ಪ್ರಮುಖ ಸುದ್ದಿ

ಜೆಡಿಎಸ್‍ನಲ್ಲಿ ಮುಗಿಯದ ಗೊಂದಲ : ಜಿಲ್ಲಾಧ್ಯಕ್ಷರ ಬದಲಾವಣೆಗೆ ಮೂರು ದಿನಗಳ ಗಡುವು

ರಾಜ್ಯ(ಮಡಿಕೇರಿ) ಮಾ.15 : –  ಜಾತ್ಯತೀತ ಜನತಾದಳ(ಜೆಡಿಎಸ್)ದ ಕೊಡಗು ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಅವರ ನೇಮಕಾತಿಯನ್ನು ಮೂರು ದಿನಗಳ ಒಳಗಾಗಿ ರದ್ದುಪಡಿಸದಿದ್ದಲ್ಲಿ ಬಿ.ಎ.ಜೀವಿಜಯ ಅವರ ನೇತೃತ್ವದಲ್ಲಿ ಕುಶಾಲನಗರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಮುಂದಿನ  ನಡೆಯ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪಕ್ಷದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಯಾಲದಾಳು ಡಾ.ಮನೋಜ್ ಬೋಪಯ್ಯ, ಪಕ್ಷದ ವರಿಷ್ಠರು ಕಾರ್ಯಕರ್ತರ ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಲೋಕಸಭಾ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕೆಂಬ ನಿರ್ಧಾರ ಕೈಗೊಳ್ಳಲಿರುವುದಾಗಿ ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಜೆಡಿಎಸ್‍ಗೆ ತನ್ನದೇ ಆದ ಅಸ್ತಿತ್ವವಿಲ್ಲ. ಮಾಜಿ ಸಚಿವ ಬಿ.ಎ.ಜೀವಿಜಯ ಅವರಿಂದಾಗಿ ಜಿಲ್ಲೆಯಲ್ಲಿ ಜೆಡಿಎಸ್ ಜೀವಂತವಾಗಿದೆ. ಆದರೆ ಅವರನ್ನೂ ಸೇರಿದಂತೆ ಪಕ್ಷದ ಜಿಲ್ಲೆಯ ಯಾವುದೇ ಪ್ರಮುಖರೊಂದಿಗೆ ಚರ್ಚಿಸದೆ, ಕಾರ್ಯಕರ್ತರ ಅಭಿಪ್ರಾಯವನ್ನೂ ಪಡೆಯದೆ ಏಕಾಏಕಿ ಕೆ.ಎಂ.ಗಣೇಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರು ನೇಮಕ ಮಾಡಿದ್ದಾರೆ. ಗಣೇಶ್ ಅವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಪಕ್ಷದ ಕಾರ್ಯಕರ್ತರು ಸಿದ್ಧರಿಲ್ಲ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯ ಬಳಿಕ ಜಿಲ್ಲೆಯಲ್ಲಿ ಜೆಡಿಎಸ್ ನಾವಿಕನಿಲ್ಲದ ಹಡಗಿನಂತಿತ್ತು. ಈ ಸಂದರ್ಭ ಪಕ್ಷದ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡುವಂತೆ ಹಲವು ಹಿರಿಯ ನಾಯಕರ ಹೆಸರನ್ನು ಶಿಫಾರಸ್ಸು ಮಾಡಲಾಗಿದ್ದರೂ, ಪಕ್ಷದ ವರಿಷ್ಠರು ಗಮನಹರಿಸಿರಲಿಲ್ಲ. ಆದರೆ ಇದೀಗ ಲೋಕಸಭಾ ಚುನಾವಣೆ ಎದುರಾಗಿರುವ ಸಂದರ್ಭದಲ್ಲಿ ತಮ್ಮ ಬೆಂಬಲಿಗರು ಎಂಬ ಕಾರಣಕ್ಕಾಗಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅವರು ಪಕ್ಷದ ಜಿಲ್ಲೆಯ ಪ್ರಮುಖರ ಅಭಿಪ್ರಾಯವನ್ನು ಪಡೆಯದೆ ಕೆಲವೇ ಮಂದಿಯ ಒತ್ತಾಯಕ್ಕೆ ಮಣಿದು ಕೆ.ಎಂ.ಗಣೇಶ್ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಯಾವುದೇ ಪ್ರಮುಖರು, ಕಾರ್ಯಕರ್ತರು ಗಣೇಶ್ ಅವರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳಲು ಸಿದ್ಧರಿಲ್ಲ ಎಂದರು.

ಜಿಲ್ಲೆಯಲ್ಲಿ ಜೆಡಿಎಸ್‍ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ 67 ಸಾವಿರ ಮತಗಳು ಲಭ್ಯವಾಗಿದ್ದರೆ ಅದಕ್ಕೆ ಜೀವಿಜಯ ಕಾರಣ. ಜೀವಿಜಯ ಅವರು ಯಾವುದೇ ಪಕ್ಷದಲ್ಲಿದ್ದರೂ, ಸುಮಾರು 60 ಸಾವಿರಕ್ಕೂ ಅಧಿಕ ಮತದಾರರು ಅವರ ಹಿಂದಿದ್ದಾರೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಪಕ್ಷದ ಜೊತೆ ಕೈಜೋಡಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವುದರೊಂದಿಗೆ ಜೀವಿಜಯ ಅವರ ಸೋಲಿಗೆ ಕಾರಣರಾದವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿದ ಮನೋಜ್ ಬೋಪಯ್ಯ ಪಕ್ಷದ ಕಾರ್ಯಕರ್ತರು ಇದನ್ನು ಒಪ್ಪಲು ಸಾಧ್ಯವಿಲ್ಲ, ಇದು ಪರೀಕ್ಷೆ ಬರೆಯದೆ ಹಿಂಬಾಗಿಲ ಮೂಲಕ ಸರ್ಟಿಫಿಕೇಟ್ ಪಡೆದಂತಾಗಿದೆ ಎಂದು ಟೀಕಿಸಿದರು.

ಪಕ್ಷದ ಜಿಲ್ಲಾಧ್ಯಕ್ಷರನ್ನಾಗಿ ಕೆ.ಎಂ. ಗಣೇಶ್ ಅವರನ್ನು ನೇಮಕ ಮಾಡಿರುವ ಆಘಾತದಿಂದ ಕಾರ್ಯಕರ್ತರು ಹೊರಬರುವ ಮೊದಲೇ ಗಣೇಶ್ ಅವರು ಪತ್ರಿಕಾ ಹೇಳಿಕೆ ನೀಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸುವುದು ಕಂಡು ಬಂದರೆ ಎಷ್ಟೇ ಹಿರಿಯರಾದರೂ ಅವರನ್ನು ಉಚ್ಛಾಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಅವರ ಉದ್ಧಟತನಕ್ಕೆ ಸಾಕ್ಷಿಯಾಗಿದ್ದು, ಅವರಿಗೆ ತಾಕತ್ತಿದ್ದರೆ ಜೀವಿಜಯ ಅವರನ್ನು ಪಕ್ಷದಿಂದ ಉಚ್ಛಾಟಿಸಲಿ ಎಂದು ಸವಾಲು ಹಾಕಿದರು.

ಗಣೇಶ್ ಅವರಿಗೆ ರಾಜಕೀಯ ಪರಿಪಕ್ವತೆಯ ಕೊರತೆ ಇದೆ. ಅವರ ನಾಯಕತ್ವದಲ್ಲಿ ಲೋಕಸಭಾ ಚುನಾವಣೆಯನ್ನು ಎದುರಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ಒಳಗಾಗಿ ಜಿಲ್ಲಾಧ್ಯಕ್ಷರ ನೇಮಕಾತಿಯನ್ನು ಬದಲಾವಣೆ ಮಾಡಬೇಕು. ಇಲ್ಲವಾದಲ್ಲಿ ಕುಶಾಲನಗರದಲ್ಲಿ ಜೀವಿಜಯ ಅವರ ನೇತೃತ್ವದಲ್ಲಿ   ಜಿಲ್ಲೆಯ ಪ್ರಮುಖರು ಸಭೆ ನಡೆಸಿ, ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ನೀಡಬೇಕು ಎಂಬುದನ್ನು ನಿರ್ಧರಿಸಲಿರುವುದಾಗಿ ಮನೋಜ್ ಬೋಪಯ್ಯ ತಿಳಿಸಿದರು.

ಪಕ್ಷದ ಪರಿಶಿಷ್ಟ ಪಂಗಡ ಘಟಕದ ರಾಜ್ಯ ಉಪಾಧ್ಯಕ್ಷ ಎಸ್.ಎನ್.ರಾಜಾರಾವ್ ಮಾತನಾಡಿ, ಕೊಡಗಿನಲ್ಲಿ ಜೀವಿಜಯ ಅವರಿಲ್ಲದೆ ಜೆಡಿಎಸ್‍ಗೆ ತನ್ನದೇ ಆದ ಅಸ್ತಿತ್ವವಿಲ್ಲ. ಅವರು ಯಾವ ಪಕ್ಷದಿಂದ ಸ್ಪರ್ಧಿಸಿದರೂ ಅವರದ್ದೇ ಆದ ಸುಮಾರು 50 ಸಾವಿರಕ್ಕೂ ಅಧಿಕ ಮತದಾರರು ಸೋಮವಾರಪೇಟೆ ತಾಲೂಕಿನಲ್ಲಿದ್ದಾರೆ. ಈ ಮತದಾರರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಕೆ.ಎಂ.ಗಣೇಶ್ ಅವರು ಮಡಿಕೇರಿ ನಗರದಲ್ಲಿ ಅತಿ ಹೆಚ್ಚಿನ ಮತವನ್ನು ಪಕ್ಷಕ್ಕೆ ತಂದು ಕೊಡುವ ವಿಶ್ವಾಸವಿತ್ತು. ಆದರೆ ಈ ಹಿಂದಿನ ಚುನಾವಣೆಗಿಂತಲೂ ಕಡಿಮೆ ಮತ ಮಡಿಕೇರಿ ನಗರದಲ್ಲಿ ಬಂದಿದೆ. ಇದನ್ನು ಗಮನಿಸಿದರೆ ಅವರು ಬೇರೆ ಪಕ್ಷದೊಂದಿಗೆ ಕೈಜೋಡಿಸಿ ಜೀವಿಜಯ ಅವರ ಸೋಲಿಗೆ ಕಾರಣರಾಗಿರುವುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು. ಅಂತಹ ವ್ಯಕ್ತಿಗೆ ಇದೀಗ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದನ್ನು ಪಕ್ಷದ ಯಾವುದೇ ಕಾರ್ಯಕರ್ತ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಡಿಸಿಲ್ವಾ ಮಾತನಾಡಿ, ಕೆ.ಎಂ. ಗಣೇಶ್ ಅವರ ನೇಮಕಾತಿಗೆ ಪಕ್ಷದ ಶೇ.95ರಷ್ಟು ಕಾರ್ಯಕರ್ತರ ವಿರೋಧವಿದೆ. ಪಕ್ಷದ ವರಿಷ್ಠರಿಗೆ ಕಾರ್ಯಕರ್ತರ ಧ್ವನಿಯನ್ನು ತಲುಪಿಸುವುದಕ್ಕಾಗಿ ಮಾಧ್ಯಮದ ಮುಂದೆ ಬಂದಿದ್ದೇವೆ ಎಂದು ಹೇಳಿದರು.

ಜಿಲ್ಲಾ ಉಪಾಧ್ಯಕ್ಷೆ ಹೆಚ್.ಬಿ.ಜಯಮ್ಮ ಮಾತನಾಡಿ, ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನವನ್ನು ಇಂತಹವರಿಗೇ ನೀಡಿ ಎಂದು ಹೇಳುವುದಿಲ್ಲ. ಆದರೆ ಪಕ್ಷದಲ್ಲಿರುವವರ ಹಿರಿತನದ ಆಧಾರದಲ್ಲಿ ಅಧ್ಯಕ್ಷರನ್ನು ನೇಮಕ ಮಾಡಿ. ಇತ್ತೀಚೆಗೆ ಪಕ್ಷಕ್ಕೆ ಬಂದ ರಾಜ್ಯಾಧ್ಯಕ್ಷ ವಿಶ್ವನಾಥ್ ಅವರು ತಮ್ಮ ಹಿಂಬಾಲಕ ಎಂಬ ಕಾರಣಕ್ಕೆ ಗಣೇಶ್ ಅವರಿಗೆ ಮಣೆ ಹಾಕಿದ್ದರೆ, ಕಳೆದ ನಾಲ್ಕು ದಶಕಗಳಿಂದ ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಈ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಜಾನಕಿ ವೆಂಕಟೇಶ್ ಹಾಗೂ  ಪ್ರೆಸ್ಸಿ  ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: