ಪ್ರಮುಖ ಸುದ್ದಿ

ಶಂಕಿತ ನಕ್ಸಲ್ ರೂಪೇಶ್ ಮಡಿಕೇರಿ ಕೋಟ್‍ಗೆ ಹಾಜರ್ : ಏ.10 ಕ್ಕೆ ವಿಚಾರಣೆ ಮುಂದೂಡಿಕೆ

ರಾಜ್ಯ(ಮಡಿಕೇರಿ )ಮಾ.19 : – 2010ರಲ್ಲಿ ಭಾಗಮಂಡಲ ಸಮೀಪದ ಮುಂಡ್ರೋಟು ಭಾಗದಲ್ಲಿ ನಕ್ಸಲರು ಪ್ರತ್ಯಕ್ಷರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ನಕ್ಸಲ್ ಮುಖಂಡ ರೂಪೇಶ್‍ನನ್ನು ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.

ಸೋಮವಾರ ರಾತ್ರಿ ಮಡಿಕೇರಿಯ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿದ್ದ ರೂಪೇಶ್‍ನನ್ನು ಕೇರಳ ಭಯೋತ್ಪಾದಕ ನಿಗ್ರಹ ದಳ, ಕೇರಳ ಪೊಲೀಸರು ಮತ್ತು ಕೊಡಗು ಪೊಲೀಸರು ಬಿಗಿ ಭದ್ರತೆಯಲ್ಲಿ ಮಂಗಳವಾರ ಜಿಲ್ಲಾ ನ್ಯಾಯಾಲಯಕ್ಕೆ ಕರೆತಂದರು. ಪೊಲೀಸ್ ವಾಹನದಿಂದ ಕೆಳಗಿಳಿಯುತ್ತಿದ್ದಂತೆಯೇ ನಕ್ಸಲ್‍ವಾದ ಹಾಗೂ ಕಾರ್ಮೆಡ್ ಜಲೀಲ್ ಪರ ಘೋಷಣೆ ಕೂಗುತ್ತಾ ನ್ಯಾಯಾಲಯ ಪ್ರವೇಶಿಸಿದ.

ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವೀರಪ್ಪ.ವಿ.ಮಲ್ಲಾಪುರ ಅವರ ಮುಂದೆ ಹಾಜರಾದ ಶಂಕಿತ ನಕ್ಸಲ್ ಮುಖಂಡ ರೂಪೇಶ್, 2010ರಲ್ಲಿ ಭಾಗಮಂಡಲ ಸಮೀಪದ ಮುಂಡ್ರೋಟುವಿನಲ್ಲಿ ನಕ್ಸಲರು ಪ್ರತ್ಯಕ್ಷರಾದ ಪ್ರಕರಣದಲ್ಲಿ ಕೊಡಗು ಪೊಲೀಸರು ನನ್ನ ಹೆಸರನ್ನು ಸೇರಿಸಿದ್ದಾರೆ. ಆದರೆ ಇದೇ ಸಮಯದಲ್ಲಿ ಕೇರಳದಲ್ಲೂ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಬ್ಬ ವ್ಯಕ್ತಿ ಒಂದೇ ಸಮಯದಲ್ಲಿ ಎರಡು ಕಡೆ ಇರಲು ಸಾಧ್ಯವಿಲ್ಲ. ಹೀಗಾಗಿ ಮುಂಡ್ರೋಟು ಪ್ರಕರಣದಿಂದ ತನ್ನನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.

ರೂಪೇಶ್ ಮನವಿ ಆಲಿಸಿದ ಜಿಲ್ಲಾ ನ್ಯಾಯಾಧೀಶ ವೀರಪ್ಪ.ವಿ.ಮಲ್ಲಾಪುರ ಅವರು, ಏಪ್ರಿಲ್ 10ಕ್ಕೆ ವಿಚಾರಣೆಯನ್ನು ಮುಂದೂಡಿದರು. ಕೋರ್ಟ್‍ನಿಂದ ಹೊರ ಬಂದ ರೂಪೇಶ್ ಮತ್ತೆ ನಕ್ಸಲ್ ಪರ ಘೋಷಣೆ ಕೂಗಿದ. ಕೇರಳದ ವಯನಾಡಿನಲ್ಲಿ ಕೆಲವು ದಿನಗಳ ಹಿಂದೆ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ಕಾರ್ಮೆಡ್ ಜಲೀಲ್ ಅಮರ್ ರಹೇ, ಕಾರ್ಮೆಡ್ ಜಲೀಲ್‍ನದು ನಕಲಿ ಎನ್‍ಕೌಂಟರ್, ಕಮ್ಯುನಿಸ್ಟ್‍ಗಳನ್ನು ಕೊಲ್ಲುತ್ತಿರುವ ಸರಕಾರಕ್ಕೆ ಧಿಕ್ಕಾರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣ ಹಿನ್ನೆಲೆ:

ಶಂಕಿತ ನಕ್ಸಲ್ ಮುಖಂಡ ರೂಪೇಶ್ ವಿರುದ್ದ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಬಗ್ಗೆ ಆರೋಪಗಳಿದ್ದು, ಹಲವು ಪ್ರಕರಣಗಳು ದಾಖಲಾಗಿವೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ 2 ಪ್ರತ್ಯೇಕ ಪ್ರಕರಣದ ವಿಚಾರಣೆಗಾಗಿ ಇದೀಗ 4ನೇ ಬಾರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ರೂಪೇಶ್ ಹಾಜರಾಗಿದ್ದಾನೆ. ಮಂಗಳವಾರ ವಿಚಾರಣೆ ನಡೆಸಿದ ಬಳಿಕ ಆರೋಪಿ ರೂಪೇಶನನ್ನು ಕೇರಳಕ್ಕೆ ಕರೆದೊಯ್ಯಲಾಯಿತು. ಮಡಿಕೇರಿ ನ್ಯಾಯಾಲಯದ ಹೊರಭಾಗದಲ್ಲಿ ನಗರ ಠಾಣಾಧಿಕಾರಿ ಷಣ್ಮುಗ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: