ಮೈಸೂರು

ಮೊದಲು ನಮ್ಮಲ್ಲಿ ನಾವು ಬದಲಾವಣೆಯನ್ನು ಮಾಡಿಕೊಂಡರೆ ಮಾತ್ರ ಜಗತ್ತನ್ನು ಬದಲಾಯಿಸಲು ಸಾಧ್ಯ : ಅನನ್ಯಕುಮಾರ್ ಜೆ. ಅಭಿಮತ

ಮೈಸೂರು,ಮಾ.16:- ಮೊದಲು ನಮ್ಮಲ್ಲಿ ನಾವು ಬದಲಾವಣೆಯನ್ನು ಮಾಡಿಕೊಂಡರೆ ಮಾತ್ರ ಜಗತ್ತನ್ನು ಬದಲಾಯಿಸಲು ಸಾಧ್ಯ ಎಂದು ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಜೆ. ಅಭಿಪ್ರಾಯಪಟ್ಟರು.

ಅವರಿಂದು ಸರ್ಕಾರಿ ಪ್ರಥಮದರ್ಜೆ ಕಾಲೇಜು ಕುವೆಂಪುನಗರ ಮೈಸೂರು ಯುವರೆಡ್ ಕ್ರಾಸ್ ಘಟಕದ ವತಿಯಿಂದ ದ್ರಶ್ಯ ಶ್ರವಣ ಕೊಠಡಿಯಲ್ಲಿ ಹಮ್ಮಿಕೊಳ್ಳಲಾದ ಪರಿಸರ ಸಂರಕ್ಷಣೆ : ಸವಾಲುಗಳು ಮತ್ತು ಜವಾಬ್ದಾರಿಗಳು ಕುರಿತ ಒಂದು ದಿನದ ಕಾರ್ಯಾಗಾರವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೊದಲೇ ನಾವು ಜಗತ್ತನ್ನು ಬದಲಾಯಿಸಿಬಿಡುತ್ತೇನೆಂದು ಹೊರಟರೆ ಅದು ಸಾಧ್ಯವಾಗಲಾರದು. ಮೊದಲು ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ಬದಲಾವಣೆ ಮೊದಲು ನಮ್ಮ ನಮ್ಮ ಮನೆಗಳಿಂದಲೇ ಆಗಬೇಕು ಹಾಗಾದಾಗ ಮಾತ್ರ ಜಗತ್ತನ್ನು ಬದಲಾಯಿಸಲು ಸಾಧ್ಯ ಎಂದರು. ಹಸಿರು ಮನೆ ಪರಿಣಾಮದಿಂದ ಜಾಗತಿಕ ತಾಪಮಾನದಲ್ಲಿ ಏರಿಕೆಯಾಗುತ್ತದೆ. ಜೀವನ ಸುಸ್ಥಿರವಾಗಿರಬೇಕು. ಜೀವಿಗಳೂ ಬದುಕಬೇಕು. ನೈಸರ್ಗಿಕ ಹಸಿರು ಮನೆಯ ಪರಿಣಾಮಗಳಿರಬೇಕು.

ಕಾರ್ಬನ್ ಡೈಆಕ್ಸೈಡ್ ಮತ್ತು ಮಿಥೇಲ್ ಅನಿಲಗಳು ವಾತಾವರಣವನ್ನು ಸೇರಿಬಿಟ್ಟಿವೆ. ಇದು ಭೂಮಿಯಲ್ಲಿನ ಎಲ್ಲ ಜೀವಜಂತುಗಳಿಗೂ ದುಷ್ಪರಿಣಾಮ ಬೀರಲಿದೆ. ಇದರಿಂದ ಜಾಗತಿಕ ತಾಪಮಾನ ಏರಿಕೆಯಾಗಿ, ಅಕಾಲಿಕ ಮಳೆಯಾಗುತ್ತದೆ. ಮಳೆ ಬೇಕಾದ ಸಮಯದಲ್ಲಿ ಮಳೆ ಆಗಲಾರದು. ಇದನ್ನು ಕಡಿಮೆ ಮಾಡಲು ಏನು ಮಾಡಬೇಕು? ಪೆಟ್ರೋಲ್ ಡಿಸೆಲ್ ಅನಿಲಗಳ ಬಳಕೆಯನ್ನು ಕಡಿಮೆ ಮಾಡಬೇಕು. ಒಂದೇ ಬಾರಿಗೆ ನಿರ್ಮೂಲನೆ ಸಾಧ್ಯವಿಲ್ಲ. ಹಂತಹಂತವಾಗಿ ಕಡಿಮೆ ಮಾಡುತ್ತ ಬರಬೇಕು. ಡ್ಯಾಮ್ ಎಲ್ಲೆಲ್ಲಿ ಬೇಕೋ ಅಲ್ಲೆಲ್ಲ ಕಟ್ಟಿದ್ದೇವೆ. ಮತ್ತೆ ಕಟ್ಟಲು ಸ್ಥಳವಿಲ್ಲ. ಸೋಲಾರ್ ನ್ನು ಸಮರ್ಪಕವಾಗಿ ಬಳಸಿಕೊಳ್ಳಲು ತಂತ್ರಜ್ಞಾನ ನಮ್ಮಲ್ಲಿಲ್ಲ. ವಿಂಡ್ ಎನರ್ಜಿ ಇದ್ದರೂ ಅದನ್ನು ಪ್ರೊಡ್ಯೂಸ್ ಮಾಡಲು ಸಾಧ್ಯವಿಲ್ಲ. ನ್ಯೂಕ್ಲಿಯರ್ ಎನರ್ಜಿ ಲಭ್ಯವಿದೆಯಾದರೂ ಅನಗತ್ಯ ಭಯಗಳನ್ನು ಹುಟ್ಟು ಹಾಕಲಾಗುತ್ತಿದೆ. ನಾವು ವ್ಯಕ್ತಿಗತವಾಗಿ ವಾಹನಗಳನ್ನು ಬಳಸುವುದಕ್ಕಿಂತ ರೈಲ್ವೆ, ಬಸ್ಸುಗಳಲ್ಲಿ ಓಡಾಡಬೇಕು ಆಗ ಮಾತ್ರ ಪರಿಸರದ ಮೇಲಾಗುವ ದುಷ್ಪರಿಣಾಮವನ್ನು ಅಲ್ಪಮಟ್ಟಿಗಾದರೂ ತಡೆಯಬಹುದು. ಹಿಂದಿನ ಪೀಳಿಗೆ ನಮಗೆ ನೀಡಿದ ಪರಿಸರವನ್ನು, ನಾವು ಮುಂದಿನ ಪೀಳಿಗೆಗೆ ಉಳಿಸಿಹೋಗಬೇಕು ಎಂದರು.

ಕಾರ್ಯಕ್ರಮದಲ್ಲಿ ಪರಿಸರ ತಜ್ಞ ಶಂಕರನಾರಾಯಣ ಟಿ.ಎಸ್, ವಾಣಿಜ್ಯ ಉಪನ್ಯಾಸಕ ಸಂತೋಷ್ ಎ, ಪ್ರಾಚಾರ್ಯರಾದ ಡಾ.ರಾಗಿಣಿ ಎನ್, ಯುವ ರೆಡ್ ಕ್ರಾಸ್ ಸಂಯೋಜಕರಾದ ಡಾ.ಹೆಚ್.ಪಿ.ಗೀತಾ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್ಎಚ್)

Leave a Reply

comments

Related Articles

error: