ ನಡೆಯದಿದ್ದಲ್ಲಿ ಹುದ್ದೆಯನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ಎಸ್‍ಪಿ ವಿವರಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನೂರುನ್ನಿಸಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಅಪ್ರಾಪ್ತ ವಯಸ್ಕ ಮಕ್ಕಳ ಕಾನೂನಿಗೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಅಜ್ಜಿಕುಟ್ಟೀರ ಸೂರಜ್ ಹಾಗೂ ಮಾನಹಾನಿ ವರದಿ ಕಾನೂನಿನ ಕುರಿತು ಖ್ಯಾತ ವಕೀಲ ಪಿ.ಕೃಷ್ಣಮೂರ್ತಿ ಮಾತನಾಡಿದರು.

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಉಪಸ್ಥಿತರಿದ್ದರು. ಪತ್ರಕರ್ತರು ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕಾರಂಗದ ವ್ಯಾಪ್ತಿಯ ಕಾನೂನು ಸಲಹೆಗಳನ್ನು ಅತಿಥಿಗಳಿಂದ ಪಡೆದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: