
ಕರ್ನಾಟಕ
ಬೆಂಗಳೂರಿನಲ್ಲಿರುವ ವಿಜಯ್ ಮಲ್ಯ ಆಸ್ತಿ ಜಪ್ತಿಗೆ ಆದೇಶಿಸಿದ ಕೋರ್ಟ್
ನವದೆಹಲಿ,ಮಾ.23- ದೇಶದ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರ ಬೆಂಗಳೂರಿನ ಆಸ್ತಿಯನ್ನು ಜಪ್ತಿ ಮಾಡಲು ದೆಹಲಿ ಹೈಕೋರ್ಟ್ ಆದೇಶಿಸಿದೆ.
ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಆದೇಶ ನೀಡಿದೆ. ಮುಂದಿನ ವಿಚಾರಣೆ ನಡೆಯುವ ಜುಲೈ 10ರೊಳಗೆ ಮಲ್ಯರಿಗೆ ಸೇರಿದ ಸ್ವತ್ತುಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಬೆಂಗಳೂರು ಪೊಲೀಸರಿಗೆ ತಿಳಿಸಿದೆ.
ಈ ಸಂಬಂಧ ಹಿಂದೆ ನೀಡಲಾದ ಆದೇಶವನ್ನು ಜಾರಿಗೊಳಿಸಲು ಹೆಚ್ಚು ಸಮಯದ ಅಗತ್ಯವಿದೆ ಎಂದು ಕೋರಿ ಬೆಂಗಳೂರು ಪೊಲೀಸರು ಜಾರಿ ನಿರ್ದೇಶನಾಲಯ (ಇಡಿ)ಯ ವಿಶೇಷ ಸರ್ಕಾರಿ ಅಭಿಯೋಜಕ (ಪಬ್ಲಿಕ್ ಪ್ರಾಸಿಕ್ಯೂಟರ್) ಎನ್.ಕೆ. ಮಟ್ಟಾ ಮತ್ತು ಹಿರಿಯ ವಕೀಲರಾದ ಸಂವೇದನಾ ವರ್ಮಾ ಮೂಲಕ ಕೋರ್ಟ್ ಮನವಿ ಸಲ್ಲಿಸಿದ್ದರು.
ಮುಖ್ಯ ಮೆಟ್ರೊಪಾಲಿಟನ್ ದಂಡಾಧಿಕಾರಿ ದೀಪಕ್ ಶೇರಾವತ್ ಅವರು ಈ ಸಂಬಂಧ ಹೊಸ ನಿರ್ದೇಶನಗಳನ್ನು ಜಾರಿಗೊಳಿಸಿದೆ. ಬೆಂಗಳೂರಿನಲ್ಲಿ ಮಲ್ಯಗೆ ಸೇರಿದ 159 ಸ್ವತ್ತುಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ ಯಾವುದನ್ನೂ ಜಪ್ತಿ ಮಾಡಲು ಸಾಧ್ಯವಾಗಿಲ್ಲ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದರು. (ಎಂ.ಎನ್)