ಕರ್ನಾಟಕಪ್ರಮುಖ ಸುದ್ದಿ

ಮೋದಿ ಅಲೆ ಸುನಾಮಿಯಾಗಿ ಸಾಂವಿಧಾನಿಕ ವ್ಯವಸ್ಥೆಗಳನ್ನೇ ನಾಶ ಮಾಡುತ್ತಿದೆ: ಕುಮಾರಸ್ವಾಮಿ

ಹಾಸನ (ಮಾ.23): ಕಳೆದ 2014ರ ಲೋಕಸಭಾ ಚುನಾವಣೆ ವೇಳೆ ಎದ್ದ  ಮೋದಿ ಅಲೆಯು ಸುನಾಮಿಯಾಗಿ ದೇಶದ ಸಾಂವಿಧಾನಿ ವ್ಯವಸ್ಥೆಗಳನ್ನೇ ಬುಡಮೇಲು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಾಖ್ಯಾನಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದಿಂದ ಸಚಿವ ಎಚ್.ಡಿ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಶುಕ್ರವಾರ ನಾಮಪತ್ರ ಸಲ್ಲಿಸಿದ ನಂತರ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸೂಚಕರಾಗಿ ಸಹಿ ಹಾಕಿದರು. ಬಳಿಕ ಹಾಸನ ಜಿಲ್ಲಾಧಿಕಾರಿ ಕಚೇರಿಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಪ್ರಜ್ವಲ್ ರೇವಣ್ಣ ಅವರ ಉಮೇದುವಾರಿಕೆ, ಮೋದಿ ಅಲೆ, ಕೇಂದ್ರ ಸರ್ಕಾರದ ತಾರತಮ್ಯ, ರಾಜ್ಯ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡಿದರು.

ರಾಜ್ಯದ ಅಭಿವೃದ್ಧಿಗಾಗಿ ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ ಗೆಲುವಿಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಶ್ರಮಿಸಲಿದ್ದಾರೆ. ದೇವೇಗೌಡರ ಕ್ಷೇತ್ರದಲ್ಲಿ ಪ್ರಜ್ವಲ್ ಸ್ಪರ್ಧಿಸಿದ್ದು, ಅವರಿಗೆ ನಿಮಗೆ ಆಶೀರ್ವಾದ ಬೇಕಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮೋದಿ ಅಲೆ ಈಗ ಇಲ್ಲ, ಅದು 2014ರ ಕಾಲ, ಅಂದು ಎದ್ದಿದ್ದ ಅಲೆ ಸುನಾಮಿಯಾಗಿ ದೇಶದ ವ್ಯವಸ್ಥೆಯನ್ನು ಬುಡಮೇಲು ಮಾಡಿ ಹೋಗಿದೆ. ಮೊದಿ ಅವರ ಅಭಿವೃದ್ಧಿ ಕಾರ್ಯದಲ್ಲಿ ಮತ ಕೇಳುತ್ತಿದ್ದಾರೆ. ಇವರದ್ದು ಏನು ಇಲ್ಲ ಎಂದು ಟೀಕಿಸಿದರು. ಮೈತ್ರಿಯಲ್ಲಿ ಸಣ್ಣ ಪುಟ್ಟ ದೋಷಗಳಿರುತ್ತೆ. ಅಂಥಾ ಗಾಬರಿಯಾಗಬೇಕಿಲ್ಲ. ಮೈತ್ರಿ ಸರ್ಕಾರ ಸ್ಥಿರವಾಗಿದ್ದು, ಮೈತ್ರಿಕೂಟದ ಒಮ್ಮತದ ಅಭ್ಯರ್ಥಿಯ ಪರವಾಗಿ ಎರಡು ಪಕ್ಷದ ಕಾರ್ಯಕರ್ತರು ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ನರೇಗಾ ಯೋಜನೆ 2 ಸಾವಿರ ಕೋಟಿ ಕೇಂದ್ರ ಸರ್ಕಾರದಿಂದ ಸಿಗುವ ನಿರೀಕ್ಷೆ ಹುಸಿಯಾಯಿತು. ನಾನು 1 ಸಾವಿರ ಕೋಟಿ ನೀಡಿದ್ದೇನೆ. ಕೇಂದ್ರ ಸರ್ಕಾರದಿಂದ ಬರಗಾಲದ ಕಾಲದಲ್ಲೂ ನೆರವು ಸಿಗಲಿಲ್ಲ. 900 ಕೋಟಿ ಕೇಳಿದರೆ 400 ಕೋಟಿ ಮಾತ್ರ ನೀಡಿದ್ದಾರೆ. ರಾಜ್ಯದ ಅಭಿವೃದ್ಧಿ, ಜನತೆಯ ಉಳಿವಿಗಾಗಿ ಈ ಚುನಾವಣೆಯಲ್ಲಿ ನಾವು ಗೆಲ್ಲಬೇಕಿದೆ ಎಂದರು.

ದೇವೇಗೌಡರು ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಇಂದು ಸಂಜೆ ಅಥವಾ ನಾಳೆ ವೇಳೆಗೆ ನಿರ್ಧಾರ ಪ್ರಕಟಿಸುತ್ತಾರೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ನಾಯಕರೇ ಒತ್ತಾಯಿಸುತ್ತಿದ್ದಾರೆ. ತುಮಕೂರು ಅಥವಾ ಬೆಂಗಳೂರು ಉತ್ತರ ಎಂಬುದು ನಾಳೆ ತಿಳಿಯಲಿದೆ. (ಎನ್.ಬಿ)

Leave a Reply

comments

Related Articles

error: