ಕರ್ನಾಟಕಪ್ರಮುಖ ಸುದ್ದಿ

ಮೇ 27ರ ವರೆಗೆ ಸಾಲ ಮನ್ನಾಗೆ ಚುನಾವಣಾ ಆಯೋಗ ತಡೆ!

ಬೆಂಗಳೂರು (ಮಾ.22): ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಕಾರದ ಸಾಲ ಮನ್ನಾ ಯೋಜನೆಗೆ ಚುನಾವಣಾ ಆಯೋಗ ತಡೆ ನೀಡಿದೆ. ಇದರಿಂದ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಸಾಲ ಮನ್ನಾ ಭಾಗ್ಯ ಇರುವುದಿಲ್ಲ. ಇದು ಕೇಂದ್ರ ಸರಕಾರದ ರೈತ ಯೋಜನೆಗೂ ಅನ್ವಯವಾಗುತ್ತದೆ.

ಸಹಕಾರ ಬ್ಯಾಂಕುಗಳಲ್ಲಿರುವ ರೈತರ 9,448 ಕೋಟಿ ರೂಪಾಯಿಗಳಷ್ಟು ಸಾಲ ಮನ್ನಾ ಮಾಡುವ ಯೋಜನೆ ಇದೆ. ಹಾಗೆಯೇ ವಾಣಿಜ್ಯ ಬ್ಯಾಂಕುಗಳಲ್ಲಿರುವ ರೈತರ 12 ಸಾವಿರ ಕೋಟಿ ರೂ ಸಾಲವನ್ನೂ ಸರಕಾರ ಮನ್ನಾ ಮಾಡಲಿದೆ. ಆಯೋಗದ ನಿರ್ಬಂಧದಿಂದ ಸಾಲಮನ್ನಾ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ತಡೆ ನೀಡಲಾಗಿದೆ.

ಕೇಂದ್ರ ಸರಕಾರದ ರೈತ ಯೋಜನೆಗೂ ಚುನಾವಣಾ ಆಯೋಗದ ತಡೆ ಬಿದ್ದಿದೆ. ಕೇಂದ್ರದ ಈ ರೈತ ಯೋಜನೆ ಇನ್ನೂ ಸರಿಯಾಗಿ ಟೇಕಾಫ್ ಆಗಿಯೇ ಇಲ್ಲ ಎಂಬ ಮಾತಿದೆ. ರಾಜ್ಯದಲ್ಲಿ ಬೆರಳೆಣಿಕೆಯಷ್ಟು ರೈತರಿಗಷ್ಟೇ ಮೊದಲ ಕಂತಿನ ಹಣ ಪಾವತಿಯಾಗಿದೆ. ಮೊದಲ ಕಂತಿನ ಹಣ ಪಡೆದವರಿಗೆ ಎರಡನೇ ಕಂತಿನ ಹಣ ನೀಡಲು ತಡೆ ಇಲ್ಲ.

ಆದರೆ, ಹೊಸದಾಗಿ ರೈತರ ಅಕೌಂಟ್​ಗೆ ಹಣ ಹಾಕಲು ಸಾಧ್ಯವಿಲ್ಲ. ವರ್ಷಕ್ಕೆ 4 ಕಂತುಗಳಲ್ಲಿ ಒಟ್ಟು 6 ಸಾವಿರ ರೂಪಾಯಿಯನ್ನು ರೈತರ ಅಕೌಂಟ್​ಗೆ ಹಾಕಲಾಗುವುದು ಎಂದು ಕೇಂದ್ರ ಸರಕಾರವು ಈ ಬಾರಿಯ ಬಜೆಟ್​ನಲ್ಲಿ ಘೋಷಿಸಿತ್ತು. ಈಗ ಚುನಾವಣೆ ಮುಗಿಯುವವರೆಗೂ ರೈತರ ಖಾತೆಗೆ ಕೇಂದ್ರದ ಹಣ ಬೀಳುವ ಸಾಧ್ಯತೆ ಇಲ್ಲ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದ ಸಾಲ ಮನ್ನಾ ಯೋಜನೆಯಲ್ಲಿ ರೈತರಿಗೆ ಒಂದೇ ಕಂತಿನಲ್ಲಿ ಸಾಲದ ಹಣ ಪಾವತಿಯಾಗುತ್ತದೆ. ಆದರೆ, ಈವರೆಗೆ ಸಹಕಾರ ಬ್ಯಾಂಕುಗಳಲ್ಲಿರುವ 4.13 ಲಕ್ಷ ರೈತರಿಗೆ 1,908 ಕೋಟಿ ರೂ ಸಾಲ ಮಾತ್ರ ಮನ್ನಾ ಆಗಿದೆ. ವಾಣಿಜ್ಯ ಬ್ಯಾಂಕುಗಳ 7.5 ಲಕ್ಷ ಖಾತೆಗಳಿಗೆ ಸರಕಾರ 2,900 ಕೋಟಿ ರೂ ಸಾಲ ಮನ್ನಾ ಹಣ ಪಾವತಿ ಮಾಡಿದ್ದಾಗಿದೆ.

ಆದರೆ, ಸಹಕಾರ ಬ್ಯಾಂಕುಗಳ ಸಾಲದ ವಿಚಾರದಲ್ಲಿ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಮೈತ್ರಿ ಸರಕಾರ 1,500 ಕೋಟಿ ರೂ ಕೊಡುವುದರಲ್ಲಿತ್ತು. ಈ ಹಣ ಬಿಡುಗಡೆಗೆ ಈಗ ಚುನಾವಣೆ ಆಯೋಗ ತಡೆ ಹಿಡಿದಿದೆ. ಮೇ 27ರಂದು ನೀತಿ ಸಂಹಿತೆ ಮುಗಿಯುವವರೆಗೂ ಈ ಹಣವನ್ನು ಸರಕಾರ ರಿಲೀಸ್ ಮಾಡುವಂತಿಲ್ಲ. (ಎನ್.ಬಿ)

Leave a Reply

comments

Related Articles

error: