ಮೈಸೂರು

ವಿಜೃಂಭಣೆಯಿಂದ ನೆರವೇರಿದ ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಘನಲಿಂಗ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜಾ ಮಹೋತ್ಸವ

ಮೈಸೂರು,ಮಾ.16:- ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಘನಲಿಂಗ ಶಿವಯೋಗಿಗಳ ಗದ್ದುಗೆಗೆ ವಿಶೇಷ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕು ಕಗ್ಗೆರೆ ತಪೋಕ್ಷೇತ್ರದಲ್ಲಿರುವ  ಶ್ರೀ ತೋಂಟದ ಸಿದ್ಧಲಿಂಗೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಇತ್ತೀಚೆಗೆ ಜಗದ್ಗುರು ಶ್ರೀ ಘನಲಿಂಗ ಶಿವಯೋಗಿಗಳವರ ಗದ್ದುಗೆಗೆ ರುದ್ರಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಮೊದಲಾದ ಪೂಜಾ ಕಾರ್ಯಗಳು ವಿಧಿವತ್ತಾಗಿ ನೆರವೇರಿದವು. ಸುತ್ತೂರು ಶ್ರೀಮಠದ ಗುರುಪರಂಪರೆಯ 11ನೆಯ ಪೀಠಾಧಿಪತಿಗಳಾದ ಜಗದ್ಗುರು              ಶ್ರೀ ಘನಲಿಂಗ ಶಿವಯೋಗಿಗಳವರು ಯಡಿಯೂರು ಶ್ರೀ ಸಿದ್ಧಲಿಂಗೇಶ್ವರರೊಡನೆ ಸಮಾಜೋದ್ಧಾರದ ಮಹತ್ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರಲ್ಲದೆ ಆ ಕಾಲದ ಪ್ರಮಥರಂತೆ ತಾವೂ ಸಹ ಹಲವಾರು ಮಹತ್ವದ ವಚನಗಳ ರಚನೆಯ ಮೂಲಕ ತಮ್ಮ ಅಮರ ಸಂದೇಶವನ್ನು ಧಾರ್ಮಿಕ ಹಾಗೂ ಸಾಹಿತ್ಯಿಕ ಕ್ಷೇತ್ರಕ್ಕೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಶ್ರೀ ತೋಂಟದ ಸಿದ್ಧಲಿಂಗೇಶ್ವರರ ಉತ್ಸವ ಮೂರ್ತಿಯನ್ನು ಶ್ರೀಗಳ ಗದ್ದುಗೆಗೆ ಬಿಜಯಂಗೈಸಲಾಗಿತ್ತು. ಪೂಜಾ ಮಹೋತ್ಸವದಲ್ಲಿ ಶ್ರೀಮಠ ಹಾಗೂ ಜೆಎಸ್‍ಎಸ್ ಸಂಸ್ಥೆಯ ಅಧಿಕಾರಿಗಳು, ದುಗ್ಗಹಟ್ಟಿಯ ಶ್ರೀ ವೀರಭದ್ರಪ್ಪ ಮತ್ತು ಕುಟುಂಬದವರು, ಕಗ್ಗೆರೆಯ ಶ್ರೀ ತೋಂಟದಾರ್ಯ ಸ್ವಾಮಿಗಳು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು, ಕಗ್ಗೆರೆ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುತ್ತೂರು ಜೆಎಸ್‍ಎಸ್ ಶಾಲಾ ಸಂಗೀತ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಚನಗಾಯನ ನಡೆಸಿಕೊಟ್ಟರು. ಕಾರ್ಯಕ್ರಮದ ನಂತರ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. (ಎಸ್.ಎಚ್)

Leave a Reply

comments

Related Articles

error: