ದೇಶ

ಚಿಕ್ಕಪ್ಪನ ಕೊಲೆಯಲ್ಲಿ ಆಂಧ್ರ ಸಿಎಂ ಕೈವಾಡ: ಜಗನ್ಮೋಹನ್ ರೆಡ್ಡಿ ಆರೋಪ

ಅಮರಾವತಿ (ಮಾ.16): ಶುಕ್ರವಾರ ಅಸಹಜ ರೀತಿಯಲ್ಲಿ ಸಾವಿಗೀಡಾಗಿದ್ದ ಆಂಧ್ರಪ್ರದೇಶ ವೈಎಸ್‌ಆರ್ ಕಾಂಗ್ರೆಸ್ ನಾಯಕ, ಜಗನ್‌ಮೋಹನ್ ರೆಡ್ಡಿ ಚಿಕ್ಕಪ್ಪ ವೈ.ಎಸ್. ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವಿಧಿ ವಿಜ್ಞಾನ ವರದಿ ಖಚಿತಪಡಿಸಿದೆ.

ಹತ್ಯೆಗೀಡಾದ ವಿವೇಕಾನಂದ ರೆಡ್ಡಿ.

ವಿವೇಕಾನಂದ ರೆಡ್ಡಿ ಅವರನ್ನು ಇರಿದು ಕೊಲೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಅವರ ಮೃತದೇಹದಲ್ಲಿ ಏಳು ಕಡೆ ಹರಿತವಾದ ಆಯುಧದಿಂದ ಇರಿದ ಗಾಯದ ಕಲೆಗಳು ಪತ್ತೆಯಾಗಿವೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಗಳ ಪ್ರಕಾರ ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಹೇಳಿಕೆ ತಿಳಿಸಿದೆ.

ಎಎಸ್‌ಪಿ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಹತ್ಯೆ ಪ್ರಕರಣದ ತನಿಖೆ ನಡೆಸಲಿದೆ. ಬೆರಳಚ್ಚು ಗುರುತುಗಳು ಮತ್ತು ಇತರೆ ವಿಧಿ ವಿಜ್ಞಾನ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದೇವೆ. ತಲೆ ಮತ್ತು ಬಲಗೈ ಮೇಲೆ ಒಟ್ಟು ಏಳು ಇರಿತದ ಗುರುತುಗಳಿವೆ ಎಂದು ಕಡಪ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ದೇವ್ ಶರ್ಮಾ ತಿಳಿಸಿದ್ದಾರೆ.

ವಿವೇಕಾನಂದ ರೆಡ್ಡಿ ಅವರ ಕೊಲೆಗೆ ಕಾರಣ ಮತ್ತು ಪಾತಕಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಹತ್ಯೆಗೂ ಮುನ್ನ ಅವರ 24 ಗಂಟೆಯ ಚಟುವಟಿಕೆಗಳ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಕೊಲೆಯ ಸನ್ನಿವೇಶವನ್ನು ಮರುಸೃಷ್ಟಿ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಹತ್ಯೆಯ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಅವರ ಮಗ ಲೋಕೇಶ್ ಅವರ ಕೈವಾಡವಿದೆ ಎಂದು ಜಗನ್ ಮೋಹನ್ ರೆಡ್ಡಿ ಆರೋಪಿಸಿದ್ದಾರೆ. ಅದನ್ನು ಚಂದ್ರಬಾಬು ನಾಯ್ಡು ನಿರಾಕರಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ವೈಎಸ್‌ಆರ್ ಕಾಂಗ್ರೆಸ್ ಒತ್ತಾಯಿಸಿದೆ. (ಎನ್.ಬಿ)

Leave a Reply

comments

Related Articles

error: