ಕರ್ನಾಟಕಪ್ರಮುಖ ಸುದ್ದಿ

ಮಂಡ್ಯ, ಹಾಸನ, ಮೈಸೂರು ಕ್ಷೇತ್ರಗಳ ಸಮಸ್ಯೆಗೆ ಮದ್ದು: ಮೈತ್ರಿ ಪಕ್ಷಗಳ ಕಸರತ್ತು

ಬೆಂಗಳೂರು (ಮಾ.13): ಮಂಡ್ಯದಲ್ಲಿ ಮೈತ್ರಿ ಪಕ್ಷಗಳ ನಡುವೆ ದೊಡ್ಡ ಕಂದಕ ಉಂಟಾಗಿದೆ. ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿದ್ದರೂ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿ ಬೆಂಬಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಸನದಲ್ಲೂ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡಿದ್ದು, ಅಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಗೊಂದಲಕ್ಕೆ ಸಿಲುಕಿದ್ದಾರೆ. ಎ.ಮಂಜು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು, ಅಲ್ಲೂ ಕೂಡ ಜೆಡಿಎಸ್‌ಗೆ ಪೆಟ್ಟು ಬೀಳುವ ಸಾಧ್ಯತೆಯಿದೆ.

ಕಾಂಗ್ರೆಸ್ – ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿರುವ ಕಾರಣಕ್ಕೆ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಆಕ್ರೋಶಗೊಂಡಿದ್ದು, ಜೆಡಿಎಸ್ ಬೆಂಬಲಿಸಲ್ಲ ಎಂದು ಮಂಡ್ಯದಲ್ಲಿ ಹೇಳಿದ್ರೆ, ಹಾಸನದಲ್ಲಿ ಎ.ಮಂಜು ಬೆಂಬಲಿಗರು ಸೇರಿದಂತೆ ಜಿಲ್ಲೆಯಾದ್ಯಂತ ಕಾರ್ಯಕರ್ತರ ಪಡೆಯ ಜೊತೆಗೆ ಕಮಲ ಪಕ್ಷ ಸೇರುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಪಕ್ಷ ಗೆಲುವಿಗೆ ಹರಸಾಹಸ ಪಡಬೇಕಾದ ಸ್ಥಿತಿ ಉಂಟಾಗಿದೆ. ಇದ್ರಿಂದ ಕಂಗಾಲಾಗಿರುವ ಕಾಂಗ್ರೆಸ್-ಜೆಡಿಎಸ್ ನಾಯಕರು ಇಂದು ಸಭೆ ಕರೆದಿದ್ದು, ಹಾಸನ, ಮಂಡ್ಯ ಸೇರಿದಂತೆ ಮೈಸೂರು ಕ್ಷೇತ್ರದ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲಿದ್ದಾರೆ.

ಮಂಡ್ಯದಲ್ಲಿ ಕಾಂಗ್ರೆಸ್ ಹೇಗೆ ನಡೆದುಕೊಳ್ಳುತ್ತೋ ಅದೇ ರೀತಿ ಜೆಡಿಎಸ್ ಕೂಡ ಮೈಸೂರಲ್ಲಿ ನಡೆದುಕೊಳ್ಳಲಿದೆ. ಒಂದು ವೇಳೆ ಮಂಡ್ಯದಲ್ಲಿ‌ ಏನಾದರೂ ಹೆಚ್ಚುಕಡಿಮೆ ಆದರೆ ಮೈಸೂರನ್ನು ಮರೆತುಬಿಡಿ ಎಂದು ಸಚಿವ ಸಾ.ರಾ. ಮಹೇಶ್ ಎಚ್ಚರಿಸಿದ್ರು. ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಮೈತ್ರಿ ಪಕ್ಷದ ನಾಯಕರು ಮುಂದಾಗಿದ್ದು, ಇಂದು ಸಭೆ ಸೇರಲಿದ್ದಾರೆ. ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಡಿಸಿಎಂ ಪರಮೇಶ್ವರ್ ಹಾಜರಾಗಲಿದ್ದಾರೆ. ಮುಂದಿನ ಚುನಾವಣಾ ಪ್ರಚಾರಕ್ಕೆ ಒಟ್ಟಾಗಿ ಹೋಗುವುದು, ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆ ಯಾವುದೇ ಗೊಂದಲಕ್ಕೆ ಅವಕಾಶ ಕೊಡದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.

ಈಗಾಗಲೇ ಖಾಸಗಿ ಹೋಟೆಲ್‌ನಲ್ಲಿ ಸಭೆ ಆರಂಭವಾಗುತ್ತಿದ್ದು, ನಂತರ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಜಂಟಿ ಸುದ್ದಿಗೋಷ್ಠಿ‌ಯಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. (ಎನ್.ಬಿ)

Leave a Reply

comments

Related Articles

error: