ಕರ್ನಾಟಕ

ಇಂದಿನಿಂದ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭ

ಹಾಸನ (ಮಾ.19): ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಅವರು ಮಾ.19 ರಂದು ಅಧಿಸೂಚನೆ ಹೊರಡಿಸಲಿದ್ದಾರೆ. ಇದರೊಂದಿಗೆ ನಾಮಪತ್ರ ಸಲ್ಲಿಕೆ ಕಾರ್ಯ ಪ್ರಾರಂಭವಾಗಲಿದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದು.

ಮಾ.19 ರಿಂದ ಮಾ.26 ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಇದ್ದು, 4ನೇ ಶನಿವಾರವಾದ ಮಾ.23 ರಂದು ನೆಗೋಷೆಬಲ್ ಇನ್ಸ್‍ಟ್ರುಮೆಂಟ್ ಕಾಯ್ದೆಯನ್ವಯ ಹಾಗೂ ಮಾ.24ರಂದು ಭಾನುವಾರ ರಜೆಯಾದ ಕಾರಣ ಆ ದಿನಗಳಲ್ಲಿ ನಾಮಪತ್ರ ಸ್ವೀಕಾರಕ್ಕೆ ಅವಕಾಶ ಇರುವುದಿಲ್ಲ.
ಅಭ್ಯರ್ಥಿಗಳು ಮಾ.19ರಿಂದ 26ರ ವರೆಗೆ ಸರ್ಕಾರಿ ಕೆಲಸದ ದಿನಗಳಲ್ಲಿ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆ ವರೆಗೆ ನಾಮ ಪತ್ರ ಸಲ್ಲಿಸಬಹುದು. ಒಬ್ಬರು ಅಭ್ಯರ್ಥಿ ಎರಡು ಕ್ಷೇತ್ರದಲ್ಲಿ ಮಾತ್ರ ನಾಮಪತ್ರ ಸಲ್ಲಿಸಬಹುದಾಗಿದೆ.

ನಿಷೇಧಾಜ್ಞೆ ಜಾರಿ:
ಲೋಕಸಭಾ 2019ರ ಸಾರ್ವತ್ರಿಕ ಚುನಾವಣೆ ನಿಮಿತ್ತ ಹಾಸನ ಲೋಕಸಭಾ ಚುನಾವಣೆಗೆ ಮಾ.19 ರಿಂದ ಮಾ.26 ವರೆಗೆ ನಾಮಪತ್ರ ಸಲ್ಲಿಕೆ. ಮಾ.27 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ ಹಾಗೂ ಮಾ. 29 ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನಾಂಕವಾಗಿರುತ್ತದೆ.

ಸದರಿ ಪ್ರಕ್ರಿಯೆಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವುದರಿಂದ ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ನಾಮ ಪತ್ರಗಳನ್ನು ಹಿಂಪಡೆಯುವ ಕಾರ್ಯಗಳು ಸುಗಮ ಮತ್ತು ಶಾಂತಿಯುತವಾಗಿ ನಡೆಸಬೇಕಿರುವುದರಿಂದ ಯಾವುದೇ ಅಹಿತರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಾ.19 ರಂದು ಬೆಳಿಗ್ಗೆ 6 ಗಂಟೆಯಿಂದ ಮಾ.29 ರ ಸಂಜೆ 6 ಗಂಟೆವರೆಗೆ ಹಾಸನ ಜಿಲ್ಲಾಧಿಕಾರಿ ಕಚೇರಿಯ ಆವರಣದ 100 ಮೀಟರ್ ವ್ಯಾಪ್ತಿಯ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅಕ್ರಂ ಪಾಷ ಅವರು ಆದೇಶಿಸಿದ್ದಾರೆ.

ನಿಷೇಧಾಜ್ಞೆಯ ಅವಧಿಯಲ್ಲಿ ಐದು ಮಂದಿಗಿಂತ ಹೆಚ್ಚು ಮಂದಿ ಗುಂಪುಗಾರಿಕೆ ನಡೆಸುವುದು, ಆಯುಧ/ಶಸ್ತ್ರಾಸ್ತ್ರಗಳು ಮತ್ತು ಮಾರಕಸ್ತ್ರಗಳನ್ನು ಹೊತ್ತು ತಿರುಗುವುದನ್ನು ಅನುಮತಿ ಇಲ್ಲದೆ ಸಾಗಾಟ ಮಾಡುವುದನ್ನು ನಿರ್ಭಂದಿಸಿದೆ, ನಾಮಪತ್ರ ಸಲ್ಲಿಸುವ ಕೇಂದ್ರದ 100 ಮೀಟರ್ ಪರಿದಿಯಲ್ಲಿ ಚುನಾವಣೆ ನಡೆಯುವ ಕಾರ್ಯದ ಮೇಲೆ ನಿರತರಾಗಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ, ಅಭ್ಯರ್ಥಿಗಳು, ಅನುಮತಿ ಹೊಂದಿದ ರಕ್ಷಣಾ ಇಲಾಖೆಯವರು ಹಾಗೂ ಅನುಮತಿ ಪಡೆದ ಮಾಧ್ಯಮದವರು ಇವರುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ತರಹದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿದೆ.

ಯಾವುದೇ ರೀತಿಯ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು, ಮೆರವಣಿಗೆ ನಡೆಸುವುದು ಹಾಗೂ ಶಾಂತಿ ಶಿಸ್ತು ಪಾಲನೆಗೆ ಭಂಗ ತರುವ ರೀತಿಯಲ್ಲಿ ವರ್ತಿಸುವಂತಿಲ್ಲ, ಯಾವುದೇ ರೀತಿಯ ಸಾರ್ವಜನಿಕ ಆಸ್ತಿಗಳು ವಿರೂಪವನ್ನು ಉಂಟು ಮಾಡುವುದನ್ನಾಗಲಿ ಅಥವಾ ನಷ್ಟಗೊಳಿಸುವುದನ್ನಾಗಲಿ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಅಕ್ರಂ ಪಾಷ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.(ಎನ್.ಬಿ)

Leave a Reply

comments

Related Articles

error: