ಮೈಸೂರು

ಕಂಬಳ ಆಟ ಇರಲಿ ,ಆಚರಣೆ ಬೇಡ : ಸಾಹಿತಿ ದೇವನೂರು ಮಹದೇವ

ನಾಡಿನ ಹಿರಿಯ ಪ್ರಗತಿಪರ ಚಿಂತಕ ಹಾಗೂ ಬಂಡಾಯ ಸಾಹಿತಿ ದೇವನೂರ ಮಹಾದೇವ ಕಂಬಳ ಆಟ ಇರಲಿ, ಆಚರಣೆ ಬೇಡ ಎಂದು ಆಗ್ರಹಿಸಿದ್ದಾರೆ.
ಕಂಬಳವು ಜಲ್ಲಿಕಟ್ಟಿನಷ್ಟು ಪ್ರಾಣಾಂತಿಕವಾಗಿಲ್ಲ.ಆದರೆ ಕಂಬಳ ಆಟ ಮಾತ್ರವಲ್ಲ, ಈ ಆಟದೊಳಗೆ ಅನಿಷ್ಠ ಆಚರಣೆಯೊಂದು ಅಡಗಿ ಕೂತಿದೆ.
ಅದೆಂದರೆ ಕೊರಗ ಸಮುದಾಯವನ್ನು ಬಳಸಿಕೊಂಡು ಜರುಗುವ ‘ಪನಿಕುಲ್ಲನೆ’ ಆಚರಣೆ.
ಅಂದರೆ ಕಂಬಳ ನಡೆಯುವ ಹಿಂದಿನ ದಿನ ಇಡೀ ರಾತ್ರಿ ಕೊರಗ ಸಮುದಾಯವರು ಡೋಲು ಬಾರಿಸುತ್ತ ಕುಣಿಯುವ ಆಚರಣೆ ಬೇಡ.
ಈ ಆಚರಣೆಯು ಲೈಂಗಿಕ ಚೇಷ್ಟೆಗಳನ್ನು ಒಳಗೊಂಡಿದ್ದು, ಬೆಳಗಾಗುವಾಗ ಕೊರಗ ಸಮುದಾಯದವರು ತಾವೇ ಕೋಣಗಳು ಎಂದು ಆವಾಹಿಸಿಕೊಂಡು ಕಂಬಳದ ಕೆಸರು ಗದ್ದೆಯಲ್ಲಿ ಓಡುತ್ತಾರೆ.
ಈ ರೀತಿಯ ಓಟ ಕೋಣಗಳ ಓಟಕ್ಕೆ ಪೂರ್ವಭಾವಿಯಾಗಿ ನಡೆಯುತ್ತದೆ. ಹಾಗಾಗಿ ಮನುಷ್ಯರ ಕೆಸರು ಗದ್ದೆ ಓಟ ಬೇಡ ಎಂದು ಪ್ರತಿಪಾದಿಸಿದ್ದಾರೆ. ಕೊರಗರು ಕೋಣಗಳಾಗಿ ಗದ್ದೆಯಲ್ಲಿ ಓಡುವ ಮೂಲಕ ಗದ್ದೆಯನ್ನು ಕೆಟ್ಟ ಕಣ್ಣಿನಿಂದ ಮುಕ್ತಗೊಳಿಸುತ್ತಾರೆ.ಗದ್ದೆಯನ್ನು ಹೀಗೆ ಮುಕ್ತಗೊಳಿಸಿದ ನಂತರವೇ ಭೂಮಾಲೀಕರ ಕೋಣಗಳು ಕಂಬಳದ ಗದ್ದೆಗೆ ಇಳಿಯುತ್ತವೆ. ಅಂದರೆ  ಇದು ಅನಿಷ್ಠ ಕೆಡುಕನ್ನು ಕೊರಗರ ಮೇಲೆ  ಆವಾಹಿಸುವ ಅಜಲು ಪದ್ದತಿಯ ಎಂಜಲು ಆಚರಣೆ.
ಹಾಗೆ ಕಂಬಳದ ಹಿಂದಿನ ದಿನ ರಾತ್ರಿ ಜರುಗುವ ಲೈಂಗಿಕ ಚೇಷ್ಟೆ ಕ್ರಿಯೆಗಳನ್ನು ಫಲವಂತಿಕೆಗಾಗಿ ಅನ್ನುವುದಾದರೆ ಕಂಬಳದ ಸಿರಿವಂತಿಕೆಯನ್ನು ಪ್ರದರ್ಶಿಸುವ ಫಲಾನುಭವಿಗಳಾದ ಭೂಮಾಲೀಕರ ಕುಟುಂಬದ ಸ್ತ್ರೀ ಪುರುಷರು ಇದನ್ನು ಆಚರಿಸಬಾರದೇಕೆ? ಎಂದು ಕೊರಗ ಸಮುದಾಯಕ್ಕೆ ಸೇರದೆ ಇರುವವರು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಅಜಲು ಪದ್ಧತಿಯ ಎಂಜಲಾದ ಪನಿಕುಲ್ಲನೆ ಆಚರಣೆಯನ್ನು ಕೈಬಿಟ್ಟು ಕಂಬಳವನ್ನು ಒಂದು ಆಟವಾಗಿ ಉಳಿಸಿಕೊಳ್ಳಬಹುದೇನೊ. ಇದಕ್ಕೆ ಮೊದಲು ಸರ್ಕಾರ ಅನಿಷ್ಠ ಅಜಲು ಪದ್ಧತಿಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದು ತನ್ನ ಮಾನಮರ್ಯಾದೆ ಕಾಪಾಡಿಕೊಳ್ಳಬೇಕಾಗಿದೆ ಎಂದು  ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave a Reply

comments

Related Articles

error: