ಪ್ರಮುಖ ಸುದ್ದಿಮೈಸೂರು

ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌‌ ಕೈ ಕೊಡುವ ಸಚಿವ ಸಾ.ರಾ.ಮಹೇಶ್ ಹೇಳಿಕೆ ವಿಚಾರ : ಮಾಜಿ ಸಿಎಂ ಸಿದ್ದರಾಮಯ್ಯ ಸಿಡಿಮಿಡಿ

ಮೈಸೂರು,ಮಾ.17:- ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್‌‌ ಕೈ ಕೊಡುವ ಸಚಿವ ಸಾ.ರಾ.ಮಹೇಶ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ  ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ.

ಇಂದು ತಮ್ಮ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ನನ್ನ ಪ್ರಕಾರ ಸಾ.ರಾ.ಮಹೇಶ್ ಹೇಳಿಕೆ ತಪ್ಪು. ಸಾ.ರಾ. ಮಹೇಶ್ ಹೇಳಿಕೆ ಸರಿಯಲ್ಲ. ನಾವು ಪರಸ್ಪರ ನಂಬಿಕೆಯಿಂದ ಮೈತ್ರಿ ಮಾಡಿ ಮಾಡಿಕೊಂಡಿದ್ದೇವೆ. ಎಲ್ಲದಕ್ಕೂ ನಂಬಿಕೆ ಇರಬೇಕು. ಈ ರೀತಿಯ ಹೇಳಿಕೆಗಳಿಂದ ನಂಬಿಕೆ ಹಾಳಾಗುತ್ತೆ. ನಾವು ಒಟ್ಟಾಗಿ ಕೆಲಸ ಮಾಡೊಲ್ಲ, ಅಲ್ಲಿ ಹಾಗಾಗುತ್ತೆ ಹೀಗಾಗುತ್ತೆ ಅಂತ ಊಹೆ ಮಾಡಿಕೊಳ್ಳೋದು ತಪ್ಪು. ಯಾಕೇ ಅದನ್ನೆಲ್ಲ ಊಹೆ ಮಾಡಿಕೊಳ್ಳಬೇಕು? ಎಂದು  ಸಿಡಿಮಿಡಿಗೊಂಡರು. ನಂಬಿಕೆ ಬಗ್ಗೆ ದೇವೇಗೌಡರು, ಕುಮಾರಸ್ವಾಮಿ ಎಲ್ಲಿಯಾದರೂ ಮಾತನಾಡಿದ್ದಾರಾ? ಅವರು ಮಾತನಾಡಿದ್ರೆ ಹೇಳಿ!. ಬೇರೆಯವರ ಮಾತಿಗೆಲ್ಲ ನಾನು ತಲೆಕೆಡಿಸಿಕೊಳ್ಳೊಲ್ಲ. ನಾವಿನ್ನು ಪ್ರಚಾರವನ್ನೇ ಶುರು ಮಾಡಿಲ್ಲ, ಕೂಸು ಹುಟ್ಟೋಕು ಮುಂಚೆ ಕುಲಾವಿ ಬಗ್ಗೆ ಯಾಕೆ ಮಾತು. ಸಭೆ ನಡೆಸಿ ಪ್ರಚಾರದ ರೂಪುರೇಷೆ ಬಗ್ಗೆ ಚರ್ಚೆ ಮಾಡ್ತಿವಿ ಎಂದರು.

ಬಿಜೆಪಿಯವರಿಗೆ ಮೋದಿ ಬಿಟ್ಟು ಬೇರೆ ಏನಿಲ್ಲ. ಇಲ್ಲಿಯವರಿಗೆ ಮೋದಿ ಮುಖವೇ ಬಂಡವಾಳ ಎಂದು ವ್ಯಂಗ್ಯವಾಡಿದರು. ಯಡಿಯೂರಪ್ಪ, ಈಶ್ವರಪ್ಪ,ಜಗದೀಶ್ ಶೆಟ್ಟರ್ ಇವರಿಗೆಲ್ಲ ಯಾವ ವರ್ಚಸ್ಸು ಇದೆ. ಮೋದಿ ಮೋದಿ ಎನ್ನುತ್ತಿರಲ್ಲ ಅವರೇನು ಅಭಿವೃದ್ಧಿ ಮಾಡಿದ್ದಾರೆ. 10 ಕೋಟಿ ಉದ್ಯೋಗದ ಭರವಸೆ ನೀಡಿ ನಾಮ ಹಾಕಿದ್ದಾರೆ. ಮೋದಿಗೂ ಯಾವುದೇ ವರ್ಚಸ್ಸು ಇರಲಿಲ್ಲ. ಸರ್ಜಿಕಲ್ ಸ್ಕ್ರೈಕ್ ಮಾಡಿರೋದನ್ನ ಹೇಳಿಕೊಂಡು ವರ್ಚಸ್ಸು ವೃದ್ದಿಸಿಕೊಂಡಿದ್ದಾರೆ. ಕಾಂಗ್ರೆಸ್ ಕಾಲದಲ್ಲೂ  10-12 ಸರ್ಜಿಕಲ್ ಸ್ಕ್ರೈಕ್ ಆಗಿದೆ. ನಾವು ಅದನ್ನ ಹೇಳಿಕೊಂಡಿಲ್ಲ ಎಂದರು. ದೇವೇಗೌಡರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಜೆಡಿಎಸ್‌ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ದೇವೇಗೌಡರೇ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಂತ ಹೇಳಿದ್ದಾರೆ. ನಾನು ದೇವೇಗೌಡರ ಮಾತನ್ನು ನಂಬುತ್ತೇನೆ. ಬೇರೆ ಯಾರೋ ನಾಯಕರು ಹೇಳಿದ್ದನ್ನು ನಾನು ನಂಬಲ್ಲ. ನಮ್ಮ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೇ ಎಂದರು.

ಮೋದಿ ಬೇರೆ ರಾಜ್ಯದಲ್ಲಿ ಚುನಾವಣೆಗೆ ನಿಲ್ಲಬಹುದು ‌ರಾಹುಲ್ ಗಾಂಧಿ ನಿಲ್ಲಬಾರದ ಎಂದು ಪ್ರಶ್ನಿಸಿದ ಅವರು  ರಾಹುಲ್ ಗಾಂಧಿಯವರನ್ನು ಕರ್ನಾಟಕದಿಂದ ಸ್ಪರ್ಧಿಸಲು ಆಹ್ವಾನಿಸಿದ್ದೇವೆ. ಅವರಿನ್ನು ತೀರ್ಮಾನ ಮಾಡಿಲ್ಲ. ಮೋದಿ ಎರಡೆರಡು ಕಡೆ ನಿಂತಿರಲಿಲ್ವಾ? ವಾರಣಾಸಿ ಬೇರೆ ರಾಜ್ಯ ತಾನೆ ? ಹಾಗೇ ರಾಹುಲ್‌ ಗಾಂಧಿಯವರು‌ ನಿಲ್ಲಲಿ ಬಿಡಿ. ರಾಹುಲ್ ಅವರ ಅಜ್ಜಿ, ಅಮ್ಮ ಎಲ್ಲ ಇಲ್ಲೆ ನಿಂತಿದ್ದರು. ಹಾಗಾಗಿ ಅವರು ನಿಲ್ಲಿಲಿ ಅನ್ನೋದು ನಮ್ಮ ಆಸೆ. ಆದ್ರೆ ಈ ಬಗ್ಗೆ ಅವರಿನ್ನು ನಿರ್ಧಾರ ಮಾಡಿಲ್ಲ ಎಂದರು.

ಸೆಂಟ್ರಲ್ ಕಮಿಟಿ ಮೀಟಿಂಗ್ 19ಕ್ಕೆ ನಡೆಯಬೇಕಿತ್ತು. ನನಗೆ ಬಂದಿರುವ ಮಾಹಿತಿ ಪ್ರಕಾರ ಮೀಟಿಂಗ್ ಮುಂದೆ ಹೋಗುವ ಸಾಧ್ಯತೆ ಇದೆ. 22,23ರಂದು ಮೀಟಿಂಗ್ ನಡೆಯಬಹುದು. ಆ ನಂತರ ಅಭ್ಯರ್ಥಿ‌ಗಳ ಫೈನಲ್ ಲಿಸ್ಟ್ ಬಿಡುಗಡೆ ಮಾಡಲಿದ್ದೇವೆ ಎಂದರು. ತುಮಕೂರು ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನು ಕೂಡ ತುಮಕೂರನ್ನು ಕಾಂಗ್ರೆಸ್‌ನಲ್ಲಿ ಉಳಿಸಿಕೊಳ್ಳಿ ಅಂತ ಹೇಳಿದ್ದೆ. 9 ಜನರಿಗೆ ಕೊಟ್ಟು ಒಬ್ಬರಿಗೆ ಕೊಡಲಿಲ್ಲ ಅಂದ್ರೆ ಚೆನ್ನಾಗಿರೋಲ್ಲ. ನೋಡೋಣ ಅವರು ಕೇಳಿದ್ದಾರೆ‌ ನಾನು ಹೇಳಿದ್ದೇನೆ ಏನಾಗುತ್ತೆ ಕಾಯೋಣ. ಅಭ್ಯರ್ಥಿಗಳ ಲಿಸ್ಟ್ ಬಹುತೇಕ ಫೈನಲ್ ಆಗಿದೆ. ಮೀಟಿಂಗ್ ಮುಗಿದ ನಂತರ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: