ಪ್ರಮುಖ ಸುದ್ದಿಮೈಸೂರು

ಸಡಗರ ಸಂಭ್ರಮದಿಂದ ಹೋಳಿ ಹಬ್ಬ ಆಚರಣೆ : ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದ ಕಾಲೇಜು ವಿದ್ಯಾರ್ಥಿನಿಯರು

ಮೈಸೂರು,ಮಾ.20:- ಹೋಳಿ ಬಣ್ಣಗಳ ಹಬ್ಬ, ಅದರ ಜೊತೆಗೆ ಭಕ್ಷ್ಯಗಳ ಹಬ್ಬ. ಸ್ನೇಹಿತರು, ಸಂಬಂಧಿಕರು, ಪರಿಚಿತರು ಪರಸ್ಪರ ಭೇಟಿಯಾಗಿ ಪರಸ್ಪರ ಬಣ್ಣವನ್ನು ಹಚ್ಚಿ ಸಂಭ್ರಮಿಸುತ್ತಾರೆ. ಆಲಂಗಿಸಿಕೊಳ್ಳುತ್ತಾರೆ. ಹೋಳಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಹೋಳಿ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದು, ಇತ್ತೀಚೆಗೆ ದಕ್ಷಿಣ ಭಾರತದಲ್ಲೂ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತಿದೆ.

ಮೈಸೂರಿನ ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರೂ ಕೂಡ ಪರಸ್ಪರ ಬಣ್ಣಗಳನ್ನು ಹಚ್ಚುವುದರ ಮೂಲಕ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಿದರು.  ಮಹಾರಾಣಿ, ಮಹಾರಾಜ, ಮಹಾಜನ ಸೇರಿದಂತೆ ಹಲವು ಕಾಲೇಜುಗಳಲ್ಲಿ ಹೋಳಿ ಸಂಭ್ರಮ ಜೋರಾಗಿತ್ತು. ಕಲರ್ ಕಲರ್ ಬಣ್ಣ ಹಚ್ಚುವುದರಲ್ಲಿ  ಯುವ ಸಮೂಹ ಬ್ಯುಸಿಯಾಗಿತ್ತು.  ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ರಂಗು ರಂಗಿನ ಬಣ್ಣದೊಳಗೆ ವಿದ್ಯಾರ್ಥಿನಿಯರು ಮಿಂದೆದ್ದರು. ಒಲ್ಲೆ ಎಂದವರನ್ನೂ  ಬಿಡದೇ ಬಣ್ಣ ಹಚ್ಚಿದರು. ವಿದ್ಯಾರ್ಥಿನಿಯರು ಪ್ರಾಧ್ಯಾಪಕರಿಗೂ ಬಣ್ಣ ಬಳಿದು ಸಂಭ್ರಮಿಸಿದರು. ಹೋಳಿಯ ನೆನಪಿಗಾಗಿ ಬಿಳಿ ಟೀ ಶರ್ಟ್ ಮೇಲೆ ಸಹಿ ಹಾಕಿಸಿಕೊಂಡರು.  ಮಹಾರಾಣಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಬಣ್ಣದೊಂದಿಗೆ ಆಗಮಿಸಿ. ಪರಸ್ಪರ ಬಣ್ಣ ಎರಚುತ್ತಾ ಒಬ್ಬರನ್ನೊಬ್ಬರು ರೇಗಿಸಿ ಹೋಳಿ ಸಡಗರವನ್ನಾಚರಿಸಿದರು.

ಪ್ರತಿ ವರ್ಷ ನಮ್ಮ ಕಾಲೇಜಿನಲ್ಲಿ ಹೋಳಿ ಹಬ್ಬದ ಸಡಗರ ಇದ್ದೇ ಇರುತ್ತದೆ. ಈ ವರ್ಷವೂ ಅಂಥ ಖುಷಿ ಅನುಭವಿಸಿದೆವು ಎಂದು ವಿದ್ಯಾರ್ಥಿನಿಯರು ಖುಷಿ ಕ್ಷಣ ಹಂಚಿಕೊಂಡರು.

ಫಾಲ್ಗುಣ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಪ್ರದೋಷಕಾಲದಲ್ಲಿ ಹೋಲಿಕಾದಹನವನ್ನು ಮಾಡಲಾಗುತ್ತದೆ. ಪ್ರದೋಷ ಕಾಲದಲ್ಲಿ ಹೋಲಿಕಾ ದಹನ ಮಾಡುವುದು ಪ್ರಾಶಸ್ತ್ಯವೆಂದು ಹೇಳಲಾಗುತ್ತದೆ. ಇಂದು ಹೋಲಿಕಾ ದಹನ ನಡೆಸಲು ರಾತ್ರಿ 9.05ರಿಂದ 11.31ರವರೆಗೆ ಮುಹೂರ್ತವಿದೆ ಎನ್ನಲಾಗಿದೆ. ಹುಣ್ಣಿಮೆಯ ತಿಥಿಯು ರಾತ್ರಿ 10.44ರಿಂದ ಆರಂಭವಾಗಲಿದೆ. ಹುಣ್ಣಿಮೆ ತಿಥಿಯು ಮಾರ್ಚ್ 21ರಂದು ಬೆಳಿಗ್ಗೆ 7.12ಕ್ಕೆ ಮುಕ್ತಾಯಗೊಳ್ಳಲಿದೆ. ಹೋಲಿಕಾದಹನ ಮಾಡುವ ಸ್ಥಳವನ್ನು ಮೊದಲು ಗಂಗಾಜಲದಿಂದ ಶುದ್ಧಗೊಳಿಸಿ ಬಳಿಕ ಕಟ್ಟಿಗೆಗಳನ್ನುಇಟ್ಟು ಅದರ ಮೇಲೆ ಕರ್ಪೂರದಿಂದ ಅಗ್ನಿಯನ್ನು ಸ್ಪರ್ಶಿಸಬೇಕು ಎನ್ನಲಾಗುತ್ತದೆ. ಹೋಲಿಕಾ ದಹನ ಅಥವಾ ಕಾಮದಹನ ಕುರಿತು ಹಲವಾರು ಕಥೆಗಳು ಪ್ರಚಲಿತದಲ್ಲಿವೆ. ಹಿರಣ್ಯ ಕಶಿಪುವಿನ ಮಗ ಭಕ್ತಪ್ರಹ್ಲಾದ ವಿಷ್ಣುವಿನ ಅಪ್ರತಿಮ ಭಕ್ತ. ಆದರೆ ಹಿರಣ್ಯ ಕಶಿಪು ಭಗವಾನ್ ವಿಷ್ಣುವಿನ ವಿರೋಧಿ. ತನ್ನ ಮಗ ಪ್ರಹ್ಲಾದನನ್ನೇ ಹಲವಾರು ಬಾರಿ ಈತ ಕೊಲ್ಲಲು ಯತ್ನಿಸಿದ್ದ. ತನ್ನ ಮಗನನ್ನು ಕೊಲ್ಲಲು ತನ್ನ ಸಹೋದರಿ ಹೋಲಿಕಾಳ ಸಹಾಯವನ್ನೂ ಪಡೆದಿದ್ದ. ಹೋಲಿಕಾಳಿಗೆ ಅಗ್ನಿ ಪ್ರವೇಶಿಸಿದರೂ ಸಾವಿಲ್ಲದ ವರ ಲಭಿಸಿತ್ತು. ಇದಕ್ಕಾಗಿ ಹೋಲಿಕಾ ಪ್ರಹ್ಲಾದನನ್ನು ಕರೆದುಕೊಂಡು ಅಗ್ನಿಯಲ್ಲಿ ಕುಳಿತಿದ್ದಳು. ಆದರೆ ಶ್ರೀವಿಷ್ಣು ಪ್ರಹ್ಲಾದನನ್ನು ರಕ್ಷಿಸಿದ. ಆದರೆ ಹೋಲಿಕಾ ಅಗ್ನಿಯಲ್ಲಿಯೇ ಭಸ್ಮವಾದಳು. ಅಂದಿನಿಂದ ಹೋಲಿಕಾ ದಹನ ಆರಂಭವಾಯಿತು ಎಂದು ಪುರಾಣಗಳು ತಿಳಿಸುತ್ತವೆ.

ಹೋಲಿಕಾದಹನವನ್ನು ಮಾಡುವುದರಿಂದ ಹಲವು ಸಮಸ್ಯೆಗಳು ನಿವಾರಣೆಯಾಗಿ ಹಲವು ರೋಗಗಳಿಂದ ಮುಕ್ತರಾಗಬಹುದಂತೆ. ಆರ್ಥಿಕ ಸುಧಾರಣೆಯಾಗುವುದಂತೆ. ಪರಮೇಶ್ವರನ ಕೃಪೆ ಸುಲಭವಾಗಿ ಲಭಿಸಲಿದೆಯಂತೆ.

ಅದೇನೇ ಇರಲಿ ಇಂದು ದೇಶದಾದ್ಯಂತ ವಿಜೃಂಭಣೆಯಿಂದ, ಸಡಗರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. (ಕೆ.ಎಸ್, ಎಸ್.ಎಚ್)

 

Leave a Reply

comments

Related Articles

error: