ಮೈಸೂರು

ಪ್ರತಿಯೊಬ್ಬರೂ ಗ್ರಾಹಕರ ಹಕ್ಕು ಮತ್ತು ಜವಾಬ್ದಾರಿಗಳ ತಿಳುವಳಿಕೆ ಹೊಂದುವುದು ಅತ್ಯಗತ್ಯ : ಎಸ್.ಕೆ.ವಂಟಿಗೋಡಿ

ಮೈಸೂರು,ಮಾ.15:- ಪ್ರತಿಯೊಬ್ಬರೂ ಗ್ರಾಹಕರ ಹಕ್ಕು ಮತ್ತು ಜವಾಬ್ದಾರಿಗಳ ತಿಳುವಳಿಕೆ ಹೊಂದುವುದು ಅತ್ಯಗತ್ಯ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಕೆ.ವಂಟಿಗೋಡಿ ತಿಳಿಸಿದರು.

ಅವರಿಂದು ಕುವೆಂಪುನಗರದಲ್ಲಿರುವ ಜೆಎಸ್ ಎಸ್ ಕಾನೂನು ಕಾಲೇಜಿನಲ್ಲಿ ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಮತ್ತು ಜೆಎಸ್ ಎಸ್ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ‘ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಕಾನೂನು ವಿದ್ಯಾರ್ಥಿಗಳಿಗೆ ಅರಿವು-ನೆರವು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿವರ್ಷ ಮಾರ್ಚ್ 15ರಂದು ವಿಶ್ವ ಅಂತರರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಗ್ರಾಹಕರು ಉತ್ಪಾದಿತ ವಸ್ತುವಿನ ಬೆಲೆ, ನಿಗದಿತ ಅವಧಿ, ರಸೀದಿ ಪಡೆದುಕೊಳ್ಳುವ ಜೊತೆಗೆ ಗ್ರಾಹಕ ಹಕ್ಕುಗಳ ಬಗ್ಗೆ ಜ್ಞಾನ ಹೊಂದಿರಬೇಕು ಎಂದರು. ಗ್ರಾಹಕರು ಉತ್ಪಾದಿತ ವಸ್ತುವಿನ ಮೇಲಿರುವ ಲೇಬಲ್ ನಲ್ಲಿ ಯಾವಾಗ ಉತ್ಪಾದನೆಯಾಗಿದೆ. ಏನೆಲ್ಲಾ ಕಂಟೆಂಟ್ಸ್ ಇದೆ. ಅವಧಿ ಯಾವಾಗ ಮುಗಿಯಲಿದೆ. ಯಾವ ಕಂಪನಿಯದು ಎಂದುದರ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲೇಬಲ್ ಮುದ್ರಿತವಿದ್ದು, ಸ್ಥಳೀಯ ಭಾಷೆಗಳಲ್ಲಿಯೂ ಮುದ್ರಣಗೊಂಡಿರುತ್ತದೆ. ಇವುಗಳನ್ನೆಲ್ಲ ಸರಿಯಾಗಿ ಪರಿಶೀಲಿಸಿದಾಗ ಗ್ರಾಹಕರ ಹಕ್ಕುಗಳಿಗೆ ಚ್ಯುತಿ ಬಂದಾಗ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬಹುದು. ಗ್ರಾಹಕರ ಜವಾಬ್ದಾರಿಗಳು ಮತ್ತು ಹಕ್ಕುಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಅಗತ್ಯವಿದ್ದು, ಇಂಥಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ, ಜೆಎಸ್ ಎಸ್ ಕಾನೂನು ಕಾಲೇಜು ಮುಖ್ಯ ಕಾರ್ಯನಿರ್ವಾಹಕ ಕೆ.ಎಸ್.ಸುರೇಶ್, ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್, ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ.ಎಸ್.ನಟರಾಜು, ವಕೀಲರಾದ ಬಿ.ಎಸ್.ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: