ಪ್ರಮುಖ ಸುದ್ದಿ

ಪ್ರತಾಪ್ ಸಿಂಹ ಸಾಧನೆ ಶೂನ್ಯ : ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ  ಪುಷ್ಪಾ ಅಮರನಾಥ್ ಆರೋಪ

ರಾಜ್ಯ (ಮಡಿಕೇರಿ) ಮಾ.20: – ಕೊಡಗು ಜಿಲ್ಲೆಗೆ ಸಂಸದ ಪ್ರತಾಪ್‍ಸಿಂಹ ಅವರ ಕೊಡುಗೆ ಶೂನ್ಯವಾಗಿದ್ದು, ಜಿಲ್ಲೆಯ ಯಾವುದೇ ಕಷ್ಟಗಳಿಗೆ ಸ್ಪಂದಿಸದ ಅವರು ಭಾಷಣದ ಮೂಲಕ ಕೇವಲ ಪ್ರಚಾರಕಷ್ಟೇ ಸೀಮಿತರಾಗಿದ್ದರು ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಆರೋಪಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರದ್ದು ಅಭಿವೃದ್ಧಿ ಶೂನ್ಯ ಸಾಧನೆಯಾಗಿದೆ. ಕೊಡಗು ಜಿಲ್ಲೆಗೆ ಸಂಸದರ ಕೊಡುಗೆ ಏನು ಎಂಬುವುದನ್ನು ಸ್ಪಷ್ಟಪಡಿಸಬೇಕು. ಪ್ರಧಾನಿ ನರೇಂದ್ರಮೋದಿ ಅವರ ಮುಖವಾಡ ತೊಟ್ಟು ಕಳೆದ ಬಾರಿ ಗೆಲುವು ಸಾಧಿಸಿದರು ಎಂದು ಆರೋಪಿಸಿದರು.

ಈ ಬಾರಿ ಮೋದಿ ಮುಖವಾಡ ತೊಟ್ಟು ಗೆಲುವು ಸಾಧಿಸಲು ಸಾಧ್ಯವಿಲ್ಲ. ಟಿಪ್ಪು ಜಯಂತಿ, ಹನುಮ ಜಯಂತಿಯಂತಹ ವಿವಾದಗಳನ್ನು ಬಿಟ್ಟರೆ ಸಂಸದರಾಗಿ ಏನು ಸಾಧನೆ ಮಾಡಿದ್ದಾರೆ ಎಂದು ಪುಷ್ಪಾ ಅಮರನಾಥ್ ಪ್ರಶ್ನಿಸಿದರು.

ಬಿಜೆಪಿ ನಾಯಕರು ಯೋಧರ ಸಾವಿನ ಮೇಲೆ ರಾಜಕೀಯ ಮಾಡುತ್ತಿದ್ದಾರೆ, ಯೋಧರನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿದ ಅವರು ಪ್ರಜ್ಞಾವಂತ ಮತದಾರರು ಈ ಬಾರಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಕೊಡಗಿನ ಜನ ಬಹಳ ಬುದ್ದಿವಂತರಾಗಿದ್ದು, ಬಿಜೆಪಿಯ ಸುಳ್ಳಿಗೆ ಮರುಳಾಗುವುದಿಲ್ಲವೆಂದು ಪುಷ್ಪಾ ಅಮರನಾಥ್ ಅಭಿಪ್ರಾಯಪಟ್ಟರು.

ಸುಮಲತಾ ಅಂಬರೀಶ್ ನಾಮಪತ್ರ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ.  ಅಲ್ಲಿನ ಅಭಿಮಾನಿಗಳ ಆಶಯದಂತೆ ಅವರು ಸ್ಪರ್ಧೆ ಮಾಡಿದ್ದಾರೆ. ಅವರ ಬಗ್ಗೆ ನಮಗೆ ಗೌರವವಿದೆ, ಆದರೆ ಸಮ್ಮಿಶ್ರ ಒಪ್ಪಂದಕ್ಕೆ ಬೆಲೆ ಕೊಡಬೇಕು. ಜೆಡಿಎಸ್ ಸಂಸದರಿರುವ ಕಡೆ ಅವರಿಗೆ ಬಿಟ್ಟು ಕೊಡಬೇಕೆಂದಿದೆ. ಹಾಗಾಗಿ ಅಲ್ಲಿ ಸುಮಲತಾ ಅವರಿಗೆ ಟಿಕೆಟ್ ಸಿಗಲಿಲ್ಲ, ಬದಲಿ ಕ್ಷೇತ್ರ ನೀಡುವುದಾಗಿ ಹೇಳಲಾಗಿತ್ತು ಎಂದು ಪುಷ್ಪಾ ಅಮರನಾಥ್ ತಿಳಿಸಿದರು.  (ಕೆಸಿಐ,ಎಸ್.ಎಚ್)

 

 

Leave a Reply

comments

Related Articles

error: