ದೇಶಪ್ರಮುಖ ಸುದ್ದಿ

ಹೋಳಿ ಸಂಭ್ರಮದಲ್ಲಿದ್ದ ಬಾಲಕಿಗೆ ಅತ್ಯಾಚಾರ ಎಸಗಿ ಕೊಲೆ! ತೆಲಂಗಾಣದಲ್ಲಿ ಮನಕಲಕುವ ಕೃತ್ಯ

ತೆಲಂಗಾಣ (ಮಾ.22): ಯುವಕನೊಬ್ಬ ಕುಡಿದ ಮತ್ತಿನಲ್ಲಿ 6 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ. ಇಂತಹ ಭಯಾನಕ ಕೃತ್ಯ ನಡೆದಿರುವುದು ತೆಲಂಗಾಣ ರಾಜ್ಯದ ಟರ್ಕಪಲ್ಲಿ ಹಳ್ಳಿಯಲ್ಲಿ!

ನಿನ್ನೆ ದೇಶದೆಲ್ಲೆಡೆ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಕ್ಕಳು, ಯುವಕರು, ವಯಸ್ಕರು ಸೇರಿದಂತೆ ಎಲ್ಲರೂ ಸಹ ರಂಗಿನಾಟದಲ್ಲಿ ಮಿಂದೆದ್ದಿದ್ದರು. ಆದರೆ ಆ 6 ವರ್ಷದ ಬಾಲಕಿಗೆ ಹೋಳಿ ದಿನವೇ ಕರಾಳ ದಿನವಾಗಿತ್ತು. ಏಕೆಂದರೆ ಹೋಳಿಯ ಸಂಭ್ರಮದಲ್ಲಿ ಕುಣಿದಾಡುತ್ತಿದ್ದ ದಿನಗೂಲಿ ಕಾರ್ಮಿಕನ ಮಗಳು ಮೇಲೆ ಅತ್ಯಾಚಾರಕ್ಕೊಳಗಾಗಿ ಹೆಣವಾಗಿದ್ದಳು. ಆ ಮಗುವಿನ ದೇಹ ಪೊದೆಯೊಳಗೆ ಪತ್ತೆಯಾಗಿತ್ತು. ಆ ಮೃತ ದೇಹ ನೋಡಿದ ಪೊಲೀಸರಿಗೆ ಇದು ಅತ್ಯಾಚಾರ ಮಾಡಿ ಕೊಲೆಗೈದಿರುವುದು ಎಂದು ತಿಳಿಯಲು ಹೆಚ್ಚಿನ ಸಮಯ ಬೇಕಿರಲಿಲ್ಲ.

ನಿನ್ನೆ ಆ ಕಂದಮ್ಮ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು. ದಿನಗೂಲಿ ಮಾಡಿ ಹೊಟ್ಟೆ ಹೊರೆಯುವ ಪೋಷಕರು ತಮ್ಮ ಕಂದನನ್ನು ಎಲ್ಲಾ ಕಡೆ ಹುಡುಕಿದ್ದರು. ಆದರೆ ಎಲ್ಲೂ ಸಹ ಮಗು ಪತ್ತೆಯಾಗಿರಲಿಲ್ಲ. ನಂತರ ತಮ್ಮ ಮಗು ಕಾಣೆಯಾಗಿದೆ ಎಂದು ಪೋಷಕರು ಅಲ್ವಾಲ್​ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಣೆಯಾದ ಮಗುವಿಗಾಗಿ ಹುಡುಕಾಟ ಪ್ರಾರಂಭಿಸಿದ್ದರು. ದುರಾದೃಷ್ಟವೆಂಬಂತೆ ಆ ಮಗು ಪೊದೆಯೊಂದರಲ್ಲಿ ಹೆಣವಾಗಿ ಪತ್ತೆಯಾಗಿತ್ತು. ತಕ್ಷಣ ಪೊಲೀಸರು ಮಗುವಿನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದರು. ಇಷ್ಟರಲ್ಲಾಗಲೇ ಆ ಮಗು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿದೆ ಎಂಬುದು ಪೊಲೀಸರಿಗೆ ಖಾತ್ರಿಯಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಅದು ದೃಢಪಟ್ಟಿತ್ತು.

ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿ ಬಿಹಾರದ ಪಶ್ಚಿಮ ಚಂಪರನ್​ ಜಿಲ್ಲೆಯ ನಿವಾಸಿ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: