ಕರ್ನಾಟಕಪ್ರಮುಖ ಸುದ್ದಿ

ಕುಮಾರಸ್ವಾಮಿ – ಡಿ.ಕೆ.ಶಿವಕುಮಾರ್ ಭೇಟಿ: ಮಂಡ್ಯ-ಶಿವಮೊಗ್ಗ ಕ್ಷೇತ್ರಗಳ ಕುರಿತು ಚರ್ಚೆ

ಬೆಂಗಳೂರು (ಮಾ.16): ಸಿ.ಎಂ ಕುಮಾರಸ್ವಾಮಿ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಅವರು ಇಂದು ಭೇಟಿಯಾಗಿ ಮಂಡ್ಯ ಮತ್ತು ಶಿವಮೊಗ್ಗ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಮುಖಂಡರು ಬೆಂಬಲ ನೀಡುವಂತೆ ಮಾಡಲು ಎಚ್‌ಡಿ ಕುಮಾರಸ್ವಾಮಿ ಅವರು ಡಿಕೆಶಿ ಅವರನ್ನು ನೆಚ್ಚಿಕೊಂಡಿದ್ದು, ಆ ಕಾರಣದಿಂದಲೇ ಇಂದು ಈ ಇಬ್ಬರು ನಾಯಕರು ಭೇಟಿ ಆಗಿದ್ದಾರೆ ಎನ್ನಲಾಗಿದೆ.

ಮಂಡ್ಯ ಜಿಲ್ಲೆಗೆ ಇತ್ತೀಚೆಗಷ್ಟೆ ಭೇಟಿ ನೀಡಿದ್ದ ಡಿ.ಕೆ.ಶಿವಕುಮಾರ್, ಸುಮಲತಾ ಅಂಬರೀಶ್ ಅವರಿಗೆ ಬೆಂಬಲ ನೀಡುತ್ತಿದ್ದ ಕಾಂಗ್ರೆಸ್ ಮುಖಂಡರನ್ನು ಮಾತನಾಡಿಸಿ ಅವರು ಜೆಡಿಎಸ್‌ಗೆ ಬೆಂಬಲ ಘೋಷಿಸುವಂತೆ ಮನವೊಲಿಸಲು ಪ್ರಯತ್ನಿಸಿದ್ದರು. ಡಿಕೆಶಿ ಮಂಡ್ಯಕ್ಕೆ ಭೇಟಿ ನೀಡಲು ಕಾರಣ ಕುಮಾರಸ್ವಾಮಿ ಅವರೇ ಎಂದು ಹೇಳಲಾಗುತ್ತಿದೆ. ಶಿವಮೊಗ್ಗದ ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯನ್ನು ಡಿ.ಕೆ ಶಿವಕುಮಾರ್ ಅವರು ವಹಿಸಿಕೊಂಡಿದ್ದು, ಅದರ ಬಗ್ಗೆಯೂ ಡಿಕೆಶಿ-ಎಚ್‌ಡಿಕೆ ಇಂದಿನ ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.

ಇಬ್ಬರು ನಾಯಕರ ಭೇಟಿ ನಂತರ ಸುದ್ದಿಗಾರರು ಡಿಕೆಶಿ ಅವರನ್ನು ಮಾತನಾಡಿಸಿದಾಗ, ಸಭೆಯ ವಿವರಗಳನ್ನು ಹಂಚಿಕೊಳ್ಳಲು ಒಪ್ಪದ ಅವರು, ನಾವಲ್ಲದೆ ಇನ್ಯಾರು ಸಿಎಂ ಅವರನ್ನು ಭೇಟಿ ಮಾಡಬೇಕು ಎಂದು ಹೇಳಿ ಹೊರಟಿದ್ದಾರೆ. ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದರೆ, ಶಿವಮೊಗ್ಗದಿಂದ ಕುಮಾರಸ್ವಾಮಿ ಆಪ್ತ ಮಧು ಬಂಗಾರಪ್ಪ ಅವರು ಸ್ಪರ್ಧಿಸುತ್ತಿದ್ದಾರೆ.

ಮಂಡ್ಯ ಮತ್ತು ಶಿವಮೊಗ್ಗ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಗೆಲುವು 50-50 ಎಂಬಂತಾಗಿದೆ. ಹಾಗಾಗಿ ಈ ಕ್ಷೇತ್ರಗಳನ್ನು ಗೆಲ್ಲಲು ರಣತಂತ್ರವನ್ನು ರೂಪಿಸಲು ಈ ಸಭೆ ನಡೆದಿದೆ ಎಂದು ತಿಳಿದುಬಂದಿದೆ. (ಎನ್.ಬಿ)

Leave a Reply

comments

Related Articles

error: