ಮೈಸೂರು

ಸಿನಿ ಚಿತ್ರೋತ್ಸವ ಸಪ್ತಾಹಕ್ಕೆ ಚಾಲನೆ : ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಲು ಕರೆ

ಮೈಸೂರಿನ ಒಲಂಪಿಯಾ ರಸ್ತೆ ಮಕ್ಕಾಜಿ ಚೌಕದಲ್ಲಿರುವ ಒಲಂಪಿಯಾ ಚಿತ್ರಮಂದಿರದಲ್ಲಿ ಶುಕ್ರವಾರ ಗಿರಿರಾಜ್ ನಿರ್ದೇಶನದ ಪುನೀತರಾಜ್‍ಕುಮಾರ್ ಹಾಗೂ ಮೋಹನಲಾಲ್ ಅಭಿನಯದ ‘ಮೈತ್ರಿ’  ಚಿತ್ರಕ್ಕೆ ಸಾರ್ವ ಜನಿಕರಿಗೆ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದ್ದು, ಸಿನಿ ಚಿತ್ರೋತ್ಸವ ಸಪ್ತಾಯಕ್ಕೆ ಚಾಲನೆ ನೀಡಲಾಗಿದೆ.

ಒಲಿಂಪಿಯಾ ಚಿತ್ರಮಂದಿರದಲ್ಲಿ ಸಿನಿ ಚಿತ್ರೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಮೈಸೂರು ವಿಭಾಗದ ಉಪಾಧಿಕಾರಿ ಸಿ.ಎಲ್. ಆನಂದ್ ಬಲೂನ್ ಹಾರಿ ಬಿಡುವ ಮೂಲಕ ಚಾಲನೆ ನೀಡಿದರು.  ಬಳಿಕ ಮಾತನಾಡಿದ ಅವರು ಮೈತ್ರಿ ಪ್ರತಿಭೆಗೆ ಬಡತನವಿಲ್ಲ ಎಂದು ಸಾರುವ ಚಿತ್ರವಾಗಿದೆ ಎಂದರಲ್ಲದೇ, ಈ ಸಿನಿ ಚಿತ್ರೋತ್ಸವವನ್ನು ಸಾರ್ವ ಜನಿಕರು ಸದುಪಯೋಗಪಡಿಸಿಕೊಳ್ಳಿ ಎಂದು ತಿಳಿಸಿದರು.
ವಾರ್ತಾ ಇಲಾಖೆಯ ಸಹಾಯಕ ಉಪನಿರ್ದೇಶಕ ಆರ್.ರಾಜು ಮಾತನಾಡಿ ಪ್ರೋತ್ಸಾಹ ಸಿಕ್ಕರೆ ಸಾಧನೆ ಸಾಧ್ಯ ಎನ್ನುವ ಕಥಾ ಹಂದರವನ್ನು ಹೊಂದಿದೆ ಎಂದರು. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಚಲನಚಿತ್ರಗಳು ಜನಸಾಮಾನ್ಯರಿಗೆ ತಲುಪಲಿ ಎಂಬ ಸದುದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿನಿಮೋತ್ಸವ ಸಪ್ತಾಹ ಕಾರ್ಯಕ್ರಮವನ್ನು ಜನವರಿ 27 ರಿಂದ ಫೆಬ್ರವರಿ 2 ರವರೆಗೆ ಬೆಳಿಗ್ಗೆ 10-30 ರಿಂದ ಒಲಂಪಿಯಾ ಚಿತ್ರಮಂದಿರದಲ್ಲಿ ಬೆಳಗಿನ ಪ್ರದರ್ಶನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
2015ನೇ ಕ್ಯಾಲೆಂಡರ್ ವರ್ಷದ ಕನ್ನಡ ಹಾಗೂ ಪ್ರಾದೇಶಿಕ ಭಾಷಾ ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿಗೆ ಭಾಜನವಾಗಿರುವ ಕನ್ನಡದ ಐದು ಸಿನಿಮಾಗಳನ್ನು ಪ್ರದರ್ಶಿಸಲಾಗುವುದು. ಜ. 27 ರಂದು ಮೈತ್ರಿ, ಜ. 28 ರಂದು ಶಿವಯೋಗಿ ಶ್ರೀಪುಟ್ಟಯ್ಯಜ್ಜ, ಜ. 29 ರಂದು ತಿಥಿ, ಜ. 30 ರಂದು ಕೃಷ್ಣಲೀಲಾ, ಜ. 31 ರಂದು ರಂಗಿತರಂಗ, ಫೆ. 1 ರಂದು ತಿಥಿ ಹಾಗೂ ಫೆ. 2 ರಂದು ಮೈತ್ರಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಈ ಸದಾವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ಶಿವಯೋಗಿ ಶ್ರೀಪುಟ್ಟಯ್ಯಜ್ಜ: ದಿವಂಗತ ಶ್ಯಾಂ ನವಲೆ ನಿರ್ದೇಶನದ ವಿಜಯರಾಘವೇಂದ್ರ ನಟಿಸಿರುವ ಈ ಚಿತ್ರವು ಸಂಗೀತ ಕಲಾ ಪರಾಂಗತ ಎನ್ನಿಸಿದ ಗದಗಿನ ಶ್ರೀ ವೀರೇಶ್ವರ ಪುಣ್ಯ ಆಶ್ರಮದ ಡಾ. ಪಂಡಿತ ಪುಟರಾಜ ಗವಾಯಿಗಳ ಜೀವನಾಧಾರಿತ ಚಿತ್ರವಾಗಿದೆ.

ತಿಥಿ: ಹೊಸ ನಿರ್ದೇಶಕ ಹೊಸ ಕಲಾವಿದರ ನೂತನ ಕಥೆಯೊಂದಿಗೆ ಹೊಸ ಛಾಪು ಮೂಡಿಸಿದ ತಿಥಿ ಸಿನಿಮಾ ಹಳ್ಳಿಯೊಂದರ ನೆಲೆಗಟ್ಟಿನ ನೈಜ ಚಿತ್ರಣವಾಗಿದ್ದು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಕೃಷ್ಣಲೀಲಾ : ಶಶಾಂಕ್ ನಿರ್ದೇಶನದಲ್ಲಿ ಅಜಯ್ ರಾವ್ ನಿರ್ಮಿಸಿ ನಟಿಸಿರುವ ಕೃಷ್ಣಲೀಲಾ ಇಂದಿನ ಅಗತ್ಯಗಳಲ್ಲಿ ಒಂದಾಗಿರುವ ಮೊಬೈಲ್ ಅವಾಂತರದ ಮೂಲಕ ಜೀವನ ಬದಲಾಗುವ ರೀತಿಯನ್ನು ಹೇಳಿರುವ ನೈಜ ಘಟನೆ ಆಧಾರಿತ ಚಿತ್ರವಾಗಿದೆ.

   ರಂಗಿತರಂಗ: ಕನ್ನಡ ಚಿತ್ರರಂಗದಲ್ಲಿ ಇಂದಿನ ಅದ್ದೂರಿ ಚಿತ್ರಗಳ ಪೈಪೋಟಿ ನಡುವೆ ವರ್ಷ ಪೂರೈಸಿದ ಚಿತ್ರ ರೋಚಕಥೆ,ಕುತೂಹಲ ಕಂಡುಕೊಂಡು ಪತ್ತೇದಾರಿ ಕಥೆಯ ಜನಮನ್ನಣೆ ಗಳಿಸಿರುವ ಚಿತ್ರ ಇದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಪರ ಪ್ರಾದೇಶಿಕ ಆಯುಕ್ತ ಸೋಮಶೇಖರ್, ನಗರ ಕೇಂದ್ರ ಗ್ರಂಥಾಲಯದ ಉಪ ನಿರ್ದೇಶಕ ಮಂಜುನಾಥ್ , ವಾರ್ತಾ ಇಲಾಖೆಯ ನಿರ್ಮಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಚಿತ್ರೋತ್ಸವಕ್ಕೆ ಚಾಲನೆ ನೀಡಿದ ಬಳಿಕ  200 ಕ್ಕೂ ಅಧಿಕ ಚಿತ್ರ ಪ್ರೇಮಿಗಳು ಚಿತ್ರಮಂದಿರಕ್ಕೆ ಬಂದು ಚಿತ್ರ ವೀಕ್ಷಿಸಿದರು.

Leave a Reply

comments

Related Articles

error: