ಮೈಸೂರು

ಶ್ರೀ ಮಾತೆ ಮಹಾದೇವಿಯವರು ಲಿಂಗೈಕ್ಯ : ಸುತ್ತೂರು ಶ್ರೀ ಸಂತಾಪ

ಮೈಸೂರು,ಮಾ.15:- ಕೂಡಲ ಸಂಗಮ ಕ್ಷೇತ್ರದ ಬಸವಧರ್ಮ ಪೀಠಾಧ್ಯಕ್ಷರಾಗಿದ್ದ ಜಗನ್ಮಾತೆ ಅಕ್ಕಮಹಾದೇವಿ ಅನುಭವ ಪೀಠದ ಮೊದಲ ಮಹಿಳಾ ಜಗದ್ಗುರುಗಳಾಗಿ ಬಸವಾದಿ ಶರಣರ ಸಂದೇಶಗಳನ್ನು ನಿರಂತರವಾಗಿ ನಾಡಿನಾದ್ಯಂತ ಪ್ರಸಾರ ಮಾಡಿಕೊಂಡು ಬರುತ್ತಿದ್ದ ಶ್ರೀ ಮಾತೆ ಮಹಾದೇವಿಯವರು ಲಿಂಗೈಕ್ಯರಾದದ್ದು ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂಸು ಸುತ್ತೂರು ಶಿವರಾತ್ರೀ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಶ್ರೀಲಿಂಗಾನಂದ ಸ್ವಾಮಿಗಳವರಿಂದ ದೀಕ್ಷೆ ಪಡೆದ ಮಾತೆ ಮಹಾದೇವಿಯವರು ಶರಣ ಸಾಹಿತ್ಯದ ವೈಚಾರಿಕತೆ, ಧಾರ್ಮಿಕತೆ ಹಾಗೂ ಪ್ರವಚನ ಕ್ಷೇತ್ರಗಳಿಗೆ ನೀಡಿದ ಕೊಡುಗೆ ಅನನ್ಯವಾದದ್ದು. ಉತ್ತಮ ವಾಗ್ಮಿಗಳಾಗಿ, ಸಾಹಿತಿಗಳಾಗಿ, ಪ್ರವಚನಕಾರರಾಗಿ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರತಿವರ್ಷ ಕೂಡಲ ಸಂಗಮ ಹಾಗೂ ಬಸವ ಕಲ್ಯಾಣದಲ್ಲಿ ಶರಣ ಸಮ್ಮೇಳನಗಳನ್ನು ಆಯೋಜಿಸಿ ಧರ್ಮ ಪ್ರಚಾರದಲ್ಲಿ ನಿರತರಾಗಿದ್ದರು. ಮಾತೆ ಮಹಾದೇವಿಯವರು ಕೈಗೊಂಡ ಕೆಲವು ಪ್ರಗತಿಪರ ಕಾರ್ಯಕ್ರಮಗಳು ಜನಮನ್ನಣೆ ಗಳಿಸಿದ್ದವು. ಬಸವಣ್ಣನವರ ವೈಚಾರಿಕತೆಯನ್ನು ಅನುಷ್ಠಾನಕ್ಕೆ ತರುವ ದಿಸೆಯಲ್ಲಿ ಅವರು ಹಮ್ಮಿಕೊಳ್ಳುತ್ತಿದ್ದ ಪ್ರವಚನ ಕಾರ್ಯಕ್ರಮಗಳು ಭಕ್ತ ಸಮೂಹದಲ್ಲಿ ಸಂಚಲನವನ್ನು ಉಂಟು ಮಾಡುತ್ತಿದ್ದವು. ಮಾತೆ ಮಹಾದೇವಿಯವರ  ಅಗಲುವಿಕೆಯಿಂದ ದುಃಖತಪ್ತರಾಗಿರುವ ಸಮಸ್ತ ಭಕ್ತರಿಗೆ ದುಃಖಭರಿಸುವ ಶಕ್ತಿಯನ್ನು ಹಾಗೂ ಬಸವಧರ್ಮಪೀಠದ ಎಲ್ಲಾ ಸೇವಾಕಾರ್ಯಗಳು ಎಂದಿನಂತೆ ಮುಂದುವರಿಸಿಕೊಂಡು ಹೋಗಲು ಬಸವಾದಿ ಪ್ರಮಥರ ಕೃಪೆ ಇರಲೆಂದು ಹಾರೈಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: