ಪ್ರಮುಖ ಸುದ್ದಿಮೈಸೂರು

ತಿಂಗಳ ಕೊನೆಯೊಳಗೆ ಸಮರ್ಪಕ ನೀರು ಪೂರೈಸದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ : ಸಿಎಂ ಎಚ್ಚರಿಕೆ

ಸಮರ್ಪಕವಾಗಿ ನೀರು ಪೂರೈಕೆ ಮಾಡಲು ವಿಳಂಬವೇಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿ ಪ್ರಮುಖವಾಗಿ ನಂಜನಗೂಡು ತಾಲೂಕಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು. ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ವಿಳಂಬ ಯಾಕೆ. ಸರಿಯಾಗಿ ನೀರು ಪೂರೈಸದಿದ್ದರೆ ನಿಮ್ಮ ವಿರುದ್ದ ಏನು ಕ್ರಮ ಕೈಗೊಳ್ಳಲಿ, ಅಮಾನತು ಮಾಡೋಣವೇ ಎಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಕಾರು ಗ್ಲಾಸ್ ಏರಿಸಿಕೊಂಡು ಓಡಾಡುತ್ತಿದ್ದೀರಿ, ಜನರ ಸಮಸ್ಯೆ ನಿಮಗೆ ಕಾಣುತ್ತಿಲ್ಲ. ಈ ತಿಂಗಳ ಕೊನೆಯೊಳಗೆ ಸಮರ್ಪಕ ನೀರು ಪೂರೈಸದಿದ್ದರೆ ಎಲ್ಲಾ ಅಧಿಕಾರಿಗಳ ವಿರುದ್ದ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪಂಚಾಯತ್ ರಾಜ್ ಮುಖ್ಯ ಇಂಜಿನಿಯರ್ ಮಂಜುನಾಥ ಅವರ ಅಸಮರ್ಪಕ ಹೇಳಿಕೆಗೆ ಕೋಪಗೊಂಡ ಮುಖ್ಯಮಂತ್ರಿಗಳು ನಿಮಗೆ ಮಾನ ಮರ್ಯಾದೆ ಇಲ್ಲವಾ, ಸ್ವಾಭಿಮಾನ ಇಲ್ಲವಾ, ಇಂಜಿನಿಯರಿಂಗ್ ಓದ ಬೇಕಾದರೆ ಏನು ಕಲಿಸಿಕೊಟ್ಟಿಲ್ಲವಾ ಎಂದು ಕೇಳಿದರು.   ಯಾರೂ ಯಾವುದನ್ನೂ ಕಲಿಸಿಕೊಡುವುದಿಲ್ಲ. ಮಾಡುತ್ತಾ ಕಲಿತುಕೊಳ್ಳಬೇಕು ಎಂದು ಬುದ್ಧಿ ಹೇಳುತ್ತಲೇ ಗದರಿದರು. 65 ವಾರ್ಡ್ ಗಳಲ್ಲಿ ಪ್ರತಿದಿನ 56ವಾರ್ಡ್ ಗಳಿಗೆ ಪ್ರತಿದಿನ ನೀರು. 9 ವಾರ್ಡ್ ಗಳಿಗೆ 2ದಿನಕ್ಕೊಂದು ಬಾರಿ ನೀರು ನೀಡುತ್ತಿದ್ದೇವೆ. ಮೊದಲು 35ಪರ್ಸೆಂಟ್ ಸೋರಿಕೆಯಾಗುತ್ತಿತ್ತು. ಈಗ 25ಪರ್ಸೆಂಟ್ ಸೋರಿಕೆಯಾಗುತ್ತಿದೆ ಪಾಲಿಕೆ ಆಯುಕ್ತ ಜೆ.ಜಗದೀಶ್ ತಿಳಿಸಿದರು. ಅದಕ್ಕೆ ಸಿಎಂ ಉತ್ತರಿಸಿ ಬೆಂಗಳೂರಿನಲ್ಲಿ 49ಪರ್ಸೆಂಟ್ ಸೋರಿಕೆಯಾಗುತ್ತಿದೆ. ಬಿಡುವ ನೀರು ಸರಿಯಾದ ನಿರ್ವಹಣೆ ಇಲ್ಲದೆ ಅರ್ಧದಷ್ಟು ನೀರು ದುರುಪಯೋಗವಾಗುತ್ತಿದೆ. ಮೊದಲು ಇದನ್ನು ಸರಿಪಡಿಸಬೇಕು. ವಾಟರ್ ಮ್ಯಾನ್ ಗಳು ಬೇಕಾದ ಕಡೆ ನೀರು ಬಿಡುತ್ತಾರೆ. ಅವರಿಗೆ ಮನವರಿಕೆ ಮಾಡಿಕೊಡಬೇಕು. ಸೋರಿಕೆಯನ್ನು ತಡೆಗಟ್ಟಿ ಪ್ರತಿದಿನ ಎಲ್ಲಾ ವಾರ್ಡ್ ಗಳಿಗೂ ನೀರು ತಲುಪುವಂತೆ ಕ್ರಮ ಕೈಗೊಳ್ಳಿ ಎಂದರು.

ಕೆರೆ ಸಂಜೀವಿನಿ ಉತ್ತಮ ಕಾರ್ಯಕ್ರಮವಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗಿ. ಕಳೆದ ಬಾರಿ ಕೆರೆ ಅಭಿವೃದ್ಧಿಗೆ 50ಕೋಟಿ ಬಿಡುಗಡೆ ಮಾಡಲಾಗಿದ್ದು,  ಈ ಬಾರಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತೇನೆ. ಕೆರೆಗಳ ಕಾಮಗಾರಿ ಕೈಗೊಳ್ಳುವ ಮುನ್ನ ಕೆರೆಗಳ ಸ್ಥಿತಿಯನ್ನು ಛಾಯಾಚಿತ್ರ ತೆಗೆದು ಬಳಿಕ ಅಭಿವೃದ್ದಿ ಪಡಿಸಿದ ನಂತರವೂ  ಛಾಯಾಚಿತ್ರ ತೆಗೆದು ಕಳಿಸಿ. ಇದರಿಂದ ಭ್ರಷ್ಟಾಚಾರ ಕಡಿಮೆ ಮಾಡಬಹುದು. ಪ್ರತಿಗ್ರಾಮದಲ್ಲೂ ಕುಡಿಯುವ ನೀರಿನ ತೊಟ್ಟಿ ಕಟ್ಟಿಸಿ ಇದರಿಂದ ದನ-ಕರುಗಳಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.

ರೈತರಿಗೆ ಮಾರಾಟ ಮಾಡುವ ಮೇವು ದರವನ್ನು ಕೆ.ಜಿ.ಗೆ ಮೂರು ರೂ.ಗಳಿಂದ ಒಂದೂವರೆ ರೂಪಾಯಿಗೆ ಇಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಪ್ರಸ್ತುತ ಮೇವನ್ನು ಕೆ.ಜಿ.ಗೆ ಆರು ರೂಪಾಯಿ‌ ಪ್ರಕಾರ ಖರೀದಿ ಮಾಡಿ ಮೂರು ರೂ.ಗಳಿಗೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಬರದಿಂದ ಸಂಕಷ್ಟಕ್ಕೆ ಗುರಿಯಾಗಿರುವ ರೈತರಿಗೆ ನೆರವಾಗಲು ದರ ಕಡಿತ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಮೇವಿಗೆ ಕೊರತೆ ಇದೆ. ಆದ್ದರಿಂದ ಮೇವು ಹೊರ ರಾಜ್ಯಗಳಿಗೆ ಸಾಗಣೆ ಆಗದಂತೆ ನೋಡಿಕೊಳ್ಳಬೇಕು. ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಅಧಿಕಾರಿಗಳು ಕಟ್ಟೆಚ್ವರ ವಹಿಸಬೇಕು ಎಂದು ಸೂಚಿಸಿದರು. ಮೇವು ಲಭ್ಯತೆ ಕುರಿತು ಗ್ರಾಮ ಪಂಚಾಯಿತಿಗಳಿಂದ ಮಾಹಿತಿ‌ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿ ಗಳು ಕೊರತೆ ಇರುವ ಕಡೆ ಮೇವು ಬೆಳೆಸಲು ರೈತರಿಗೆ ಉತ್ತೇಜನ ನೀಡಬೇಕು. ಇದಕ್ಕಾಗಿ ಅವರಿಗೆ ಕಿಟ್ ಗಳನ್ನು ವಿತರಿಸಬೇಕು ಎಂದು ಆದೇಶಿಸಿದರು.

ಮೈಸೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನೂ ತೀವ್ರ ಆಗಬಹುದು. ಹೀಗಾಗಿ ಬರ ಪರಿಸ್ಥಿತಿ ಎದುರಿಸಲು ಮೇ ತಿಂಗಳ ವರೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ. ಕುಡಿಯುವ ನೀರಿನ‌ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಿ. ಅಗತ್ಯ ಇರುವ ಕಡೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಂಡು ನೀರು ಪೂರೈಸಿ.

ಕುಡಿಯುವ ನೀರಿಗೆ ತೊಂದರೆ ಎದುರಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಸರ್ಕಾರ ಅಗತ್ಯ ಅನುದಾನ ಒದಗಿಸಲಿದೆ. ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ದೂರು ಬರದಂತೆ ನೋಡಿಕೊಳ್ಳುವುದು. ಡಿಸಿ ಮತ್ತು ಸಿಇಒಗಳ ಜವಾಬ್ದಾರಿ  ಕುಡಿಯುವ ನೀರಿಗೆ ಯಾವುದೇ ಕಾನೂನು ಅಡ್ಡ ಬರಬಾರದು. ಸಮಸ್ಯೆ ಇದ್ದರೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

 

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ, ಶಾಸಕರಾದ ವಾಸು, ಜಿ.ಟಿ.ದೇವೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: