ಕರ್ನಾಟಕಪ್ರಮುಖ ಸುದ್ದಿ

ನ್ಯಾ. ವಿಶ್ವನಾಥ್ ಶೆಟ್ಟಿ – ನೂತನ ಲೋಕಾಯುಕ್ತ; ರಾಜ್ಯಪಾಲರ ಸಹಿ

ಬೆಂಗಳೂರು: ಲೋಕಾಯುಕ್ತ ಹುದ್ದೆಗೆ ರಾಜ್ಯ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರನ್ನು ನೇಮಕ ಮಾಡಲು ರಾಜ್ಯಪಾಲ ವಜುಭಾಯ್ ವಾಲಾ ಅವರು ಗುರುವಾರ ಒಪ್ಪಿಗೆ ನೀಡಿದ್ದಾರೆ ನೀಡಿದ್ದಾರೆ.

ಇದೇ ತಿಂಗಳ 9 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಆಯ್ಕೆ ಸಮಿತಿಯು ನ್ಯಾ. ವಿಶ್ವನಾಥ ಶೆಟ್ಟಿ ಅವರನ್ನು ಲೋಕಾಯುಕ್ತರಾಗಿ ನೇಮಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು.

ಆದರೆ ಸಮಾಜ ಪರಿವರ್ನಾತನಾ ಸಮುದಾಯದ ಆರ್.ಎಸ್. ಹಿರೇಮಠ ಅವರು, ಲೋಕಾಯುಕ್ತ ಹುದ್ದೆಗೆ ಶೆಟ್ಟಿ ಅವರನ್ನು ನೇಮಿಸದಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದರು. ನ್ಯಾ.ವಿಶ್ವನಾಥ ಶೆಟ್ಟಿ ಮತ್ತು ಅವರ ಕುಟುಂಬ ಸದಸ್ಯರು ನಿಯಮ ಉಲ್ಲಂಘಿಸಿ 3 ವಸತಿ ನಿವೇಶನ, ಏಳು ಎಕರೆ ಕೃಷಿ ಭೂಮಿ ಖರೀದಿಸಿದ್ದಾರೆ ಎಂದು ಹಿರೇಮಠ್ ಆರೋಪಿಸಿ ಮನವಿ ಸಲ್ಲಿಸಿದ್ದರು.

ಹೀಗಾಗಿ ರಾಜ್ಯಪಾಲರು ಶೆಟ್ಟಿ ಅವರ ಹೆಸರಿಗೆ ಒಪ್ಪಿಗೆ ನೀಡದೆ ಅವರ ಹಿನ್ನೆಲೆಯನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಸೂಚಿಸಿದ್ದರು. ರಾಜ್ಯಪಾಲರಿಗೆ ಶುಭಾಶಯ ತಿಳಿಸಿಲು ರಾಜಭವನಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ್ಯಾ. ಶೆಟ್ಟಿ ಅವರ ಕುರಿತು ಮನವರಿಕೆ ಮಾಡಿಕೊಟ್ಟರು.

ನ್ಯಾ.ಶೆಟ್ಟಿ ಅವರು ಸರ್ಕಾರದಿಂದ ಪಡೆದಿರುವ ಮತ್ತು ಖರೀದಿಸಿರುವ ನಿವೇಶನಗಳು ಅಕ್ರಮ ವ್ಯವಹಾರ ಎಂದು ಯಾವುದೇ ತನಿಖೆ ಅಥವಾ ಕೋರ್ಟ್‍ ತೀರ್ಪಿನಲ್ಲಿ ಉಲ್ಲೇಖವಿಲ್ಲ. ಹೀಗಿರುವಾಗ ಅವರ ಮೇಲಿರುವ ಆರೋಪಗಳು ನಿರಾಧಾರ ಎಂಬುದು ಮುಖ್ಯಮಂತ್ರಿಗಳು ನೀಡಿದ ವಿವರಣೆಯಾಗಿತ್ತು.

ಈ ವಿವರಣೆಯನ್ನು ಒಪ್ಪಿದ ರಾಜ್ಯಪಾಲರು ಲೋಕಾಯುಕ್ತರ ನೇಮಕಕ್ಕೆ ಅಂಕಿತ ಹಾಕಿದ್ದಾರೆ.

ಈ ಮೊದಲು ಲೋಕಾಯುಕ್ತರಾಗಿದ್ದ ಭಾಸ್ಕರ ರಾವ್‍ ಅವರು ಅಕ್ರಮದಲ್ಲಿ ಭಾಗಿಯಾದ್ದ ಆರೋಪದ ಮೇಲೆ ಹುದ್ದೆ ತ್ಯಜಿಸಿದ್ದರಿಂದಾಗಿ ಲೋಕಾಯುಕ್ತ ಹುದ್ದೆ ಖಾಲಿ ಉಳಿದಿತ್ತು. ನ್ಯಾ.ಎಸ್.ಆರ್.ನಾಯಕ್ ಅವರ ಹೆಸರನ್ನೂ ರಾಜ್ಯಪಾಲರು ಮೂರು ಬಾರಿ ವಾಪಸು ಕಳಿಸಿದ್ದರು.

Leave a Reply

comments

Related Articles

error: