ಮನರಂಜನೆ

ರಕ್ಷಿತ್ ಶೆಟ್ಟಿ ಜೊತೆ ಅಭಿನಯಿಸಲಿರುವ ಇಬ್ಬರು ಪುಟಾಣಿಗಳು!

'ಡಬ್ ಸ್ಮ್ಯಾಶ್' 'ಡ್ರಾಮಾ ಜೂನಿಯರ್ಸ್' ಖ್ಯಾತಿ ಇವರಿಗೆ

ಬೆಂಗಳೂರು (ಮಾ.20): ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿರುವ ‘777 ಚಾರ್ಲಿ’ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಚಾರ್ಲಿ ಹೆಸರಿನ ಶ್ವಾನ ಮತ್ತು ಚಿತ್ರದ ನಾಯಕನ ನಡುವಿನ ಸಂಬಂಧದ ಬಗ್ಗೆ ಕಥೆ ಹೊಂದಿರುವ ಸಿನಿಮಾ ಇದು. ಏಕಾಂಗಿಯಾಗಿರುವ ಕಥಾನಾಯಕನ ಜೀವನಕ್ಕೆ ಚಾರ್ಲಿ ಎನ್ನುವ ಶ್ವಾನ ಎಂಟ್ರಿ ಕೊಟ್ಟಾಗ ಏನಾಗುತ್ತೆ, ಆ ನಂತರ ಅವರ ಜೀವನ ಹೇಗೆ ಬದಲಾಗುತ್ತೆ ಎನ್ನುವುದನ್ನು ಈ ಸಿನಿಮಾ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕ ಕಿರಣ್ ರಾಜ್.

ವಿಶೇಷ ಅಂದರೆ ಶ್ವಾನ ಮತ್ತು ನಾಯಕ ರಕ್ಷಿತ್ ನಡುವೆ ಈಗ ಇಬ್ಬರು ಪುಟ್ಟ ಮಕ್ಕಳು ಎಂಟ್ರಿಕೊಟ್ಟಿದ್ದಾರೆ. ಡ್ರಾಮ ಜೂನಿಯರ್ಸ್ ರಿಯಾಲಿಟಿ ಶೋ ಖ್ಯಾತಿಯ ಶರ್ವರಿ ಮತ್ತು ಡಬ್ ಸ್ಮ್ಯಾಶ್ ಮೂಲಕ ಜಾಲತಾಣದಲ್ಲಿ ಖ್ಯಾತಿ ಗಳಿಸಿದ್ದ ಪ್ರಾಣ್ಯ ಪಿ ರಾವ್, 777 ಚಾರ್ಲಿ ಬಳಗ ಸೇರಿಕೊಂಡಿದ್ದಾರೆ. ಈ ಪುಟಾಣಿಗಳಿಬ್ಬರು ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವುದಿಲ್ಲ. ಪ್ರಾಣ್ಯ ಕಥಾನಾಯಕ ಚಿಕ್ಕವನಾಗಿದ್ದಾಗ ಆತನ ತಂಗಿಯ ಪಾತ್ರ ಅಭಿನಯಿಸುತ್ತಾಳೆ. ಶರ್ವರಿ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ನಾಯಿ ಚಾರ್ಲಿ ಈ ಚಿತ್ರದ ಹೈಲಟ್. ಜೊತೆಗೆ ಈ ಇಬ್ಬರು ಮಕ್ಕಳು ಸಹ ‘777 ಚಾರ್ಲಿಯ’ ಮತ್ತೊಂದು ಆಕರ್ಷಣೆ.

ಈಗಾಗಲೇ ಶೇಕಡಾ 30 ರಷ್ಟು ಚಿತ್ರೀಕರಣ ಮಾಡಿ ಮುಗಿಸಿದೆ ಚಿತ್ರತಂಡ. ಸದ್ಯ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ಬ್ಯುಸಿ ಇರುವ ಕಾರಣ ಆ ಸಿನಿಮಾ ಮುಗಿದ ಬಳಿಕ ‘777 ಚಾರ್ಲಿ’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. (ಎನ್.ಬಿ)

Leave a Reply

comments

Related Articles

error: