ಮೈಸೂರು

ಅಕ್ಷರ ಜ್ಞಾನಕ್ಕಿಂತ ಉತ್ತಮ ನಡತೆಯು ಇಂದಿನ ಅಗತ್ಯವಾಗಿದೆ : ಡಾ.ಕೆ.ಎಸ್.ಎಂ.ಎಸ್ ರಾಘವರಾವ್

ಮೈಸೂರು,ಮಾ.15:- ಅಕ್ಷರ ಜ್ಞಾನಕ್ಕಿಂತ ಉತ್ತಮ ನಡತೆಯು ಇಂದಿನ ಅಗತ್ಯವಾಗಿದೆ. ಒಳ್ಳೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜ ಅಂಥಹವರನ್ನು ಗೌರವಿಸುತ್ತದೆ. ಉದ್ಯೋಗವು ಅರಸಿ ಬರುತ್ತದೆ ಎಂದು ಸಿಎಸ್ಐಆರ್-ಸಿಎಫ್ ಟಿಆರ್ ಐ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್ ರಾಘವರಾವ್ ತಿಳಿಸಿದರು.

ಅವರು ನಿನ್ನೆ ಮೈಸೂರಿನ ಊಟಿ ರಸ್ತೆಯಲ್ಲಿರುವ ಜೆಎಸ್ ಎಸ್ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಜೈವಿಕ ತಂತ್ರಜ್ಞಾನ ಸ್ನಾತಕೋತ್ತರ ವಿಭಾಗವು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಹುದುಗುವಿಕೆ ಪ್ರಕ್ರಿಯೆ ಮತ್ತು ದ್ರವ ವರ್ಣಶಾಸ್ತ್ರ’ ಎಂಬ ವಿಷಯ ಕುರಿತ ಮೂರು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಉತ್ಪನ್ನ ಉತ್ಪಾದನೆಯಲ್ಲಿ ಪ್ರಮಾಣಕ್ಕಿಂತ ಗುಣಮಟ್ಟ ಮುಖ್ಯ. ಹುದುಗುವಿಕೆ ಮತ್ತು ದ್ರವವರ್ಣ ವಿಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಇದನ್ನು ಕಾಪಾಡಿಕೊಳ್ಳಬಹುದು ಎಂದರು.

ವಿಚಾರಸಂಕಿರಣದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಮುಖ್ಯಕಾರ್ಯನಿರ್ವಾಹಕರಾದ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ ನಾಗರೀಕತೆಯ ಪ್ರಾರಂಭದಿಂದಲೂ ಹುದುಗುವಿಕೆ ಮತ್ತು ದ್ರವವರ್ಣ ವ್ಯವಸ್ಥೆಯನ್ನು ನಮ್ಮವರು ಅಳವಡಿಸಿಕೊಮಡು ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು ಎಂದರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಎ.ಎಂ.ರಮೇಶ್ ಮಾತನಾಡಿ ಕೃಷಿ ಕ್ಷೇತ್ರದಲ್ಲಿ ಜೈವಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಪೌಷ್ಟಿಕಾಂಶವುಳ್ಳ ಆಹಾರವನ್ನು ಬೆಳೆಯಬೇಕು. ಯುವ ಪೀಳಿಗೆ ಇದರ ಬಗ್ಗೆ ಹೆಚ್ಚು ಗಮನಹರಿಸಿ ಕೃಷಿ ಕ್ಷೇತ್ರದ ಅಭಿವೃದ್ಧಿ ಮತ್ತು ಉತ್ತಮ ಆಹಾರ ಬೆಳವಣಿಗೆಯತ್ತ ಗಮನ ಹರಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಮಹದೇವಪ್ಪನವರು ಸ್ವಾಗತಿಸಿದರು. ವಿಭಾಗದ ಮುಖ್ಯಸ್ಥರಾದ ಡಾ.ಬಿ.ವೈ.ಸತೀಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಯಸಿಂಹ ಮತ್ತು ತಂಡದವರು ಪ್ರಾರ್ಥಿಸಿದರು. ಎಸ್.ನಿಧಿ ವಂದಿಸಿದರು. ಚಿಂತನ ನಿರೂಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: