ಪ್ರಮುಖ ಸುದ್ದಿ

ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್‍ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ಚಲನಚಿತ್ರಗಳನ್ನು ಪ್ರದರ್ಶಿಸಲು ನಿರ್ಬಂಧವಿದೆ : ಡಿಸಿ ಎನ್.ಮಂಜುಶ್ರೀ

ರಾಜ್ಯ(ಮಂಡ್ಯ)ಮಾ.21:-  ಮಂಡ್ಯ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿರುವ ಸಂಬಂಧ ಚುನಾವಣೆಯಲ್ಲಿ ನಟರು ಸ್ಪರ್ಧಿಸುತ್ತಿದ್ದಾರೆ. ಅವರು ನಟಿಸಿರುವ ಚಲನಚಿತ್ರಗಳು ಪ್ರದರ್ಶನವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ಸ್ಪಷ್ಟೀಕರಣ ನೀಡಿರುತ್ತಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪತ್ರ ಸಂ 437/6ಜಿಜೆ-ಹೆಚ್‍ಪಿ/2014 ಅನ್ವಯ ಖಾಸಗಿ ಚಾನೆಲ್‍ಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ವಾಣಿಜ್ಯ ಜಾಹಿರಾತು, ಚಲನಚಿತ್ರಗಳ ಪ್ರದರ್ಶನ ಹಾಗೂ ಸಿನಿಮಾ ಮಂದಿರಗಳಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲು ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಲೋಕಸಭೆ ಸಾರ್ವತ್ರಿಕ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರಿ ಸ್ವಾಮ್ಯದ ದೂರದರ್ಶನ ಚಾನೆಲ್‍ನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವ ನಟರ ಚಲನಚಿತ್ರಗಳನ್ನು (ವಾಣಿಜ್ಯ ಜಾಹಿರಾತು ಹೊರತುಪಡಿಸಿ) ಪ್ರದರ್ಶಿಸಲು ನಿರ್ಬಂಧವಿರುತ್ತದೆ ಎಂದು ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯ 100 ಮೀ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಿ ಆದೇಶವನ್ನು ಹೊರಡಿಸಲಾಗಿದೆ. ಮಾರ್ಚ್ 19 ರಿಂದ 26 ರವರೆಗೆ ಮಂಡ್ಯ ಲೋಕಸಭಾ ಸಾರ್ವತ್ರಿಕ ಚುನಾವಣೆ-2019 ಸಂಬಂಧ ನಾಮಪತ್ರ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಗೆ ಬರುವುದರಿಂದ  ಹಾಗೂ ಈ ಸಮಯದಲ್ಲಿ ಪಕ್ಷದ ಬೆಂಬಲಿತ ಇತರೆ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಸುಗಮವಾಗಿ ನಡೆಯಲು  ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಯ ಕಛೇರಿಯ 100 ಮೀ ವ್ಯಾಪ್ತಿಯಲ್ಲಿ ಮಾರ್ಚ್ 19 ರ ಬೆಳಿಗ್ಗೆ 10 ಗಂಟೆಯಿಂದ ಮಾರ್ಚ್ 26 ಮಧ್ಯರಾತ್ರಿ 12 ಗಂಟೆವರೆಗೆ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಮಂಡ್ಯ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ ಅವರು  ಆದೇಶಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: