ದೇಶವಿದೇಶ

ಭಾರತದ ದಾಳಿಗೂ ಮೊದಲೇ ಪಾಕಿಸ್ತಾನ ಉಗ್ರರನ್ನು ಸಾಗಿಸಿದೆ: ಭುಟ್ಟೋ ಹೇಳಿಕೆ!

ಇಸ್ಲಾಮಾಬಾದ್ (ಮಾ.22): ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರೇ ಭಯೋತ್ಪಾದಕ ಸಂಘಟನೆಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಅಂದು ಬಾಲಕೋಟ್ ದಾಳಿಗೂ ಮುನ್ನ ಪಾಕ್ ಸ್ರಕಾರವೇ ಉಗ್ರರನ್ನು ಸುರಕ್ಷಿತ ಸ್ಥಳಕ್ಕೆ ಕಳಿಸಿತ್ತು ಎಂದು ಪಾಕಿಸ್ತಾನ ಪ್ರತಿಪಕ್ಷ ಮುಖಂಡ ಬಿಲಾವಲ್ ಭುಟ್ಟೊ ಜರ್ದಾರಿ ಗಂಭೀರ ಆರೋಪ ಮಾಡಿದ್ದಾರೆ.

ಇಡೀ ವಿಶ್ವವೇ ಪಾಕಿಸ್ತಾನದ ವಿರುದ್ಧ ನಿಂತಿದ್ದರೂ, ಭಾರತ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರೂ ಇಮ್ರಾನ್ ಖಾನ್ ಅವರು ಭಯೋತ್ಪಾದಕ ಸಂಘಟನೆಗಳನ್ನು ನಿಷೇಧಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಈಗಾಗಲೇ ನಿಷೇಧಿಸಲ್ಪಟ್ಟ ಉಗ್ರ ಸಂಘಟನೆಯ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರೂ, ಅದು ಸುಳ್ಳು ಎಂಬುದು ನಮಗೆ ಗೊತ್ತು. ವಿಪಕ್ಷಗಳು ಸತತ ಒತ್ತಡ ಹೇರುತ್ತಿದ್ದರೂ ಸರ್ಕಾರ ಅದನ್ನು ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಮುಖಂಡರಾಗಿರುವ ಜರ್ದಾರಿ ದೂರಿದ್ದಾರೆ.

ಇದೇ ವೇಳೆ, ಭಯೋತ್ಪಾದಕ ಸಂಘಟನೆಗಳನ್ನು ನಿರ್ನಾಮ ಮಾಡಲು ಈಗಾಗಲೇ ಪಾಕ್ ಸರ್ಕಾರ ಯಾವೆಲ್ಲ ಕ್ರಮ ಕೈಗೊಂಡಿದೆಯೇ? ಕ್ರಮ ಕೈಗೊಂಡಿರುವುದಕ್ಕೆ ಯಾವ ಸಾಕ್ಷ್ಯ ಇದೆ ಎಂದು ಅವರು ಪ್ರಶ್ನಿಸಿದರು. ಫೆಬ್ರವರಿ 26 ರಂದು ಭಾರತ ಪಾಕಿಸಾನದ ಬಾಲಕೋಟ್ ನಲ್ಲಿದ್ದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಶಿಬಿರಗಳ ಮೇಲೆ ದಾಳಿ ನಡೆಸುವ ಮುನ್ನ ಅಲ್ಲಿಂದ ಪಾಕ್ ಸರ್ಕಾರವೇ ಭಯೋತ್ಪಾದಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿತ್ತು ಎಂಬ ಆಘಾತಕಾರಿ ಹೇಳಿಕೆಯನ್ನು ಜರ್ದಾರಿ ನೀಡಿದ್ದಾರೆ.

ಭಯೋತ್ಪಾದನೆಯನ್ನು ಹತ್ತಿಕ್ಕುವ ಸಲುವಾಗಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ನಾಯಕರನ್ನು ಬಂಧಿಸಿದ್ದಾಗಿ ನೀವು ಹೇಳಿದ್ದೀರಿ. ಆದರೆ ನನಗೆ ಗೊತ್ತು, ಅಂದು ಭಾರತದ ಏರ್ ಸ್ಟ್ರೈಕ್ ನಿಂದ ಅವರನ್ನೆಲ್ಲ ರಕ್ಷಿಸವ ಸಲುವಾಗಿ ಸುರಕ್ಷಿತ ಸ್ಥಳವೊಂದಕ್ಕೆ ನೀವೇ ರವಾನಿಸಿದ್ದೀರಿ ಎಂದು ಭುಟ್ಟೋ ಆರೋಪಿಸಿದರು. ಭಯೋತ್ಪಾದನೆಯ ದಮನಕ್ಕಾಗಿ ನೀವು ನಮ್ಮೊಂದಿಗೆ ಕೈಜೋಡಿಸಬೇಕು, ನಮ್ಮ ವಿಶ್ವಾಸವನ್ನು ತೆಗೆದುಕೊಳ್ಳಬೇಕಿತ್ತು. ಆದರೆ ನೀವು ಮಾಡಿದ್ದೇನು? ಚುನಾವಣೆಯನ್ನು ಗೆಲ್ಲುವ ಸಲುವಾಹಿ ನೀವು ಆ ನಿಷೇಧಿತ ಉಗ್ರ ಸಂಘಟನೆಗಳ ಬೆಂಬಲ ಪಡೆದಿರಿ. ಈಗ ಅವರು ಮುಖ್ಯ ವಾಹಿನಿಗೆ ಬರಲು ಪ್ರೇರೇಪಿಸುತ್ತಿದ್ದೀರಿ ಎಂದು ಭುಟ್ಟೋ ಗುರುತರ ಆರೋಪ ಮಾಡಿದರು.

ಫೆಬ್ರವರಿ 14 ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆ ನಡೆಸಿದ ದಾಳಿಯಲ್ಲಿ ನಲವತ್ತಲ್ಕೂ ಹೆಚ್ಚು ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅದಕ್ಕೆ ಪ್ರತೀಕಾರ ಎಂಬಂತೆ ಭಾರತ ಫೆಬ್ರವರಿ 26 ರಂದು ಪಾಕಿಸ್ತಾನದ ಬಾಲಕೋಟ್ ನಲ್ಲಿದ್ದ ಉಗ್ರನೆಲೆಯ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ 150-300 ಉಗ್ರರು ಅಲ್ಲಿದ್ದರು ಎನ್ನಲಾಗುತ್ತಿದೆಯಾದರೂ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. (ಎನ್.ಬಿ)

Leave a Reply

comments

Related Articles

error: