ಮೈಸೂರು

ಮಾತೆ ಮಹಾದೇವಿಯವರಿಗೆ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದ ಕನ್ನಡ ಕ್ರಾಂತಿದಳ – ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ

ಮೈಸೂರು,ಮಾ.15:- ಕನ್ನಡ ಕ್ರಾಂತಿದಳ  ಮತ್ತು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿ ನಿನ್ನೆ ಲಿಂಗೈಕ್ಯರಾದ ಪ್ರಥಮ ಮಹಳಾ ಜಗದ್ಗುರುಗಳು ಹಾಗೂ ಬಸವಪೀಠದ ಧರ್ಮಾಧ್ಯಕ್ಷೆಯಾದ   ಮಾತೆ ಮಹಾದೇವಿಯವರಿಗೆ ನಗರದ 101 ಗಣಪತಿ ವೃತ್ತದಲ್ಲಿಂದು ಭಕ್ತಿಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ  ಸತ್ಯಪ್ಪ  ವೈದ್ಯೆಯಾಗಿ ಲೌಕಿಕ ಬದುಕಿನ ಕಾಯಿಲೆಗಳಿಗೆ ಮದ್ದು ನೀಡಬೇಕಾಗಿದ್ದ ರತ್ನಾ, ಅಂತರಂಗದ ಕರೆಗೆ ಓಗೊಟ್ಟು ‘ಮಾತೆ’ಯಾಗಿ ಬದಲಾದ ಪರಿಯನ್ನು ಸಾಸಲಹಟ್ಟಿ ಗ್ರಾಮಸ್ಥರು ಬೆರಗಿನಿಂದಲೇ ನೋಡುತ್ತಾರೆ. ಕುಗ್ರಾಮದಲ್ಲಿ ಜನಿಸಿ ಜಗದಗಲ ಹರಿಸಿದ ಆಧ್ಯಾತ್ಮದ ಪ್ರವಾಹದಲ್ಲಿ ನಿತ್ಯವೂ ಮಿಂದೇಳುತ್ತಿದ್ದಾರೆ. ಚಿತ್ರದುರ್ಗದ ಸಾಸಲಹಟ್ಟಿ ಇವರ ಜನ್ಮಸ್ಥಳ. ಪೂರ್ವಾಶ್ರಮದ ಕೊಂಡಿಯನ್ನು ಮಾತೆ ಹಾಗೇ ಉಳಿಸಿಕೊಂಡಿದ್ದಾರೆ. ಕೆಂಪು ಹೆಂಚಿನ ಮನೆ ಈಗಲೂ ಇದೆ. ಅವರ ಪೂರ್ವಾಶ್ರಮದ ಹೆಸರು ರತ್ನಾ. ಬಸವ ಧರ್ಮ ಪೀಠದ ಶಾಖೆಯೂ ಗ್ರಾಮದಲ್ಲಿದೆ. ವೈದ್ಯರಾಗಿದ್ದ ಡಾ.ಎಸ್‌.ಆರ್‌.ಬಸಪ್ಪ ಹಾಗೂ ಬಿ.ಗಂಗಮ್ಮ ದಂಪತಿಯ ಪುತ್ರಿಯಾಗಿ 1946ರ ಮಾರ್ಚ್‌ 13ರಂದು ರತ್ನಾ ಜನಿಸಿದ್ದರು. ಚುರುಕುಬುದ್ಧಿಯ ಬಾಲಕಿ ಹೊಸದುರ್ಗ ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಆದರ್ಶ ವೈದ್ಯರಾಗಿದ್ದ ಬಸಪ್ಪ ಅಪಾರ ದೈವಭಕ್ತರೂ ಆಗಿದ್ದರು. ಪತಿಯಂತೆ ಮಗಳು ವೈದ್ಯಳಾಗಬೇಕು ಎಂಬುದು ಗಂಗಮ್ಮ ಅವರ ಕನಸು. ಚಿಕ್ಕಂದಿನಲ್ಲಿ ತಾಯಿ ಹೇಳಿದ ‘ಕೋಳೂರು ಕೊಡಗೂಸು’ ಕಥೆ ರತ್ನಾ ಅವರನ್ನು ಸನ್ಯಾಸತ್ವದ ಕಡೆ ಸೆಳೆಯಿತು. ದಿನ ಉರುಳಿದಂತೆ ಈ ಹಂಬಲ ಬಲಿತು ಪಕ್ವತೆ ಪಡೆಯಿತು. ಬಿ.ಎಸ್‌ಸಿ ಪದವಿ ಪೂರ್ಣಗೊಂಡಾಗ ರತ್ನಾ ಅವರು ಆಧ್ಯಾತ್ಮದ ಬಗೆಗಿನ ಸೆಳೆತವನ್ನು ತೀವ್ರಗೊಳಿಸಿತು. ಮೈಸೂರಿನ ವೀರನಗೆರೆಯಲ್ಲಿ ನೀಡಿದ ಪ್ರವಚನ ಆಲಿಸಲು ಸಹಸ್ರಾರು ಭಕ್ತರು ಸೇರಿದ್ದರು. ಅಂದಿನಿಂದ ಜೀವನವನ್ನು ಸಂಪೂರ್ಣವಾಗಿ ಆಧ್ಯಾತ್ಮಕ್ಕೆ ಮುಡಿಪಾಗಿಟ್ಟರು ಎಂದರು.

ಈ ಸಂದರ್ಭ  ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಅರವಿಂದ್ ಶರ್ಮ , ಕನ್ನಡ ಕ್ರಾಂತಿದಳದ ಯುವಘಟಕದ ಅಧ್ಯಕ್ಷರಾದ ತೇಜಸ್ವಿ ಕುಮಾರ್ , ಧನಪಾಲ್ ಕುರುಬಾರಹಳ್ಳಿ , ಸುಬ್ರಹ್ಮಣ್ಯ , ಮಾದಪ್ಪ , ಶೈಲೇಶ್ , ರಾಮು , ಕಿಟ್ಟಪ್ಪ, ಸಾರ್ವಜನಿಕರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: