ದೇಶಪ್ರಮುಖ ಸುದ್ದಿ

ಬಿಜೆಪಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಮುಖರಾರು?

ಆಡ್ವಾಣಿ ಜಾಗಕ್ಕೆ ಅಮಿತ್ ಶಾ; ವಾರಣಾಸಿಯಿಂದ ಮಾತ್ರ ಮೋದಿ ಸ್ಪರ್ಧೆ - ಬಿಜೆಪಿ ಮೊದಲ ಪಟ್ಟಿ ಹೈಲೈಟ್ಸ್

ನವದೆಹಲಿ (ಮಾ. 21): ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ ಗುರುವಾರ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, 184 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಕರ್ನಾಟಕದ 21 ಕ್ಷೇತ್ರಗಳೂ ಒಳಗೊಂಡಿವೆ.

ಬಹುತೇಕ ಕೇಂದ್ರ ಸಚಿವರು ಮತ್ತೊಮ್ಮೆ ಟಿಕೆಟ್ ಗಿಟ್ಟಿಸಿದ್ದಾರೆ. ನರೇಂದ್ರ ಮೋದಿ, ಸ್ಮೃತಿ ಇರಾನಿ, ವಿ.ಕೆ. ಸಿಂಗ್, ರಾಜನಾಥ್ ಸಿಂಗ್, ರಾಜ್ಯವರ್ಧನ್ ಮೊದಲಾದವರು ತಮ್ಮ ಕ್ಷೇತ್ರಗಳಲ್ಲೇ ಮುಂದುವರಿಯಲಿದ್ದಾರೆ. ಆದರೆ, ಬಿಜೆಪಿಯ ಈ ಪಟ್ಟಿಯಲ್ಲಿ ಅತೀ ಹೆಚ್ಚು ಗಮನ ಸೆಳೆದದ್ದು ಗಾಂಧಿನಗರ ಕ್ಷೇತ್ರ. ಸತತವಾಗಿ ಐದು ಬಾರಿ ಜಯಿಸಿದ್ದ ಲಾಲಕೃಷ್ಣ ಆಡ್ವಾಣಿ ಅವರ ಹೆಸರು ಈ ಬಾರಿ ಗಾಂಧಿನಗರ ಕ್ಷೇತ್ರಕ್ಕಿಲ್ಲವಾಗಿದೆ.

ಅಮಿತ್ ಶಾ ಅವರು ಅಡ್ವಾಣಿ ಅವರ ಕ್ಷೇತ್ರ ಗಾಂಧಿನಗರದಿಂದ ಕಣಕ್ಕಿಳಿಯಲಿದ್ದಾರೆ. 91 ವರ್ಷ ವಯಸ್ಸಿನ ಆಡ್ವಾಣಿಯವರಿಗೆ ವಯಸ್ಸಿನ ಕಾರಣಕ್ಕೆ ಟಿಕೆಟ್ ನೀಡಿಲ್ಲ ಎನ್ನಲಾಗುತ್ತಿದೆ. ಆದರೆ, ಆಡ್ವಾಣಿಗೆ ಟಿಕೆಟ್ ನೀಡಿಲ್ಲದಿರುವುದು ಎದುರಾಳಿ ಪಕ್ಷಗಳಿಗೆ ಟೀಕಾಸ್ತ್ರವಾಗಿದೆ. ಹಿರಿಯ ಮುಖಂಡರನ್ನು ಬಿಜೆಪಿ ನಡೆಸಿಕೊಳ್ಳುವ ಪರಿ ಇದು ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಳೆದ ಬಾರಿ ವಡೋದರಾ ಮತ್ತು ವಾರಾಣಸಿ ಎರಡರಲ್ಲೂ ಸ್ಪರ್ಧಿಸಿ ಗೆದ್ದಿದ್ದ ಮೋದಿ ಅವರು ಈ ಸಲ ಹಾಲಿ ಕ್ಷೇತ್ರ ವಾರಾಣಸಿಯಲ್ಲೇ ನಿಲ್ಲುತ್ತಿದ್ದಾರೆ. ಎಸ್​ಪಿ-ಬಿಎಸ್​ಪಿ ಪ್ರಬಲ ಮೈತ್ರಿ ಇದ್ದರೂ ಮೋದಿ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದು ಗಮನ ಸೆಳೆದಿದೆ. ಇದರ ಜೊತೆಗೆ ಬೆಂಗಳೂರು ದಕ್ಷಿಣದಲ್ಲಿ ಪ್ರಧಾನಿ ಮೋದಿಯವರು ಸ್ಪರ್ಧಿಸುವ ಮಾತುಗಳು ಕೇಳಿಬಂದಿವೆ.

ಉತ್ತರ ಪ್ರದೇಶದಲ್ಲಿ ಕಳೆದ ಬಾರಿಯ ಚುನಾವಣೆಯಲ್ಲಿ 80 ಕ್ಷೇತ್ರಗಳ ಪೈಕಿ 71ರಲ್ಲಿ ಜಯಿಸಿದ್ದ ಬಿಜೆಪಿಗೆ ಈ ಬಾರಿ ಅಷ್ಟೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಬಹುದೊಡ್ಡ ಸವಾಲು ಇದೆ. ಈ ಹಿನ್ನೆಲೆಯಲ್ಲಿ ಉ.ಪ್ರ.ದಲ್ಲಿ ಹಾಲಿ ಸಂಸದರ ಬದಲು ಹೊಸ ಮುಖಗಳನ್ನ ಮುಂದಿಡಬಹುದೆಂಬ ನಿರೀಕ್ಷೆ ಇತ್ತು. ಆದರೆ, ಬಿಜೆಪಿಯ 28 ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ ಅಂತಹ ಸುಳಿವು ಸಿಕ್ಕಿಲ್ಲ. ಕೇವಲ 6 ಹಾಲಿ ಸಂಸದರನ್ನಷ್ಟೇ ಬದಲಾಯಿಸಲಾಗಿದೆ.

ಕೆಲ ಪ್ರಮುಖ ಬಿಜೆಪಿ ಸ್ಪರ್ಧಾಳುಗಳು:

ವಾರಾಣಸಿ: ನರೇಂದ್ರ ಮೋದಿ; ಗಾಂಧಿನಗರ: ಅಮಿತ್ ಶಾ; ಅಮೇಥಿ: ಸ್ಮೃತಿ ಇರಾನಿ
ಮಥುರಾ: ಹೇಮಾಮಾಲಿನಿ; ಘಾಜಿಯಾಬಾದ್: ವಿ.ಕೆ. ಸಿಂಗ್; ಲಕ್ನೋ: ರಾಜನಾಥ್ ಸಿಂಗ್
ನಾಗಪುರ್: ನಿತಿನ್ ಗಡ್ಕರಿ; ಉನ್ನಾವೋ: ಸಾಕ್ಷಿ ಮಹಾರಾಜ್; ಮುಂಬೈ ಉತ್ತರ: ಗೋಪಾಲ್ ಶೆಟ್ಟಿ
ಮುಂಬೈ ಉತ್ತರ-ಕೇಂದ್ರ: ಪೂನಂ ಮಹಾಜನ್; ಭೀಡ್: ಪ್ರೀತಂ ಗೋಪಿನಾಥ್ ಮುಂಡೆ
ಜೈಪುರ ಗ್ರಾಮೀಣ: ರಾಜ್ಯವರ್ಧನ್ ಸಿಂಗ್ ರಾಥೋಡ್; ಕನ್ಯಾಕುಮಾರಿ: ಪೊನ್ ರಾಧಾಕೃಷ್ಣ
ಅಸಾನೋಲ್(ಬಂಗಾಳ): ಬಾಬುಲ್ ಸುಪ್ರಿಯೋ; ವಿಶಾಖಪಟ್ಟಣಂ: ಡಿ. ಪುರಂದೇಶ್ವರಿ; ಸುಂದರ್​ಗಡ್(ಒಡಿಶಾ): ಜುವಲ್ ಓರಂ

(ಎನ್.ಬಿ)

Leave a Reply

comments

Related Articles

error: