ಕರ್ನಾಟಕಮೈಸೂರು

ಜೆಡಿಎಸ್‍ಗೆ ನನ್ನ ಬಗ್ಗೆ ಭಯವೇಕೋ ತಿಳಿಯದು!? ಸುಮಲತಾ ಪ್ರಶ್ನೆ

ಮೈಸೂರು (ಮಾ.16): ಲೋಕಸಭಾ ಚುನಾವಣೆ ದಿನಾಂಕ ಘೋಷಣೆಯಾಗೋ ಮೊದಲೇ ಮಂಡ್ಯ ರಣಕಣ ರಂಗೇರಿದೆ. ಒಂದೆಡೆ ಸುಮಲತಾ ಅಂಬರೀಷ್ ಮತ್ತೊಂದೆಡೆ ನಿಖಿಲ್ ಕುಮಾರಸ್ವಾಮಿ ಬೆಂಬಲಿಗರ ಜೊತೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ರಾಜಕೀಯ ಹೋರಾಟವೂ ಆರಂಭಗೊಂಡಿದೆ. ಇದೀಗ ಮಂಡ್ಯ ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದ ಜೆಡಿಎಸ್ ನಾಯಕರನ್ನು ಸುಮಲತಾ ಪ್ರಶ್ನಿಸಿದ್ದಾರೆ.

8 ಜನ ಶಾಸಕರು, ಮೂರು ಮಂತ್ರಿಗಳು ಹಾಗೂ ಎಂಎಲ್‌ಸಿ ಇರುವಾಗ, ನನ್ನನ್ನ ಕಂಡರೆ ಜೆಡಿಎಸ್‌ಗೆ ಭಯ ಯಾಕೆ? ಎಂದು ಸುಮಲತಾ ಪ್ರಶ್ನಿಸಿದ್ದಾರೆ. ಜೆಡಿಎಸ್‌ ನಾಯಕರು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ಕೊಡುತ್ತಿರುವುದು ಯಾಕೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಮೈಸೂರಿನ ಕೆ.ಆರ್.ನಗರದಲ್ಲಿ ಸುಮಲತಾ ಹೇಳಿದ್ದಾರೆ.

ಮಂಡ್ಯ ಕಣದಲ್ಲಿ ವಾಕ್ಸಮರ ತಾರಕಕ್ಕೇರುತ್ತಿದ್ದಂತೆ, ಸುಮಲತ ಪರವಾಗಿ ಕಾಂಗ್ರೆಸ್ ಮುಖಂಡ ಬ್ಯಾಟ್ ಬೀಸಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರವಾಗಿ ಕೆಲಸ ಮಾಡುತ್ತೇನೆ. ಈ ಕಾರಣಕ್ಕೆ ಪಕ್ಷದಿಂದ ಉಚ್ಚಾಟಣೆ ಮಾಡಿದ್ದರೂ ಯಾವುದೇ ಸಮಸ್ಯೆ ಇಲ್ಲ ಎಂದು ಮೈಸೂರಿನ ಕೆ.ಆರ್.ನಗರದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಹೇಳಿದ್ದಾರೆ.

ಜೆಡಿಎಸ್‌ ಸಚಿವ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಸುಬ್ರಹ್ಮಣ್ಯ ತಕ್ಕೆ ತಿರುಗೇಟು ನೀಡಿದ್ದಾರೆ. ಸುಮಲತಾ ಎಂಪಿ ಆಗೋಕೆ ಸೂಕ್ತ ಅಭ್ಯರ್ಥಿ. ನಾವು ಒಳ್ಳೆ ಅಭ್ಯರ್ಥಿ ಜೊತೆ ಕೆಲಸ ಮಾಡುತ್ತಿದ್ದೇವೆ. ನಮಗೆ ಯಾರ ಭಯವೂ ಇಲ್ಲ. ಮೈತ್ರಿ ಪಕ್ಷಗಳ ಸೂತ್ರಕ್ಕೂ ಡೋಂಟ್ ಕೇರ್ ಎಂದಿದ್ದಾರೆ.

ತಾಯಿ ಜೊತೆ ಪ್ರಚಾರ ಕಾರ್ಯದಲ್ಲಿ ಸುಮಲತಾ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ತೊಡಗಿಸಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಅಭಿಷೇಕ್, ನಿಕಿಲ್ ನನ್ನ ಉತ್ತಮ ಸ್ನೇಹಿತ. ರಾಜಕೀಯದಲ್ಲಿ ಅವರು ಬೇರೆ ಕಡೆ, ನಾವು ಬೇರೆ ಕಡೆ. ಆದರೆ ನಮ್ಮ ಸ್ನೇಹ ಚೆನ್ನಾಗಿದೆ ಮುಂದೇಯೂ ಚೆನ್ನಾಗಿಯೇ ಇರುತ್ತೆ ಎಂದಿದ್ದಾರೆ. ಇದೇ ವೇಳೆ ಸಾ.ರಾ. ಮಹೇಶ್ ಹೇಳಿಕೆಗೆ ಅವರ ಬಳಿಯೇ ಪ್ರತಿಕ್ರಿಯೆ ಕೇಳಿ ಎಂದು ಜಾಣ್ಮೆ ಮೆರೆದಿದ್ದಾರೆ. (ಎನ್.ಬಿ)

Leave a Reply

comments

Related Articles

error: